‘ಯಾವುದೇ ಕಾರಣಕ್ಕೂ ಜನರನ್ನು ಸತಾಯಿಸಬಾರದು’- ಉಪವಿಭಾಗದ ಅಧಿಕಾರಿಗಳಿಗೆ ನೂತನ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಸೂಚನೆ

0

ಅಧಿಕಾರ ವಹಿಸಿಕೊಂಡ ದಿನವೇ ಪುತ್ತೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿದ ಡಿಸಿ

  • ಮೇಲಧಿಕಾರಿಗಳ ಕಚೇರಿಯಲ್ಲಿ ಸ್ಪಂದನೆ ದೊರೆಯದೇ ಇದ್ದಾಗ ನಮಗೆ ನೋವಾಗುವಂತೆ, ನೀವು ಸ್ಪಂದಿಸದಿದ್ದರೆ ಜನರಿಗೂ ನೋವಾಗುತ್ತದೆ 
  • ಅಧಿಕಾರಿಗಳು ಸಹಕಾರ, ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಿ
  • ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಬೇಕು
  • ಸಿಬ್ಬಂದಿಗಳ ಜೊತೆ ಅಪನಂಬಿಕೆಯಲ್ಲಿ ಕೆಲಸ ಬೇಡ
  • ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ
  • ಕುಡಿಯುವ ನೀರಿಗೆ ಆದ್ಯತೆ ಕೊಡಿ
  • ಪೊಲೀಸ್ ಕಾಯ್ದೆಗಳ ಅರಿವು ಮೂಡಿಸಿ

