ಪುತ್ತೂರು; ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ,ವಕೀಲರ ಸಂಘ ಪುತ್ತೂರು ಹಾಗೂ ತಾಲೂಕು ಪಂಚಾಯತ್ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವಿನ ಮೂಲಕ ನಾಗರೀಕರಣ ಸಬಲೀಕರಣ ಅಭಿಯಾನ ಕಾರ್ಯಕ್ರಮ ನ.4ರಂದು ಕೋಡಿಂಬಾಡಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ 2 ನೇ ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ಮತ್ತು ಜೆ.ಎಂ.ಎಫ್.ಸಿ ಯೋಗೇಂದ್ರ ಶೆಟ್ಟಿ ಮಾತನಾಡಿ, ಕಾನೂನಿನ ಅರಿವು ಪ್ರತಿಯೊಬ್ಬ ನಾಗರೀಕರು ತಿಳಿದಿರಬೇಕು. ಕಾನೂನಿನ ಅರಿವು ಪಡೆದು ಸದೃಢ ನಾಗರೀಕರಾಗಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬಹುದು. ಮಕ್ಕಳ ಹಿತಾಸಕ್ತಿ, ಸುರಕ್ಷತೆ, ಮಕ್ಕಳ ಮೇಲಿನ ಲೈಂಗಿಜ ದೌರ್ಜನ್ಯ ತಡೆಯಲು ಫೋಕ್ಸೋ ಕಾಯಿದೆ ಜಾರಿಮಾಡಲಾಗಿದೆ. ಇದಕ್ಕೆ ಪ್ರತ್ಯೇಕ ನ್ಯಾಯಾಲಯವನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿ ಕಾಯಿದೆಯ ಮಹತ್ವವನ್ನು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್ ಮಾತನಾಡಿ,
ಕಾನೂನಿನ ಅಜ್ಞಾನಕ್ಕೆ ಕ್ಷಮೆಯಿಲ್ಲ. ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ. ಕಾನೂನಿನ ಬಗ್ಗೆ ಮಾಹಿತಿ ಪಡೆದುಕೊಂಡಾಗ ನಮ್ಮಲ್ಲಿ ಶಕ್ತಿ, ಧೈರ್ಯ ಬರಲು ಸಾಧ್ಯ. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ. ಕೌಟುಂಬಿಕಾ ದೌರ್ಜನ್ಯ ಕಾಯಿದೆಯ ಬಗ್ಗೆ ವಿವರಿಸಿದ ಅವರು ಕಾನೂನನ್ನು ದುರುಪಯೋಗಪಡಿಸಿಕೊಳ್ಳದೆ ಸದ್ಬಳಕೆಮಾಡಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷ ರಾಮಚಂದ್ರ ಪೂಜಾರಿ ಶಾಂತಿನಗರ ಮಾತನಾಡಿ, ಕಾನೂನಿ ಜ್ಞಾನ ಪಡೆಯುವುದು ದಿನ ನಿತ್ಯದ ಜೀವನಕ್ಕೆ ಆವಶ್ಯಕವಾಗಿದೆ. ಜೀವನದಲ್ಲಿ ಸಂಕಷ್ಟವನ್ನು ತಪ್ಪಿಸಲು ಕಾನೂನು ಸಹಕಾರಿಯಾಗಿದ್ದು ಗ್ರಾಮಸ್ಥರು ಸಹಕರಿಸಬೇಕು. ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವಕೀಲರಾದ ಅನೀಶ್,ಮನೋಜ್, ಗೌರೀಶ್, ವೆಂಕಟೇಶ್, ಮಹಿಳಾ ಒಕ್ಕೂಟದ ಕೋಡಿಂಬಾಡಿ ಅಧ್ಯಕ್ಷೆ ದೇಜಮ್ಮಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶಾಂತಿ ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಪೂರ್ಣಿಮಾ ಶೆಟ್ಟಿ ವಂದಿಸಿದರು. ರಾಧಿಕಾ ಸಾವಂತ್ ಕಾರ್ಯಕ್ರಮ ನಿರೂಪಿಸಿದರು. ಕೋಡಿಂಬಾಡಿ ಶಾಲಾ ಶಿಕ್ಷಕಿರಾದ ಸುಲೋಚನಾ, ಪದ್ಮಾವತಿ, ವೇದಾವತಿ ರೈ, ಅಂಗನವಾಡಿ ಕಾರ್ಯಕರ್ತೆ ಸುಮಲತಾ ವಿದ್ಯಾರ್ಥಿ ಹರ್ಷಿತ್, ಕೃತಿಕಾ, ಮನುಶ್ರೀ, ಕೌಶಿಕ್, ಲಿತೇಶ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು.