ಈಶ್ವರಮಂಗಲ ಪೇಟೆಯಲ್ಲಿರುವ ಮೆ| ಸಂದೀಪ್ ಉಣ್ಣಿಕೃಷ್ಣನ್ ವೃತ್ತವನ್ನು ಇನ್ನು ಮುಂದೆ ಬ್ಯಾನರ್, ಬಂಟಿಂಗ್ಸ್‌ಗಳಿಂದ ಶೃಂಗರಿಸುವಂತಿಲ್ಲ

0

ನೆ.ಮುಡ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ತೀರ್ಮಾನ

ಪುತ್ತೂರು: ನೆ.ಮುಡ್ನೂರು ಗ್ರಾ.ಪಂ ವ್ಯಾಪ್ತಿಯ ಈಶ್ವರಮಂಗಲ ಪೇಟೆಯಲ್ಲಿರುವ ಮೆ| ಸಂದೀಪ್ ಉಣ್ಣಿಕೃಷ್ಣನ್ ವೃತ್ತದಲ್ಲಿ ಬ್ಯಾನರ್, ಬಂಟಿಗ್ಸ್ ಕಟ್ಟುವುದು ಮತ್ತು ಅಲಂಕಾರ ಮಾಡುವ ವಿಚಾರದಲ್ಲಿ ಗಂಭೀರ ಚರ್ಚೆ ನಡೆದು ಕೊನೆಗೆ ಒಮ್ಮತದ ತೀರ್ಮಾನ ತೆಗೆದುಕೊಂಡ ವಿಚಾರ ನೆ.ಮುಡ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಸಭೆ ಅ.19 ರಂದು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.

ಸದಸ್ಯ ರಾಮ ಮೇನಾಲ ಮಾತನಾಡಿ ಈಶ್ವರಮಂಗಲ ಪೇಟೆಯಲ್ಲಿರುವ ವೃತ್ತದಲ್ಲಿ ಯಾವುದೇ ಕಾರ್ಯಕ್ರಮದ ಬ್ಯಾನರ್, ಬಂಟಿಂಗ್ಸ್, ಅಲಂಕಾರಕ್ಕೆ ಅವಕಾಶ ಕೊಡಬಾರದು. ಇತ್ತೀಚೆಗೆ ಎರಡು ಸಮುದಾಯಗಳ ಹಬ್ಬದ ಸಂದರ್ಭದಲ್ಲಿ ಆ ವೃತ್ತವನ್ನು ಅಲಂಕರಿಸಲಾಗುತ್ತಿದ್ದು ಅದು ವಿವಾದಕ್ಕೂ ಕಾರಣವಾಗುತ್ತಿದೆ. ಆ ವೃತ್ತದಲ್ಲಿ ಏನೂ ಅಳವಡಿಸಬಾರದು ಎನ್ನುವ ನಿರ್ಣಯವನ್ನೂ ಈ ಹಿಂದೆ ಮಾಡಿದೆ. ಹಾಗಾಗಿ ಮುಂದಕ್ಕೆ ಇದನ್ನು ಕಟ್ಟು ನಿಟ್ಟಾಗಿ ಪಾಲಿಸಿಕೊಂಡು ಬರಬೇಕು ಎಂದು ಅವರು ಆಗ್ರಹಿಸಿದರು.

ಪಿಡಿಓ ಸಂದೇಶ್ ಮಾತನಾಡಿ ಆ ಸರ್ಕಲ್‌ನಲ್ಲಿ ಏನನ್ನೂ ಅಳವಡಿಸಬಾರದು ಎನ್ನುವ ನಿರ್ಣಯವಿದೆ. ಎರಡು ಸಮುದಾಯಗಳ ಕಾರ್ಯಕ್ರಮಗಳ ಸಂದರ್ಭದಲ್ಲಿ ಸರ್ಕಲ್‌ನ್ನು ಅಲಂಕರಿಸುತ್ತಾರೆ. ಈ ಬಗ್ಗೆ ನಾವು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದೇವೆ ಎಂದು ಹೇಳಿದರು.