ಪುತ್ತೂರು:ಸಾರ್ವಜನಿವಾಗಿ ಕೆಲಸ ಮಾಡುವಾಗ ಎಲ್ಲಾ ಇಲಾಖೆಗಳ ಸಹಕಾರ, ಸಮನ್ವಯತೆ ಅಗತ್ಯ. ಸಹಕಾರ,ಸಮನ್ವಯತೆ ಇಲ್ಲದೆ ಕೆಲಸ ಮಾಡಲು ಸಾಧ್ಯವಿಲ್ಲ.ಇದಕ್ಕಾಗಿ ವಿವಿಧ ಇಲಾಖಾಧಿಕಾರಿಗಳು ಪರಸ್ಪರ ಸಹಕಾರ, ಸಮನ್ವಯದಿಂದ ಕರ್ತವ್ಯ ನಿರ್ವಹಿಸಿ, ಜನರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುವಂತೆ ನೂತನ ಜಿಲ್ಲಾಽಕಾರಿ ಎಂ.ಆರ್.ರವಿಕುಮಾರ್ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ದ.ಕ.ಜಿಲ್ಲಾಧಿಕಾರಿಯಾಗಿ ನ.2ರಂದು ಅಧಿಕಾರ ಸ್ವೀಕರಿಸಿದ ಅವರು ಸಂಜೆ ಪುತ್ತೂರಿಗೆ ಪ್ರಥಮ ಭೇಟಿ ನೀಡಿ, ತಾಲೂಕು ಆಡಳಿತ ಸೌಧದಲ್ಲಿರುವ ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಪುತ್ತೂರು,ಕಡಬ, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ತಾಲೂಕುವಾರು ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಅವರು ಮಾತನಾಡಿದರು. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಬೇಕು. ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಸಿದ್ದರಾಗಿರಬೇಕು. ಜನರನ್ನು ಯಾವುದೇ ಕಾರಣಕ್ಕೂ ಸತಾಯಿಸಬಾರದು. ನಮ್ಮ ಇಲಾಖಾ ಕೆಲಸಗಳಿಗೆ ಮೇಲಾಧಿಕಾರಿಗಳ ಕಚೇರಿಗೆ ತೆರಳಿದಾಗ ಅಲ್ಲಿ ಸೂಕ್ತ ಸ್ಪಂದನೆ ದೊರೆಯದೇ ಇದ್ದಾಗ ನಮಗೆ ನೋವು ಆಗುವಂತೆ, ನೀವು ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಜನ ಸಾಮಾನ್ಯರಿಗೂ ನೋವಾಗುತ್ತದೆ. ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಬೇಕು.ಸಾರ್ವಜನಿಕರ ನಿರೀಕ್ಷೆಗೆ ತಕ್ಕಂತೆ ಅಧಿಕಾರಿಗಳು ಕೆಲಸ ಮಾಡಬೇಕು.ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯದಿಂದ ಕೆಲಸ ಮಾಡಿ ನಂಬಿಕೆ, ವಿಶ್ವಾಸ ಗಳಿಸಬೇಕು. ಆಗದಿರುವ ಕೆಲಸ ಯಾವುದೂ ಇಲ್ಲ.ನಿಮ್ಮ ಹಂತದಲ್ಲಿ ಆಗದೇ ಇರುವಂತ ಕೆಲಸಗಳನ್ನು ಮೇಲಾಧಿಕಾರಿಗಳ ಹಂತದಲ್ಲಿ ಶೀಘ್ರವಾಗಿ ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಸಿಬ್ಬಂದಿಗಳ ಜೊತೆ ಅಪನಂಬಿಕೆ ಬೇಡ: ಸಿಬ್ಬಂದಿಗಳ ಜೊತೆ ಅಪನಂಬಿಕೆಯಲ್ಲಿ ಕೆಲಸ ಮಾಡಬಾರದು. ಸಿಬ್ಬಂದಿಗಳಲ್ಲಿಯೂ ನಮಗಿಂತ ಹೆಚ್ಚಿನ ಮಾಹಿತಿಗಳಿರುತ್ತದೆ.ಹೀಗಾಗಿ ಅವರೊಂದಿಗೆ ವಿಶ್ವಾಸದೊಂದಿಗೆ ಕೆಲಸ ಮಾಡಬೇಕು.ಅವರಿಂದ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳಿ.ಎಲ್ಲರೂ ಒಗ್ಗಟ್ಟಿನಿಂದ ತಂಡವಾಗಿ ಶ್ರಮವಹಿಸಿ ಕೆಲಸ ಮಾಡುವ ಮೂಲಕ ಜನರ ನಿರೀಕ್ಷೆಗಳಿಗೆ ಸ್ಪಂದಿಸಬೇಕು ಎಂದೂ ಜಿಲ್ಲಾಽಕಾರಿ ಎಂ.ಆರ್.ರವಿಕುಮಾರ್ ಸಲಹೆ ನೀಡಿದರು.

ಜನಪ್ರತಿನಿಧಿಗಳ ವಿಶ್ವಾಸ ಪಡೆದುಕೊಳ್ಳಿ: ಜನಪ್ರತಿನಿಧಿಗಳು ಜನರ ಮಧ್ಯೆಯಿರುವವರು.ಜನರ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳಿಗೆ ಬಹಳಷ್ಟು ಮಾಹಿತಿಗಳಿರುತ್ತದೆ.ಅಧಿಕಾರಿಗಳಿಗಿಂತ ಹೆಚ್ಚಿನ ಮಾಹಿತಿಯಿರುವವರು ಜನಪ್ರತಿನಿಧಿಗಳಾಗಿದ್ದು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಜನರ ಪ್ರೀತಿ, ವಿಶ್ವಾಸಗಳಿಸಬೇಕು.ಅಧಿಕಾರಿಗಳಲ್ಲಿ ಮೇಲು, ಕೀಳು ಎಂಬ ಭಾವನೆಗಳಿರಬಾರದು.ಯಾವುದೇ ಸಮಸ್ಯೆಗಳು ಬಂದಾಗ ಅದನ್ನು ಸಮಸ್ಯೆಯಾಗಿ ಪರಿಗಣಿಸದೇ ವಿಷಯವಾಗಿ ಪರಿಗಣಿಸಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ತಿಳಿಸಿದರು.

