ಪುತ್ತೂರು: ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಅ. 31 ರಿಂದ ನ.13 ರ ವರೆಗೆ ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನದ ಮೂಲಕ ನಾಗರಿಕರ ಸಬಲೀಕರಣ ಅಭಿಯಾನವನ್ನು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ ಹಾಗು ಇತರ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಹಯೋಗದೊಂದಿಗೆ ನಡೆಸಲಾಗುವುದು. ಸಾರ್ವಜನಿಕರು ಈ ಅಭಿಯಾನದ ಪ್ರಯೋಜನ ಪಡೆಯುವಂತೆ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ಹಾಗು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾಗಿರುವ ಗೌಡ ಆರ್.ಪಿ ಅವರು ತಿಳಿಸಿದ್ದಾರೆ.
ಪುತ್ತೂರು ನ್ಯಾಯಾಲಯದ ಅವರ ಕಚೇರಿಯಲ್ಲಿ ಪತ್ರಿಕಾಮಾಧ್ಯಮದೊಂದಿಗೆ ಅವರು ಮಾತನಾಡಿ ಅಭಿಯಾನದ ಮಾಹಿತಿ ನೀಡಿದರು. ಅ.31ಕ್ಕೆ ಅಬಿಯಾನಕ್ಕೆ ಚಾಲನೆ ನೀಡಿದ್ದು, ಈಗಾಗಲೇ ಮೂರು ನಾಲ್ಕು ಕಡೆಗಳಲ್ಲಿ ಕಾರ್ಯಕ್ರಮ ನಡೆಸಲಾಗಿದೆ ಎಂದ ಅವರು 2 ವಾರಗಳ ಈ ಅಭಿಯಾನದಲ್ಲಿ ಪ್ರತಿ ಗ್ರಾಮ ಪಂಚಾಯತ್ಗಳ ಮೂಲಕ ಹಳ್ಳಿಗಳನ್ನು ತಲುಪುವ ಮತ್ತು ಪ್ರತಿ ಗ್ರಾಮದಲ್ಲೂ ಕನಿಷ್ಟ ಒಂದು ಕಾರ್ಯಕ್ರಮವನ್ನು ವಕೀಲರು, ಅರೆಕಾಲಿಕ ಕಾನೂನು ಸ್ವಯಂ ಸೇವಕರು, ಕಾನೂನು ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಪೋಲಿಸರು, ಶಿಕ್ಷಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಾಂತರ ಜಿಲ್ಲೆಯ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ತಲುಪುವ ಬಗ್ಗೆ ಜಾಗೃತಿ ಹಾಗೂ ಪ್ರಚಾರದ ಚಟುವಟಿಕೆಗಳನ್ನು ಆಯೋಜಿಸುವ ಗುರಿಯನ್ನು ಹೊಂದಲಾಗಿದೆ. ವಿದ್ಯಾರ್ಥಿಗಳಿಗೂ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನಾಗರಿಕರಿಗೆ ಕಾನೂನು ಸೇವೆಗಳ ಮಾಹಿತಿ ನೀಡುವುದು ಸೌಲಭ್ಯವನ್ನು ತಿಳಿಸುವ ಮೂಲಕ ಉದ್ದೇಶವನ್ನು ಬಲಪಡಿಸುವುದು ಮತ್ತು ಕಾನೂನು ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಪ್ರತಿ ಹಳ್ಳಿಗಳಲ್ಲಿ ದಿನಕ್ಕೆ 8 ರಿಂದ 10 ಕಾರ್ಯಕ್ರಮ ನೀಡಲಾಗುವುದು. ಪ್ರತಿ ಕಾರ್ಯಕ್ರಮದಲ್ಲಿ ನ್ಯಾಯಾಧೀಶರೊಬ್ಬರು ಇರುತ್ತಾರೆ. ಇದರ ಜೊತೆಗೆ ನ್ಯಾಯಾಲಯದ ಪ್ಯಾನಲ್ ವಕೀಲರು ಮತ್ತು ನುರಿತ ವಕೀಲರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಲಿದ್ದಾರೆ ಎಂದು ಅವರು ಹೇಳಿದರು.
35 ಮಂದಿ ವಕೀಲರ ತಂಡದಿಂದ ಮಾಹಿತಿ:
ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಅವರು ಮಾತನಾಡಿ ಕಳೆದ ವರ್ಷ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕಾನೂನು ಅರಿವು ಕುರಿತು 63 ಕಾರ್ಯಕ್ರಮ ನೀಡಿದ್ದೇವೆ. ಈ ಬಾರಿಯೂ ಕಾರ್ಯಕ್ರಮ ನೀಡಲಿದ್ದೇವೆ. ಶಿಕ್ಷಣ ಇಲಾಖೆ, ಸಿಡಿಪಿಓ ಕಚೇರಿ, ಗ್ರಾ.ಪಂಗಳ ಸಹಯೋಗ ಅಭಿಯಾನಕ್ಕಿದೆ. ಅಭಿಯಾನದ ಕಾರ್ಯಕ್ರಮಕ್ಕೆ 16 ಮಂದಿ ಪ್ಯಾನಲ್ ವಕೀಲರು ಮತ್ತು 15 ಮಂದಿ ನುರಿತ ವಕೀಲರು ಸಹಿತ ಒಟ್ಟು 35 ಮಂದಿ ವಕೀಲರ ತಂಡ ಅಭಿಯಾನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾನೂನು ಅರಿವು ಮಾಹಿತಿ ನೀಡಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ವ್ಯವಹಾರಿಕ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಹಾಗು ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿರುವ ಅರ್ಚನಾ ಕೆ. ಉಣ್ಣಿತಾನ್, 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಯೋಗೇಂದ್ರ ಶೆಟ್ಟಿ ಉಪಸ್ಥಿತರಿದ್ದರು.