ಭಾಷೆಯ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ : ಉಮಾಮಹೇಶ್ವರ್
ಪುತ್ತೂರು: ಕನ್ನಡ ರಾಜ್ಯೋತ್ಸವ ನವಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ವರ್ಷಪೂರ್ತಿ ಕನ್ನಡ ಮಾತನಾಡುವ ಪ್ರವೃತ್ತಿ ಕನ್ನಡಿಗರಲ್ಲಿ ಮೂಡಿದಾಗ ಈ ಉತ್ಸವದ ಉದ್ದೇಶ ಸಾಕಾರಗೊಳ್ಳುತ್ತದೆ. ಕನ್ನಡ ನಿತ್ಯೋತ್ಸವವಾಗುತ್ತದೆ. ಭಾಷೆಯೊಂದರ ಬಳಕೆಯಿಂದ ಆ ಭಾಷೆ ಹೆಚ್ಚು ಜನರನ್ನು ತಲುಪುವ ಜೊತೆಗೆ ದೀರ್ಘಕಾಲ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಲು ನೆರವಾಗುತ್ತದೆ. ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಕನ್ನಡ ಮಾತನಾಡುವ ಹಾಗೂ ಭಾಷೆಯ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ ಎಂದು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಉಮಾಮಹೇಶ್ವರ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ವಿಶೇಷ ಉಪನ್ಯಾಸ ಹಾಗೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡ ಕನ್ನಡಿಗರಿಗೆ ಮಾತೃಭಾಷೆಯಾಗಿದ್ದು, ಮನೆಯಲ್ಲಿ ಯಾವುದೇ ಭಾಷೆ ಮಾತನಾಡುತ್ತಿದ್ದರೂ ಸಮಾಜದಲ್ಲಿ ಕನ್ನಡವೇ ಮುಖ್ಯವಾಗಿದೆ. ಇದು ನಮ್ಮ ಪರಿಸರ ಭಾಷೆಯಾಗಿದ್ದು ವಿಚಾರಗಳನ್ನು ಪರಿಣಾಮಕಾರಿಯಾಗಿ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇದು ಪ್ರತಿಯೊಬ್ಬರಲ್ಲೂ ಆತ್ಮವಿಶ್ವಾಸ ಮೂಡಿಸುವ ಕಾರ್ಯವನ್ನು ಮಾಡುತ್ತದೆ. ಆದ್ದರಿಂದ ಇದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿಯಾಗಿದೆ ಎಂದರು.
ಭಾಷಾವಾರು ಪ್ರಾಂತ್ಯಗಳ ಹಾಗೂ ರಾಜ್ಯಗಳ ರಚನೆಯ ಸಂದರ್ಭದಲ್ಲಿ ಹಲವಾರು ಮಂದಿ ಯೋಗದಾನ ನೀಡಿದ್ದಾರೆ. ಕನ್ನಡದ ಅಗ್ರಗಣ್ಯ ಸಾಹಿತಿಗಳು ಭಾಷೆ ಶ್ರೀಮಂತವಾಗಲು ಶ್ರಮಿಸಿದ್ದಾರೆ. ಭಾಷಾಭಿಮಾನದಿಂದ ಒಬ್ಬ ವ್ಯಕ್ತಿ ಕಲೆ, ಸಂಸ್ಕೃತಿ ಹಾಗೂ ಸಂಸ್ಕಾರ ಸಹಿತನಾಗಿ ಶ್ರೀಮಂತನಾಗಲು ಸಾಧ್ಯ. ಆದರೆ ಕನ್ನಡಿಗರ ಅಭಿಮಾನ ಶೂನ್ಯತೆ ಭಾಷಾ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಜನತೆಯಲ್ಲಿ ಭಾಷೆಯನ್ನು ಶುದ್ಧವಾಗಿ ಮಾತನಾಡುವ ಪರಿಪಾಠ ಬೆಳೆಯಬೇಕಿದೆ. ಕನ್ನಡಿಗರಲ್ಲಿ ಭಾಷೆಯ ಅಭಿಮಾನ ಮೂಡಿದಲ್ಲಿ ಭಾಷೆಯ ವಿಸ್ತಾರತೆ ಹೆಚ್ಚುತ್ತದೆ. ಯಾವುದೇ ಗ್ರಾಹಕ ಸೇವಾ ಬಳಕೆ ಸಂದರ್ಭ ಕನ್ನಡ ಭಾಷೆಯನ್ನೇ ಕನ್ನಡಿದರು ಬಳಸಿದರೆ ಕನ್ನಡ ಬಳಕೆ ಹೆಚ್ಚುತ್ತದೆ. ಆದರೆ ಕನ್ನಡದ ಬಳಕೆಗೆ ಕನ್ನಡಿಗರೇ ಆಸಕ್ತಿ ತೋರದಿದ್ದಲ್ಲಿ ಅದರ ಲಭ್ಯತೆಯ ಪ್ರಮಾಣವೂ ಕಡಿಮೆಯಾಗುವ ಸಾಧ್ಯತೆ ಇರುತ್ತದೆ ಎಂದರು.
ರಾಜ್ಯೋತ್ಸವ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು, ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಕಾಲೇಜಿನ ಪ್ರಾಂಶುಪಾಲ ರಾಕೇಶ ಕುಮಾರ್ ಕಮ್ಮಜೆ, ಕಾಲೇಜಿನ ಐಕ್ಯೂಎಸಿ ಸಂಯೋಜಕ ಚಂದ್ರಕಾಂತ ಗೋರೆ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಜಯಂತಿ ಪಿ. ಪ್ರಸ್ತಾವಿಕವಾಗಿ ಮಾತನಾಡಿದರು. ತತ್ವಶಾಸ್ತ್ರ ಉಪನ್ಯಾಸಕ ತೇಜಶಂಕರ ಸೋಮಯಾಜಿ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು.
ವಿದ್ಯಾರ್ಥಿನಿಯರಾದ ಪಂಚಮಿ ಸ್ವಾಗತಿಸಿ, ಚೈತನ್ಯ ವಂದಿಸಿದರು. ವರಣ್ಯ ಕಾರ್ಯಕ್ರಮ ನಿರ್ವಹಿಸಿದರು. ಚೈತನ್ಯ ಮತ್ತು ಶ್ರೀ ಹ? ಪ್ರಾರ್ಥಿಸಿದರು.