ಕೆಲಸಕ್ಕೆ ಮಾತ್ರ ಕೋವಿಡ್ ಕಾರಣವಾ?: ಕೋವಿಡ್‌ನಿಂದಾಗಿ ಕೆಲವೊಂದು ಕೆಲಸ ಕಾರ್ಯಗಳು ಬಾಕಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದಾಗ, ಕಚೇರಿ ಎಂದಿನಂತೆ ಇತ್ತು. ಓಡಾಟವೂ ಎಂದಿನಂತೇ ಇತ್ತು.ಆದರೂ ಕೆಲಸ ಕಾರ್ಯಗಳಿಗೆ ಮಾತ್ರ ಕೋವಿಡ್ ಕಾರಣವಾಗಿದ್ದಾ ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಲ್ಲಿ ಪ್ರಶ್ನಿಸಿದರು.

ಇಲಾಖಾವಾರು ಸಭೆ: ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿಯವರು, ಮುಂದಿನ ದಿನಗಳಲ್ಲಿ ಇಲಾಖಾವಾರು ಸಭೆ ಹಾಗೂ ಸಮಸ್ಯೆಗಳ ಕುರಿತು ಪ್ರತ್ಯೇಕ ಸಭೆ ನಡೆಸುವುದಾಗಿ ತಿಳಿಸಿದರು.

ಖಾಲಿ ಹುದ್ದೆಗಳ ಪಟ್ಟಿ ಕೊಡಿ: ಗ್ರಾಮಕರಣಿಕರ ಹುದ್ದೆಗಳು ಖಾಲಿಯಿರುವ ಬಗ್ಗೆ ತಹಶೀಲ್ದಾರ್‌ಗಳು ಜಿಲ್ಲಾಧಿಕಾರಿಯವರಲ್ಲಿ ತಿಳಿಸಿದಾಗ, ಕಂದಾಯ ಇಲಾಖೆಯಲ್ಲಿ ಖಾಲಿಯಿರುವ ಕಂದಾಯ ನಿರೀಕ್ಷಕರು, ಗ್ರಾಮಕರಣಿಕರು, ಗ್ರಾಮಸಹಾಯಕರ ಪಟ್ಟಿ ನೀಡುವಂತೆ ಆಯಾ ತಾಲೂಕು ತಹಶೀಲ್ದಾರ್‌ರವರುಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಕುಡಿಯುವ ನೀರಿಗೆ ಆದ್ಯತೆ ನೀಡಿ: ಜನರಿಗೆ ಅವಶ್ಯಕವಾಗಿರುವ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಆದ್ಯತೆ ನೀಡಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದರು.

ಪೊಲೀಸ್ ಕಾಯಿದೆಗಳ ಅರಿವು ಮೂಡಿಸಿ: ಕಾನೂನು ಸುವ್ಯವಸ್ಥೆಗಳ ಬಗ್ಗೆ ಡಿವೈಎಸ್‌ಪಿಯವರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ರವಿಕುಮಾರ್, ಪೊಲೀಸ್ ಕಾಯಿದೆಗಳ ಕುರಿತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಪೋಷಕರು, ಬಿಆರ್‌ಸಿ, ಸಿಆರ್‌ಪಿ, ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ, ಉಪನಿರ್ದೇಶಕರ ಸಭೆ ನಡೆಸಿ ಅರಿವು ಮೂಡಿಸಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಡಿವೈಎಸ್‌ಪಿ ಹಿರೇಮಠ್‌ರವರಿಗೆ ಸೂಚಿಸಿದರು.