ಸದಸ್ಯ ಚಂದ್ರಹಾಸ ಮಾತನಾಡಿ ಈಶ್ವರಮಂಗಲ ವೃತ್ತಕ್ಕೆ ಆಯಾ ಧರ್ಮದವರ ಹಬ್ಬದ ಸಂದರ್ಭದಲ್ಲಿ ಅಲಂಕಾರ ಮಾಡುವುದು ಸಾಮಾನ್ಯ. ಅದು ಹಾಗೆಯೇ ಮುಂದುವರಿಯಲಿ ಎಂದು ಹೇಳಿದರು.
ಕಾರ್ಯಕ್ರಮಗಳ ಸಂದರ್ಭದಲ್ಲಿ ವೃತ್ತವನ್ನು ಅಲಂಕರಿಸುವುದು ಆಯಾ ಕಾರ್ಯಕ್ರಮವನ್ನು ತೋರಿಸುವ ನಿಶಾನೆಯಾಗಿದೆ ಎಂದು ಸದಸ್ಯ ಸಂಶುದ್ದೀನ್ ಹೇಳಿದರು.

ಅಧ್ಯಕ್ಷ ರಮೇಶ್ ರೈ ಸಾಂತ್ಯ ಉತ್ತರಿಸಿ ಧರ್ಮಗಳ ಹಬ್ಬಕ್ಕೆ ಹಾಕುವ ಬ್ಯಾನರ್, ಬಂಟಿಗ್ಸ್, ಅಲಂಕಾರಗಳು ನಂತರ ವಿವಾದಕ್ಕೆ ಕಾರಣವಾಗುತ್ತದೆ. ಇತ್ತೀಚೆಗೆ ಎರಡೂ ಧರ್ಮದವರು ಆಯಾ ಸಂದರ್ಭದಲ್ಲಿ ವೃತ್ತವನ್ನು ಅಲಂಕರಿಸಿದ್ದು ಒಂದು ಸಮುದಾಯದವರು ಅಲಂಕರಿಸಿದ್ದು ವಿವಾದವಾಗಿತ್ತು. ಹಾಗಾಗಿ ಮುಂದಕ್ಕೆ ವೃತ್ತದಲ್ಲಿ ಏನನ್ನೂ ಅಳವಡಿಸುವುದಕ್ಕೆ ಯಾರಿಗೂ ಅವಕಾಶ ನೀಡದಿರುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಎಂದು ಹೇಳಿದರು. ಅಲ್ಲದೇ ಇತರ ಕಡೆಗಳಲ್ಲಿ ಹಾಕುವ ಬ್ಯಾನರ್, ಫ್ಲೆಕ್ಸ್‌ಗಳಿಗೆ ದೊಡ್ಡ ಮೊತ್ತದ ರಶೀದಿ ಮಾಡಿ ಕಟ್ಟು ನಿಟ್ಟಿನ ಆದೇಶದ ಮೂಲಕ ಗ್ರಾ.ಪಂನಿಂದ ಪರ್ಮಿಷನ್ ನೀಡಲಾಗುವುದು ಎಂದು ಹೇಳಿದರು.

ಚಂದ್ರಹಾಸ ಮಾತನಾಡಿ ಕಟ್ಟುನಿಟ್ಟಿನ ಕ್ರಮ ಯಾವುದೂ ಇಲ್ಲಿ ನಡೆಯುತ್ತಿಲ್ಲ. ನಮ್ಮ ಗ್ರಾ.ಪಂ ಬಾಡಿ ವೀಕ್ ಆಗಿದೆ. ಸ್ಟ್ರಿಕ್ಟ್ ಇಲ್ಲ. ಎಲ್ಲದಕ್ಕೂ ಅದುವೇ ಕಾರಣ ಎಂದು ಹೇಳಿದರು.

