ಪುಣ್ಚತ್ತಾರು ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ‘ದಶಮ ಪರ್ವ’

0

ಪ್ರೊ|ವಾಲಿಬಾಲ್ ಪಂದ್ಯಾಟ, ಸಾಧಕರಿಗೆ ಸನ್ಮಾನ, ಅಶಕ್ತ ಬಡ ಕುಟುಂಬಗಳಿಗೆ ಧನ ಸಹಾಯ

  • ಅಗತ್ಯವಿರುವವರಿಗೆ ಸಹಕಾರ ನೀಡಿದಾಗ ಜೀವನ ಪರ್ಯಂತ ನೆನಪು ಉಳಿಯುತ್ತದೆ-ಕುಮಾರ್ ಚಂದ್ರ
  • ಶಾಂತಿಯುತ ಶಿಸ್ತನ್ನು ಕಾಪಾಡಿಕೊಳ್ಳುವಂತಹ ಸಮಾಜ ಬೆಳೆಯಬೇಕು-ಮೋಹನ ಗೌಡ ಇಡ್ಯಡ್ಕ
  • ಕ್ಲಬ್‌ನ ಕೆಲಸ ಕಾರ್ಯಗಳು ದೇವರು ಮೆಚ್ಚುವಂತದ್ದು-ಸೀತಾರಾಮ ರೈ ಸವಣೂರು
  • ಯುವಕರು ದೇಶದ ಭವಿಷ್ಯದ ರೂವಾರಿಗಳು-ಡಾ.ಎಂ.ಕೆ.ಪ್ರಸಾದ್

ಕಾಣಿಯೂರು:ಅಗತ್ಯ ಇರುವವರಿಗೆ ಸಹಕಾರ ನೀಡಿದಲ್ಲಿ ಜೀವನ ಪರ್ಯಂತ ಅದರ ನೆನಪು ಉಳಿಯುತ್ತದೆ. ಸಮಾಜದಲ್ಲಿನ ದುಃಖಿತರನ್ನು ಗುರುತಿಸುವ ಕೆಲಸವನ್ನು ಮಾಡಿರುವ ಸಂಘಟನೆಯ ಈ ಆಯೋಜನೆಯು ಮನಸ್ಸಿಗೆ ನಾಟುವಂತಹ ಅದ್ದೂರಿ ಕಾರ್ಯಕ್ರಮ.ಮನುಷ್ಯ ಪರೋಪಕಾರಿಯಾಗಿ ಬದುಕಿದರೆ ಆತನ ಹೆಸರು ಸಮಾಜದಲ್ಲಿ ಶಾಶ್ವತವಾಗಿ ಉಳಿದು ಜನರು ಸದಾಕಾಲ ಸ್ಮರಿಸುತ್ತಾರೆ.ಇನ್ನೊಬ್ಬರ ಬಗ್ಗೆ ಕಷ್ಟ, ಕರುಣೆ, ಪ್ರೀತಿಯನ್ನು ತೋರುವುದರ ಮುಖಾಂತರ ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಹೆಮ್ಮರವಾಗಿ ಬೆಳೆದಿದೆ ಎಂದು ದ.ಕ.ಜಿಲ್ಲಾ ಹೆಚ್ಚುವರಿ ಪೊಲೀಸ್ ಅಽಕ್ಷಕ ಕುಮಾರ್‌ಚಂದ್ರ ಹೇಳಿದರು.

ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಇದರ ದಶಮಾನೋತ್ಸವ ‘ದಶಮ ಪರ್ವ’ ಮತ್ತು ದೀಪಾವಳಿ ಪ್ರಯುಕ್ತ ಅ.24ರಂದು ನಡೆದ ಆಯ್ದ ಸ್ಥಳೀಯ ಆಟಗಾರರ ನಿಗದಿತ ಹತ್ತು ತಂಡಗಳ ಪ್ರೊ| ವಾಲಿಬಾಲ್ ಪಂದ್ಯಾಟ, ಆಹ್ವಾನಿತ ತಂಡಗಳ ತ್ರೋಬಾಲ್ ಪಂದ್ಯಾಟ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮತ್ತು ಅಶಕ್ತ ಬಡ ಕುಟುಂಬಗಳಿಗೆ ಧನ ಸಹಾಯ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು. ದಕ್ಷಿಣ ಕನ್ನಡ ಹೆಚ್ಚಾಗಿ ವಿದ್ಯಾಕ್ಷೇತ್ರದಲ್ಲಿ ಮುಂದೆ ಇರುವ ಜಿಲ್ಲೆ. ಆದರೆ ಉನ್ನತ ಹುದ್ದೆಯನ್ನು ಅಲಂಕರಿಸುವವರು ಬೆರಳಣಿಕೆಯಷ್ಟು ಜನರು ಮಾತ್ರ. ಹಿಂದಿನ ಕಾಲದಲ್ಲಿ ವಿದ್ಯಾಭ್ಯಾಸಕ್ಕೆ ಕಷ್ಟದ ಸನ್ನಿವೇಶ ಇತ್ತು.ಆದರೆ ಈಗ ಎಲ್ಲಾ ಸವಲತ್ತುಗಳು ಇದ್ದರೂ ಹೆಚ್ಚಾಗಿ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದುರಂತ ಎಂದು ಹೇಳಿದ ಕುಮಾರಚಂದ್ರ ಅವರು, ನಮ್ಮಲ್ಲಿ ನಿರ್ದಿಷ್ಟವಾದ ಗುರಿಯಿರಬೇಕು. ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕು. ಜೀವನದಲ್ಲಿ ನಿರ್ದಿಷ್ಟವಾದ ಗುರಿಯಿಲ್ಲದಿದ್ದರೆ ನಾವು ಎರಡು ದೋಣಿಗೆ ಕಾಲಿಟ್ಟ ಹಾಗೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುಣ್ಚತ್ತಾರು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಗೌರವಾಧ್ಯಕ್ಷ, ನ್ಯಾಯವಾದಿ ಮೋಹನ್ ಗೌಡ ಇಡ್ಯಡ್ಕರವರು, ಇನ್ನೊಬ್ಬರ ಕಣ್ಣೀರನ್ನು ಒರೆಸುವಂತಹ ಕೆಲಸ ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನಿಂದ ಆಗುತ್ತಿರುವುದು ಸಂತೋಷದ ವಿಚಾರ ಎಂದರು.ಶಾಂತಿಯುತವಾಗಿ ಶಿಸ್ತನ್ನು ಕಾಪಾಡಿಕೊಳ್ಳುವಂತಹ ನಮ್ಮ ಸಮಾಜ ಬೆಳೆಯಬೇಕು.ಎಲ್ಲ ಜನರ ಸ್ಪೂರ್ತಿ,ಸಹಾಯದಿಂದ ಕ್ಲಬ್ ಹೆಮ್ಮರವಾಗಿ ಬೆಳೆಯುತ್ತಿದೆ ಎಂದವರು ಹೇಳಿದರು.

‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತ ಸವಣೂರು ಸೀತಾರಾಮ ರೈ ಮಾತನಾಡಿ, ಸಂಘಟನೆಗಳಿಂದ ಸಮಾಜಮುಖಿ ಕೆಲಸಗಳು ನಡೆದಾಗ ಅಂತಹ ಸಂಘಟನೆಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ.ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಕೆಲಸ ಕಾರ್ಯಗಳು ದೇವರು ಮೆಚ್ಚುವಂತದ್ದು.ನಮ್ಮ ಹಿರಿಯರನ್ನು ಗೌರವಿಸುವುದರ ಜೊತೆಗೆ ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ ಎಂದರು.

ಐಎಂಎ ಡಾಕ್ಟರ‍್ಸ್ ಡೇ ಪ್ರಶಸ್ತಿ ಪುರಸ್ಕೃತರಾಗಿರುವ ಆದರ್ಶ ಆಸ್ಪತ್ರೆಯ ಜನಪ್ರಿಯ ಸರ್ಜನ್ ಡಾ.ಎಂ.ಕೆ.ಪ್ರಸಾದ್ ಮಾತನಾಡಿ ಯುವಜನತೆ ದೇಶದ ಶಕ್ತಿ, ಯುವಕರು ದೇಶದ ಭವಿಷ್ಯದ ರೂವಾರಿಗಳು.ಸಮಾಜ ಅಭಿವೃದ್ಧಿಯ ಪಥದತ್ತ ಹೆಜ್ಜೆಯಿಡಬೇಕಾದರೆ ಇಂತಹ ಸಂಘಟನೆಗಳ ಪಾತ್ರವು ಮುಖ್ಯವಾಗಿರುತ್ತದೆ. ನಮ್ಮೊಳಗೆ ಜಾತಿ ವೈಷಮ್ಯ ಇರಬಾರದು, ನಾವು ಭಾರತೀಯರು. ನಮ್ಮ ದೇಶವನ್ನು ನಾವು ಪ್ರೀತಿಸಬೇಕು.ಎಲ್ಲರೂ ಒಗ್ಗಟ್ಟಾಗಿ ದೇಶಕ್ಕೋಸ್ಕರ ಶ್ರಮಿಸಬೇಕು ಎಂದರು.

ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ರೈ ಸೂಡಿಮುಳ್ಳು, ಮಂಗಳೂರು ತುಂಬೆ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ನವೀನ್ ಕುಮಾರ್ ಕೆ.ಎಸ್., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ನಾವೂರು, ಪುಣ್ಚತ್ತಾರು ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷೆ ರೇವತಿ ಮೂಡೈಮಜಲು ಶುಭಹಾರೈಸಿದರು. ಪುಣ್ಚತ್ತಾರು ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಹರೀಶ್ ಕಟೀಲ್ ಪೈಕ, ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಕ್ಲಬ್‌ನ ಸ್ಥಾಪಕಾಧ್ಯಕ್ಷ ರಾಧಾಕೃಷ್ಣ ಪೈಕ, ಕೋಶಾಧಿಕಾರಿ ಮಾಧವ ಕೆ ಕಲ್ಪಡ, ಉಪಕಾರ್ಯದರ್ಶಿ ಮಿಥುನ್ ಪೈಕ, ಕ್ರೀಡಾ ಕಾರ್ಯದರ್ಶಿ ಪ್ರಶಾಂತ್ ಪೈಕ ಉಪಸ್ಥಿತರಿದ್ದರು.ಕ್ಲಬ್‌ನ ಅಧ್ಯಕ್ಷರಾದ ಹರೀಶ್ ಕಟೀಲ್ ಪೈಕರವರು ಸ್ಮರಣಿಕೆ ನೀಡಿ ಗೌರವಿಸಿದರು.ಕ್ಲಬ್‌ನ ಸದಸ್ಯರಾದ ದಿನೇಶ್ ಮಾಳ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಶಿಕ್ಷಕ ಗಣೇಶ್ ನಡುವಾಳ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತರಾಗಿರುವ ಆದರ್ಶ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ, ಹಿರಿಯ ಸಹಕಾರಿ ಧುರೀಣ ಕೆ.ಸೀತಾರಾಮ ರೈ ಸವಣೂರು, ಐಎಂಎ ಡಾಕ್ಟರ‍್ಸ್ ಡೇ ಪ್ರಶಸ್ತಿ ಪುರಸ್ಕೃತರಾಗಿರುವ ಹಿರಿಯ ವೈದ್ಯ ಡಾ.ಎಂ.ಕೆ.ಪ್ರಸಾದ್, ಭಾರತೀಯ ಸೇನೆಯ ನಿವೃತ್ತ ಸೈನಿಕರಾದ ಪುರಂದರ ಚಾರ್ವಾಕ, ಕೊರಗಪ್ಪ ಕಲ್ಪಡ, ಶೀನಪ್ಪ ಬೆಳಂದೂರು, ಲೋಕೇಶ್ ಕಂಡೂರು, ವಾಸುದೇವ ಮುಂಡಾಳ, ಹರಿಪ್ರಸಾದ್ ಕೆಮ್ಮಾಯಿ, ಕಾರ್ಗಿಲ್ ಯುದ್ದದಲ್ಲಿ ವೀರಮರಣ ಹೊಂದಿದ ಯೋಧ ಪರಮೇಶ್ವರ ದೋಳ್ಪಾಡಿ ಕಟ್ಟರವರ ಮನೆಯವರನ್ನು ಗೌರವಿಸಲಾಯಿತು. ನಾಟಿ ವೈದ್ಯರಾದ ದಿನೇಶ್ ಮಾಳ, ನಾಗೇಶ್ ನೆಕ್ರಾಜೆ, ವಿಠಲ ಗೌಡ ಕಡೀರ, ಪುಣ್ಚತ್ತಾರು ಶ್ರೀಹರಿ ಭಜನಾ ಮಂದಿರದ ಅರ್ಚಕ ಬಾಲಪ್ಪ ಗೌಡ ಮಾಳ, ನಿವೃತ್ತ ಶಿಕ್ಷಕರಾದ ಶಿವರಾಮ ಚಾರ್ವಾಕ ಬೊಮ್ಮಳಿಗೆ, ಬಾಲಕೃಷ್ಣ ಹೇಮಳ, ಪಾರ್ವತಿ ಅಲೆಕ್ಕಾಡಿ, ವಾಲಿಬಾಲ್ ರಾಷ್ಟ್ರೀಯ ತೀರ್ಪುಗಾರ ಮೋಹಿತ್ ಯೇನೆಕಲ್ಲು,ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿರುವ ಶ್ರಾವ್ಯ ಹುದೇರಿ, ಶ್ರೀಯಾ ಹುದೇರಿ, ರಾಷ್ಟ್ರೀಯ ಖೋ ಖೋ ಆಟಗಾರ್ತಿ ದೀಕ್ಷಾ ಚಾರ್ವಾಕ, ಡಾಕ್ಟರೇಟ್ ಪದವಿ ಪಡೆದ ಕಿರಣ್ ಮುಗರಂಜ, ಹಿರಿಯ ಟೈಲರ್ ಮಾಯಿಲಪ್ಪ ಗೌಡ ಎನ್.ಟಿ ನಾವೂರು ತೋಟ, ಮೆಸ್ಕಾಂ ಇಲಾಖೆಯ ನಾರಾಯಣ ಗೌಡ ಎಡಮಂಗಲ, ವಸಂತ ಗೌಡ ಕುದ್ಕುಳಿ, ಕೆಎಸ್‌ಆರ್‌ಟಿಸಿ ನಿವೃತ್ತ ಚಾಲಕ ಮೋಂಟಣ್ಣ ಗೌಡ ಕೆಳಗಿನಮನೆ ದೋಳ್ಪಾಡಿ ಮತ್ತು ಶಿವದೂತೆ ಗುಳಿಗೆ ನಾಟಕ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಮತ್ತು ‘ಕಾಂತಾರ’ ಚಲನಚಿತ್ರದಲ್ಲಿ ನಟಿಸಿದ ಸ್ವರಾಜ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