ಸಭೆಗೆ ಬರುವಾಗ ಸಮರ್ಪಕ ಮಾಹಿತಿಯಿರಬೇಕು: ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ, ವಾಹನ ಖರೀದಿ, ತೆರಿಗೆ ಸಂಗ್ರಹದ ಬಗ್ಗೆ ಸುಳ್ಯ ತಾಲೂಕಿನ ಗ್ರಾ.ಪಂಗಳ ಮಾಹಿತಿಯನ್ನು ತಾ.ಪಂ.ಕಾರ್ಯನಿರ್ವಾಹಕಾಧಿಕಾರಿ ಭವಾನಿಶಂಕರ್‌ರವರಲ್ಲಿ ಕೇಳಿದಾಗ ಅವರು ನೀಡಿದ ಉತ್ತರಕ್ಕೆ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾ.ಪಂವಾರು ಹಾಗೂ ತಾಲೂಕುವಾರು ತೆರಿಗೆ ಸಂಗ್ರಹಣೆಯ ಬಗ್ಗೆ ಸ್ಪಷ್ಟ ಮಾಹಿತಿ ಕಾರ್ಯ ನಿರ್ವಾಹಕಾಧಿಕಾರಿಯವರಲ್ಲಿರಲಿಲ್ಲ. ಇದರಿಂದ ತುಸು ಗರಂ ಆದ ಜಿಲ್ಲಾಧಿಕಾರಿಯವರು, ಸಭೆಗೆ ಬರುವಾಗ ಸಮರ್ಪಕ ಮಾಹಿತಿಗಳೊಂದಿಗೆ ಹಾಜರಾಗಬೇಕು ಎಂದರಲ್ಲದೆ,ಮುಂದೆ ಸುಳ್ಯದ ಪಂಚಾಯತ್‌ಗಳಿಗೆ ಭೇಟಿ ನೀಡಿ, ತ್ಯಾಜ್ಯ ವಿಲೇವಾರಿ ಘಟಕಗಳ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಸಹಾಯಕ ಆಯಕ್ತ ಗಿರೀಶ್‌ನಂದನ್, ಪುತ್ತೂರು ತಹಶೀಲ್ದಾರ್ ನಿಸರ್ಗಪ್ರಿಯ, ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿ, ನಗರ ಸಭಾ ಪೌರಾಯುಕ್ತ ಮಧು ಎಸ್ ಮನೋಹರ್, ಕಡಬ ತಹಶೀಲ್ದಾರ್ ರಮೇಶ್ ಬಾಬು,ಸುಳ್ಯ ತಹಸಿಲ್ದಾರ್ ಅನಿತಲಕ್ಷ್ಮೀ, ಬೆಳ್ತಂಗಡಿ ತಹಶೀಲ್ದಾರ್,ತಾ.ಪಂ.ಕಾರ್ಯನಿರ್ವಾಹಕಾಧಿಕಾರಿ, ಪ.ಪಂ.ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪತ್ರ ವ್ಯವಹಾರ ಬಂದ್ ಮಾಡಿ

ನಿಮ್ಮ ಹಂತದಲ್ಲಿ ಆಗದಿರುವ ಕೆಲಸಗಳಿಗೆ ಸಂಬಂಧಿಸಿ ಮೇಲಾಧಿಕಾರಿಗಳಿಗೆ ಪತ್ರ ಬರೆದು ಸುಮ್ಮನಿರುವುದಲ್ಲ.ಅಲ್ಲಿಂದ ಉತ್ತರಕ್ಕಾಗಿ ಕಾಯುವುದಲ್ಲ.ಪತ್ರ ವ್ಯವಹಾರವನ್ನು ಬಂದ್ ಮಾಡಿ ಸಂಬಂಧಪಟ್ಟ ಇಲಾಖೆಗಳ ಮೇಲಾಧಿಕಾರಿಗಳ ಜೊತೆ ಕುಳಿತು ಸಮನ್ವಯತೆಯಿಂದ ಚರ್ಚಿಸಿ, ಸಮಸ್ಯೆಗಳನ್ನು ಪರಿಹರಿಸಿಕೊಡುವ ಪ್ರಕ್ರಿಯೆಗಳನ್ನು ಪ್ರಾರಂಭಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

LEAVE A REPLY

Please enter your comment!
Please enter your name here