ಪಿಡಿಓ ಸಂದೇಶ್ ಮಾತನಾಡಿ ಬ್ಯಾನರ್ ಪರ್ಮಿಷನ್‌ಗೆ ಗ್ರಾಮಸ್ಥರ ಜೊತೆ ಗ್ರಾ.ಪಂ ಸದಸ್ಯರು ಕೂಡಾ ಬರ್‍ತಾರೆ, ಆದರೆ ಬ್ಯಾನರ್ ಹಾಕಿದವರು ತೆಗೆಯದೇ ಇದ್ದಾಗ ಅದನ್ನು ತೆಗೆಸುವ ಗೋಜಿಗೆ ಸದಸ್ಯರು ಹೋಗುವುದಿಲ್ಲ ಎಂದು ಹೇಳಿದರು.
ಸದಸ್ಯ ಇಬ್ರಾಹಿಂ ಮಾತನಾಡಿ ಗ್ರಾ.ಪಂ ಸದಸ್ಯರಾದ ನಾವು ಒಮ್ಮತದ ತೀರ್ಮಾನ ತೆಗೆದುಕೊಂಡರೆ ಯಾವ ಸಮಸ್ಯೆಯೂ ಉದ್ಭವವಾಗುವುದಿಲ್ಲ. ಪೊಲೀಸರು ಕೂಡಾ ಅದನ್ನೇ ಹೇಳಿದ್ದಾರೆ. ಹೊರಗಿನಿಂದ ಬರುವವರು ಇಲ್ಲಿ ಏನಾದರೂ ಅನಾಹುತ ಹೆಚ್ಚಾಗಿ ಮಾಡುತ್ತಿದ್ದು ಅದಕ್ಕೆ ನಾವು ಒಗ್ಗಟ್ಟಿನಲ್ಲಿ ಒಮ್ಮತದಿಂದ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ನಂತರ ಮತ್ತೆ ವೃತ್ತದ ಬಗ್ಗೆಯೇ ಚರ್ಚೆ ಮುಂದುವರಿಯಿತು. ಎಲ್ಲ ಸಮುದಾಯದವರು ಅವರವರ ಧರ್ಮದ ಹಬ್ಬದ ಸಂದರ್ಭ ವೃತ್ತ ಅಲಂಕರಿಸುವಂತಾಗಲಿ ಎನ್ನುವ ಅಭಿಪ್ರಾಯವೂ ವ್ಯಕ್ತಗೊಂಡಿತು. ಈ ವೇಳೆ ಗ್ರಾ.ಪಂ ಉಪಾಧ್ಯಕ್ಷೆ ಫೌಝಿಯಾ ಮಾತನಾಡಿ ಎರಡೂ ಸಮುದಾಯಗಳ ಹಬ್ಬ ಒಟ್ಟಿಗೆ ಬಂದರೆ ಏನು ಮಾಡುವುದು ಎಂದು ಕೇಳಿದರು. ಸೌಹಾರ್ದತೆಯಿಂದ ವೃತ್ತ ಅಲಂಕರಿಸುವ ಎಂದು ಚಂದ್ರಹಾಸ ಹೇಳಿದರು.

 

ನಂತರ ಈಶ್ವರಮಂಗಲ ಹೊರಠಾಣಾ ಎಎಸ್ಸೈ ಸುರೇಶ್ ರೈ ಯವರನ್ನು ಸಭೆಗೆ ಕರೆಸಲಾಯಿತು. ಈಶ್ವರಮಂಗಲ ವೃತ್ತದಲ್ಲಿ ಬ್ಯಾನರ್ ಹಾಕುವ ವಿಚಾರಗಳ ಬಗ್ಗೆ ಗ್ರಾ.ಪಂ ಅಧ್ಯಕ್ಷರು ವಿಚಾರ ಪ್ರಸ್ತಾಪಿಸಿದರು. ಎಸ್ಸೈ ಸುರೇಶ್ ರೈ ಮಾತನಾಡಿ ಯಾವುದೇ ಕಾರ್ಯಕ್ರಮ ಆಯೋಜಿಸುವಾಗ ವೃತ್ತವನ್ನು ಬಿಟ್ಟು ಬ್ಯಾನರ್ ಬಂಟಿಂಗ್ಸ್ ಅಳವಡಿಸಿದರೆ ಯಾವುದೇ ಸಮಸ್ಯೆ ಸೃಷ್ಟಿಯಾಗುವುದಿಲ್ಲ ಎಂದು ಹೇಳಿದರು. ಬ್ಯಾನರ್ ಪರ್ಮಿಷನ್‌ಗೆ ಬರುವವರನ್ನೇ ಜವಾಬ್ದಾರರನ್ನಾಗಿ ಮಾಡಬೇಕು ಎಂದು ಸದಸ್ಯರು ಹೇಳಿದರು. ವೃತ್ತಕ್ಕೆ ಪೈಂಟ್ ಬಳಿಯುವುದನ್ನೂ ಗ್ರಾ.ಪಂ.ನಿಂದಲೇ ಮಾಡಬೇಕು ಎಂದು ಸಂಶುದ್ದೀನ್ ಹೇಳಿದರು. ನಂತರ ಈ ಬಗ್ಗೆ ಚರ್ಚೆ ನಡೆಯಿತು. ಮುಂದಕ್ಕೆ ಗ್ರಾ.ಪಂನಿಂದಲೇ ವೃತ್ತಕ್ಕೆ ಬಣ್ಣ ಬಳಿಯುವುದಾಗಿ ತೀರ್ಮಾನಿಸಲಾಯಿತು. ವೃತ್ತಕ್ಕೆ ರಾಷ್ಟ್ರಧ್ವಜದ ಬಣ್ಣ ಬಳಿಯಬೇಕೆಂದು ಇಬ್ರಾಹಿಂ ಹೇಳಿದರು. ಎಲ್ಲ ವಿಚಾರಗಳಲ್ಲೂ ಖಡಕ್ ರೂಲ್ಸ್ ಮಾಡಿ ಎಂದು ರಾಮ ಮೇನಾಲ ಹೇಳಿದರು.

