ರಾಮಕುಂಜ: ನಿವೃತ್ತ ಮುಖ್ಯಶಿಕ್ಷಕ, ಉಪ್ಪಿನಂಗಡಿ ಪಾದಾಳ ನಿವಾಸಿ ಕೊಯಿಲ ಶ್ರೀಧರ ರಾವ್(82ವ.)ರವರು ಅನಾರೋಗ್ಯದಿಂದ ನ.1ರಂದು ಮಧ್ಯಾಹ್ನ ನಿಧನರಾದರು.
1961ರಲ್ಲಿ ಸವಣೂರು ಮೊಗ್ರು ಸರಕಾರಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ್ದ ಶ್ರೀಧರ ರಾವ್‌ರವರು ಆ ಬಳಿಕ ರಾಮಕುಂಜ ಗ್ರಾಮದ ಕುಂಡಾಜೆ ಸರಕಾರಿ ಶಾಲೆ, ಬಳಿಕ ಕೊಯಿಲ ಸರಕಾರಿ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ 1999ರಲ್ಲಿ ನಿವೃತ್ತಿಯಾಗಿದ್ದರು. ನಿವೃತ್ತಿಯ ಬಳಿಕ ಕೊಯಿಲದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಅವರು ಕೆಲ ವರ್ಷಗಳಿಂದ ಹಿರಿಯ ಪುತ್ರನ ಜೊತೆ ಉಪ್ಪಿನಂಗಡಿ ಪಾದಾಳದಲ್ಲಿ ವಾಸ್ತವ್ಯವಿದ್ದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಧರ ರಾವ್‌ರವರು ನ.1ರಂದು ನಿಧನರಾದರು.
ಮೃತರು ಪುತ್ರರಾದ ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಹರಿಕಿರಣ್ ಕೆ., ಉಪ್ಪಿನಂಗಡಿಯಲ್ಲಿ ನೋಟರಿ ವಕೀಲರಾಗಿರುವ ರವಿಕಿರಣ್ ಕೆ., ಪುತ್ರಿಯರಾದ ಸಂಧ್ಯಾರಾಣಿ, ಉಷಾರಾಣಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಉಪ್ಪಿನಂಗಡಿ ಗ್ರಾ.ಪಂ.ಅಧ್ಯಕ್ಷೆ ಉಷಾಚಂದ್ರ ಮುಳಿಯ, ಸದಸ್ಯರಾದ ಲೋಕೇಶ್ ಬೆತ್ತೋಡಿ, ಸಣ್ಣಣ್ಣ ಮಡಿವಾಳ, ತಾ.ಪಂ.ಮಾಜಿ ಸದಸ್ಯ ಉಮೇಶ್ ಶೆಣೈ, ನಿವೃತ್ತ ಮುಖ್ಯಶಿಕ್ಷಕರಾದ ರಘುನಾಥ ರೈ, ಕುಶಾಲಪ್ಪ ಗೌಡ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕಂಗ್ವೆ ವಿಶ್ವನಾಥ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.