ವಿಕ್ಟರ್ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ಇವಾನ್ ಮಸ್ಕರೇನ್ಹಸ್, ಲಿಲ್ಲಿ ಡಿ’ಸೋಜರವರಿಗೆ ಬೀಳ್ಕೊಡುಗೆ ಸನ್ಮಾನ

0

ಪುತ್ತೂರು: ಶಿಕ್ಷಕ ವೃತ್ತಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಅ.31 ರಂದು ನಿವೃತ್ತರಾದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಶಿಕ್ಷಕರಾದ ಇವಾನ್ ಮಸ್ಕರೇನ್ಹಸ್ ಹಾಗೂ ಲಿಲ್ಲಿ ಡಿಸೋಜರವರಿಗೆ ನಿವೃತ್ತಿಯ ಪ್ರಯುಕ್ತ ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ವಿದಾಯ ಸನ್ಮಾನ ಸಮಾರಂಭ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ವಂ| ಲಾರೆನ್ಸ್ ಮಸ್ಕರೇನ್ಹಸ್ ರವರು ಮಾತನಾಡಿ, ಇಂದು ನಿವೃತ್ತಿ ಹೊಂದುತ್ತಿರುವ ಶಿಕ್ಷಕರಾದ ಇವಾನ್ ಮಸ್ಕರೇನ್ಹಸ್ ಹಾಗೂ ಲಿಲ್ಲಿ ಡಿಸೋಜರವರ ಸೇವೆ ಅವಿಸ್ಮರಣೀಯ. ಮಕ್ಕಳ ಬಾಳಿಗೆ ಬೆಳಕಾಗಿ ಅಕ್ಷರ ಜ್ಞಾನವನ್ನು ನೀಡಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ ಶಿಕ್ಷಕರಿಗೆ ಭಗವಂತನು ಆಯುರಾರೋಗ್ಯ, ಮನಸ್ಸಿನ ಸುಖ ಶಾಂತಿಯನ್ನು ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದು ಕಥೋಲಿಕ್ ಶಿಕ್ಷಣ ಮಂಡಳಿಯ ಪರವಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಮೌರಿಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಶಿಕ್ಷಕರಾದ ಇವಾನ್ ಮಸ್ಕರೇನ್ಹಸ್ ಹಾಗೂ ಲಿಲ್ಲಿ ಡಿಸೋಜ ಸುದೀರ್ಘ ಅವಧಿಯ ಸೇವೆಯನ್ನು ಸಲ್ಲಿಸಿದ ಶಿಕ್ಷಕರಾಗಿದ್ದಾರೆ. ಅವರ ಸೇವೆಗೆ ನಾವು ಚಿರಋಣಿಗಳಾಗಿದ್ದೇವೆ ಎಂದು ಹೇಳಿ ಶುಭ ಹಾರೈಸಿದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಲೀನಾ ರೇಗೊರವರು ನಿವೃತ್ತರಾದ ಶಿಕ್ಷಕರೀರ್ವರ ಸೇವೆಯನ್ನು ಸ್ಮರಿಸಿ ಅವರ ನಿವೃತ್ತ ಜೀವನಕ್ಕೆ ಶುಭಾಶಯಗಳನ್ನು ತಿಳಿಸಿದರು.

ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ನಿವೃತ್ತಿ ಹೊಂದಿದ ಶಿಕ್ಷಕರಿಗೆ ಅಭಿನಂದನಾ ಗೀತೆಯನ್ನು ಹಾಡಿ ಹೂ ನೀಡಿ ಶುಭಾಶಯವನ್ನು ಕೋರಿದರು. ರಕ್ಷಕ ಶಿಕ್ಷಕ ಸಂಘದ ವತಿಯಿಂದ ನಿವೃತ್ತಿ ಹೊಂದಿದ ಶಿಕ್ಷಕಿಯರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಮೇಶ್ ಕೆ ವಿ, ಈ ಹಿಂದೆ ನಿವೃತ್ತರಾದ ಶಿಕ್ಷಕರು, ಮಾಯಿದೆ ದೇವುಸ್ ಶಾಲೆ, ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯ ಗುರುಗಳು ಶಿಕ್ಷಕಿ ಇವಾನ್ ಮಸ್ಕರೇನ್ಹಸ್ ಹಾಗೂ ಶಿಕ್ಷಕಿ ಲಿಲ್ಲಿ ಡಿಸೋಜರವರಿಗೆ ಹೂ ಹಾಗೂ ಸ್ಮರಣಿಕೆ ನೀಡಿ ಅಭಿನಂದಿಸಿದರು.

ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೋಸಲಿನ್ ಲೋಬೊ ಸ್ವಾಗತಿಸಿ, ಶಿಕ್ಷಕಿ ರೂಪ ಡಿಕೋಸ್ಟ ವಂದಿಸಿದರು. ಶಿಕ್ಷಕರಾದ ರೊನಾಲ್ಡ್ ಮೋನಿಸ್ ಹಾಗೂ ಶಿಕ್ಷಕಿ ಲೆನಿಟಾ ಮೊರಾಸ್ ರವರು ನಿವೃತ್ತಿ ಹೊಂದಿದ ಶಿಕ್ಷಕರ ಸನ್ಮಾನ ಪತ್ರವನ್ನು ವಾಚಿಸಿದರು.

ಶಿಕ್ಷಕ ಇನಾಸ್ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿದ ಇವಾನ್ ಮಸ್ಕರೇನ್ಹಸ್‌ರವರ ಪತಿ ವಿ.ಜೆ ಫೆರ್ನಾಂಡೀಸ್, ಮಕ್ಕಳಾದ ರೂಬನ್ ಫೆರ್ನಾಂಡಿಸ್ ಮತ್ತು ಶ್ಯಾರನ್ ಫೆರ್ನಾಂಡಿಸ್, ಲಿಲ್ಲಿ ಡಿಸೋಜರವರ ಮಕ್ಕಳಾದ ಎಲ್ವಿನ್ ಹಾಗೂ ಅನ್ಸಿಲ್ ರೊಡ್ರಿಗಸ್, ನಿವೃತ್ತ ಶಿಕ್ಷಕರು ಹಾಗೂ ಆಹ್ವಾನಿತರು ಉಪಸ್ಥಿತರಿದ್ದರು.

ಭಗವಂತನು ನನಗೆ 36 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಾರೆ. ಶಿಕ್ಷಕ ವೃತ್ತಿಯು ನನ್ನ ಸಹಜ ಆಯ್ಕೆಯಾಗಿದ್ದು, ನಾನು ಈ ವೃತ್ತಿಯಲ್ಲಿ ತೃಪ್ತಿಯನ್ನು ಕಂಡಿದ್ದೇನೆ. ಎಲ್ಲಾ ವಿದ್ಯಾರ್ಥಿನಿಯರ ಭವಿಷ್ಯ ಜೀವನವು ಶುಭವಾಗಲಿ ಎಂಬುದೇ ನನ್ನ ಹಾರೈಕೆ.

-ಇವಾನ್ ಮಸ್ಕರೇನ್ಹಸ್, ನಿವೃತ್ತಿ ಹೊಂದಿದ ಶಿಕ್ಷಕಿ

ಈ ಶಾಲೆಯಲ್ಲಿ ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಶಾಲಾ ಸಂಚಾಲಕರಿಗೆ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿಯವರಿಗೆ ನಾನು ಆಭಾರಿಯಾಗಿದ್ದೇನೆ. ವಿದ್ಯಾರ್ಥಿನಿಯರಾದ ನಿಮ್ಮ ಜೀವನವು ಸುಖಮಯವಾಗಲಿ. ಉನ್ನತ ವಿದ್ಯೆಯನ್ನು ಪಡೆದು ತಮಗೆ ಶುಭವಾಗಲಿ.

-ಲಿಲ್ಲಿ ಡಿ’ಸೋಜ, ನಿವೃತ್ತಿ ಹೊಂದಿದ ಶಿಕ್ಷಕಿ

LEAVE A REPLY

Please enter your comment!
Please enter your name here