ಚಂದ್ರಹಾಸ ಮಾತನಾಡಿ ವೃತ್ತಕ್ಕೆ ಊರಿನ ಹಬ್ಬದ ಸಂದರ್ಭದಲ್ಲಿ ಬ್ಯಾನರ್ ಹಾಕುವಂತೆ ಮತ್ತು ಅಲಂಕರಿಸುವಂತೆ ಅವಕಾಶ ಇರಲಿ. ಇದು ನನ್ನ ಅಭಿಪ್ರಾಯ. ಆದರೆ ಇಲ್ಲಿ ತೆಗೆದುಕೊಳ್ಳುವ ತೀರ್ಮಾನವನ್ನು ನಾನು ಗೌರವಿಸುತ್ತೇನೆ ಎಂದು ಹೇಳಿದರು.
ಎಲ್ಲ ವಿಚಾರಗಳ ಅಭಿಪ್ರಾಯ ಪರ ವಿರೋಧ ಚರ್ಚೆಯ ಬಳಿಕ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಯಿತು. ಮುಂದಿನ ದಿನಗಳಲ್ಲಿ ಈಶ್ವರಮಂಗಲ ಪೇಟೆಯಲ್ಲಿರುವ ವೃತ್ತಕ್ಕೆ ಯಾವುದೇ ಬ್ಯಾನರ್, ಬಂಟಿಂಗ್ಸ್ ಅಳವಡಿಸುವುದಾಗಲೀ, ಅಲಂಕಾರ ಮಾಡುವುದಕ್ಕಾಗಲೀ ಅವಕಾಶವಿಲ್ಲ. ಗ್ರಾ.ಪಂ ವ್ಯಾಪ್ತಿಯಲ್ಲಿರುವ ಅನಧಿಕೃತ ಹಾಗೂ ಅವಧಿ ಮೀರಿದ ಬ್ಯಾನರ್‌ಗಳನ್ನು ಕೂಡಲೇ ತೆರವುಗೊಳಿಸುವುದು ಎಂದು ನಿರ್ಣಯ ಕೈಗೊಳ್ಳಲಾಯಿತು.

ಹೆಲ್ಮೆಟ್ ಹಾಕದೇ ಬೈಕ್ ಚಲಾಯಿಸುವ ವಿದ್ಯಾರ್ಥಿಗಳು..!
ಸಂಜೆ ಹೊತ್ತಲ್ಲಿ ಅನೇಕ ವಿದ್ಯಾರ್ಥಿಗಳು ಹೆಲ್ಮೆಟ್ ಹಾಕದೇ ಬೈಕ್ ಚಲಾಯಿಸುತ್ತಾರೆ. ಅವರಲ್ಲಿ ಲೈಸೆನ್ಸ್ ಕೂಡಾ ಇಲ್ಲ. ಅಂತಹ ವಿದ್ಯಾರ್ಥಿಗಳ ಬೈಕ್‌ನ್ನು ನಿಲ್ಲಿಸಿ ದಂಡ ವಿಧಿಸಿ, ಎಚ್ಚರಿಕೆ ನೀಡಬೇಕೆಂದು ಸದಸ್ಯ ಚಂದ್ರಹಾಸರವರು ಎಎಸ್ಸೈ ಅವರಲ್ಲಿ ಮನವಿ ಮಾಡಿದರು.ಎಎಸ್ಸೈ ಸುರೇಶ್ ಉತ್ತರಿಸಿ ವಿದ್ಯಾರ್ಥಿಗಳು ನಮ್ಮನ್ನು ನೋಡಿ ದೂರದಿಂದಲೇ ಬೈಕ್ ತಿರುಗಿಸಿ ಹೋಗುತ್ತಾರೆ. ಅವರನ್ನು ನಿಲ್ಲಿಸುವಾಗಲೂ ವೇಗವಾಗಿ ಬಂದು ಏನಾದರೂ ಅಪಾಯ ಆದರೆ ಎನ್ನುವ ಕಾರಣದಿಂದ ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ಕ್ರಮ ಕೈಗೊಂಡಿಲ್ಲ ಎಂದರು. ಓವರ್‌ಲೋಡ್ ಆಗಿ ಹೋಗುವ ಲಾರಿಗಳಿಗೆ ದಂಡ ವಿಧಿಸುವಂತೆ ಚಂದ್ರಹಾಸ ಆಗ್ರಹಿಸಿದರು. ಸದಸ್ಯ ಪ್ರದೀಪ್ ಧ್ವನಿಗೂಡಿಸಿದರು.