ಪ್ರತಿಭಾ ಪುರಸ್ಕಾರ: 2021-22ನೇ ಸಾಲಿನ‌ 7ನೇ ತರಗತಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಬೊಬ್ಬೆಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ಚೈತನ್ಯ ಅಬ್ಬಡ ಹಾಗೂ 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕಾಣಿಯೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅಂಕಿತ ಉಲವ ಇವರಿಗೆ ಪ್ರತಿಭಾ ಪುರಸ್ಕಾರ ನಡೆಯಿತು.

ಪ್ರೊ| ವಾಲಿಬಾಲ್ ವಿಜೇತರ ವಿವರ: ಆಯ್ದ ಸ್ಥಳೀಯ ಆಟಗಾರರ ನಿಗದಿತ 10 ತಂಡಗಳ ಪ್ರೊ| ವಾಲಿಬಾಲ್ ಪಂದ್ಯಾಟದಲ್ಲಿ ರಜಾಕ್ ಅಂಕಜಾಲು ಮತ್ತು ರಝೀನ್ ಅಂಕಜಾಲು ಮಾಲಕತ್ವದ ಸೆವೆನ್ ಸ್ಟಾರ್ ಕಲ್ಪಣೆ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡು, ಕಿರಣ್ ಪಾಲೆತ್ತಡ್ಕ ಮಾಲಕತ್ವದ ಪುಣ್ಚತ್ತಾರು ಲಯನ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿತು.ನಝೀರ್ ದೇವಸ್ಯ ಮಾಲಕತ್ವದ ರೈಸಿಂಗ್ ಸ್ಟಾರ್ ಬೆಳಂದೂರು ತೃತೀಯ ಸ್ಥಾನ ಪಡೆದುಕೊಂಡರೆ, ನಿರಂಜನ ಬೀಜತ್ತಡ್ಕ ಹಾಗೂ ನಿತಿನ್ ಬೀಜತ್ತಡ್ಕ ಮಾಲಕತ್ವದ ರಾಕ್‌ಸ್ಟಾರ್ ಚತುರ್ಥ ಸ್ಥಾನ ಪಡೆದುಕೊಂಡಿತು.

ಸಾರ್ಥಕ ಹತ್ತು ಹೆಜ್ಜೆಗಳ ದಶಮ ಪರ್ವ

ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪುಣ್ಚತ್ತಾರು ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಸಾರ್ಥಕ ಹತ್ತು ವರ್ಷಗಳ ಹೆಜ್ಜೆಗಳನ್ನು ನೆನಪಿಸುವ ಕಾರ್ಯಕ್ರಮ ‘ದಶಮ ಪರ್ವ’ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಸನ್ಮಾನ ಮತ್ತು ಅಶಕ್ತ ಆರು ಕುಟುಂಬಗಳಿಗೆ ತಲಾ ರೂ.೧೦ ಸಾವಿರ ಧನಸಹಾಯ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಚಾರ್ವಾಕ ಶ್ರೀ ಕಪಿಲೇಶ್ವರ ಸಿಂಗಾರಿ ಮೇಳ ತಂಡದವರಿಂದ ಚೆಂಡೆ ಪ್ರದರ್ಶನ ನಡೆಯಿತು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜಯಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶನದ ಕಲಾಸಂಗಮ ಕಲಾವಿದರಿಂದ ‘ಶಿವದೂತೆ ಗುಳಿಗೆ’ ನಾಟಕ ನಡೆಯಿತು.ಕಿಕ್ಕಿರಿದ ಜನಸಾಗರ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾಯಿತು.

LEAVE A REPLY

Please enter your comment!
Please enter your name here