ಗ್ರಾ.ಪಂ ಕಾರ್ಯಕ್ರಮಕ್ಕೆ ಬಿಜೆಪಿ ಹೆಸರು-ಆಕ್ಷೇಪ
ಮೈರೋಲ್ ಸಾರ್ವಜನಿಕ ರುದ್ರ ಭೂಮಿಗೆ ತಾತ್ಕಾಲಿಕ ಶೆಡ್ಡು ಹಾಗೂ ಶವ ಪೆಟ್ಟಿಗೆ ಪಂಚಾಯತ್ ನೀಡಿದ್ದು ಅದನ್ನು ಬಿಜೆಪಿ ನೀಡಿದ್ದು ಎಂಬಂತೆ ಬಿಂಬಿಸಿ ಬ್ಯಾನರ್, ಪೋಸ್ಟರ್‌ಗಳು ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಸರಿಯಲ್ಲ ಎಂದು ಅಧ್ಯಕ್ಷ ರಮೇಶ್ ರೈ ಸಾಂತ್ಯ ಹೇಳಿದರು. ಆ ರೀತಿ ಅಪಪ್ರಚಾರ ಮಾಡುವುದು ತಪ್ಪು ಕಾರ್ಯಕ್ರಮ ಮುಂದೂಡಿಕೆ ಮಾಡಿ ಎಂದು ಸದಸ್ಯ ಇಬ್ರಾಹಿಂ ಹೇಳಿದರು. ಸಂಶುದ್ದೀನ್, ರಾಮ ಮೇನಾಲ ಧ್ವನಿಗೂಡಿಸಿದರು. ಸದಸ್ಯ ಪ್ರದೀಪ್ ಕುಮಾರ್ ಮಾತನಾಡಿ ಆ ರೀತಿಯ ಬ್ಯಾನರ್ ಹಾಕಿದ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು. ಸದಸ್ಯ ಚಂದ್ರಹಾಸ ಮಾತನಾಡಿ ಗ್ರಾ.ಪಂ ಕಾರ್ಯಕ್ರಮವನ್ನು ಬೇರೆ ರಿತಿಯಲ್ಲಿ ಪ್ರಚಾರಪಡಿಸುವುದು ಸರಿಯಲ್ಲ, ಇದಕ್ಕೆ ನಮ್ಮ ಸಹಮತವಿಲ್ಲ ಎಂದು ಹೇಳಿದರು. ನಂತರ ಕೆಲ ಕಾಲ ಇದೇ ವಿಚಾರದಲ್ಲಿ ಚರ್ಚೆ ಮುಂದುವರಿಯಿತು.
ಸಭೆಯಲ್ಲಿ ಸದಸ್ಯರಾದ ಶ್ರೀರಾಮ್ ಪಕ್ಕಳ, ಕುಮಾರನಾಥ, ಮಹಮ್ಮದ್ ರಿಯಾಝ್, ಪ್ರಫುಲ್ಲ ರೈ, ವೆಂಕಪ್ಪ ನಾಯ್ಕ, ಲಲಿತಾ ಸುಧಾಕರ, ಲಲಿತಾ, ಇಂದಿರಾ, ಚಂದ್ರಹಾಸ ಎಂ, ಶಶಿಕಲಾ ರೈ, ಸವಿತಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಶಾರದಾ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳಾದ ಶೀನಪ್ಪ ಹಾಗೂ ಚಂದ್ರಶೇಖರ ಸಹಕರಿಸಿದರು.

LEAVE A REPLY

Please enter your comment!
Please enter your name here