ಪುತ್ತೂರು: ಮನುಷ್ಯ ಆರೋಗ್ಯವಂತನಾಗಿ ಇರಬೇಕಾದರೆ ದೈಹಿಕ ಸದೃಢತೆ ಮುಖ್ಯ. ದೈಹಿಕ ಸಾಮರ್ಥ್ಯ ಮಾನಸಿಕ ದೃಢತೆ ಇವೆಲ್ಲವೂ ಶಾರೀರಿಕ ಶಿಕ್ಷಣದ ಮೂಲಕ ಸಾಧ್ಯ. ಹಾಗಾಗಿ ಈಗಿನ ಶೈಕ್ಷಣಿಕ ನೀತಿಯಲ್ಲಿ ಯೋಗ ಹಾಗೂ ಶಾರೀರಿಕ ಶಿಕ್ಷಣಕ್ಕೆ ಒತ್ತು ಕೊಡಲಾಗಿದೆ ಎಂದು ಜಿಡೆಕಲ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಕ ಸೇಸಪ್ಪ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಸಕ್ತ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಲ್ಲಿ ಎರಡು ವಿಧ ಇದೆ. ಒಂದು ಆಡಿ ಅನುಭವಿಸುವುದು ಇನ್ನೊಂದು ನೋಡಿ ಅನುಭವಿಸುವುದು. ಆಡಿ ಅನುಭವಿಸುವುದು ಕಷ್ಟದ ಕೆಲಸ. ಆದರೆ ಅದರಿಂದ ನಮ್ಮ ಬುದ್ಧಿ ಶಕ್ತಿ ವೃದ್ಧಿಯಾಗುತ್ತದೆ. ಅಷ್ಟೆ ಅಲ್ಲದೆ ದೈಹಿಕ ಸಾಮರ್ಥ್ಯವೂ ಕೂಡ ಬೆಳವಣಿಗೆಯಾಗುತ್ತದೆ. ಹೀಗಾಗಿ ಆಡುವ ಮೂಲಕ ಬುದ್ಧಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಕ್ರೀಡೆ ಶಿಕ್ಷಣಕ್ಕೆ ಅವಶ್ಯಕ, ಸಣ್ಣ ಮಗು ಯಾವಾಗ ತನ್ನನ್ನು ತಾನು ಆಟಕ್ಕೆ ಅಳವಡಿಸಿಕೊಳ್ಳುತ್ತದೋ ಆಗ ಮನೋವಿಕಾಸವಾಗುತ್ತದೆ. ಆದರೆ ಇಂದು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಸಿಕ್ಕ ಹಾಗೆ ಆಟಕ್ಕೆ ಪ್ರೋತ್ಸಾಹ ಸಿಗುತ್ತಿಲ್ಲ. ಕ್ರೀಡೆಯಲ್ಲಿ ಒಗ್ಗಟ್ಟಿದೆ. ಆದ್ದರಿಂದ ಧನಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸವನ್ನು ಮೂಡಿಸಿಕೊಂಡು ಮನೋಸ್ಥೈರ್ಯದಿಂದ ಮುಂದುವರಿಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಂಬಿಕ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಆಡಳಿತ ಮಂಡಳಿಯ ಸದಸ್ಯ ಸುರೇಶ್ ಶೆಟ್ಟಿ, ಶಾಲಾ ನಾಯಕಿ ಸಂಸ್ಕೃತಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತಾಲೂಕು ಹಾಗು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಜಯಲಕ್ಷ್ಮಿ, ಸೂರ್ಯ, ಮನ್ವಿತ್ ಕ್ರೀಡಾ ಜ್ಯೋತಿಯನ್ನು ಅತಿಥಿಗಳಿಗೆ ಹಸ್ತಾಂತರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಅಂಬಿಕ ವಿದ್ಯಾಲಯದ ಐರಾವತ, ಕಲ್ಪವೃಕ್ಷ, ಕಾಮಧೇನು, ಅಮೃತ ತಂಡದ ವಿದ್ಯಾರ್ಥಿಗಳು ಪಥಸಂಚನದಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಮೆರುಗು ತಂದರು. ದೈಹಿಕ ಶಿಕ್ಷಕಿ ಸುಚಿತ್ರಾ ಸ್ವಾಗತಿಸಿ, ಪ್ರಾಂಶುಪಾಲೆ ಮಾಲತಿ.ಡಿ ಭಟ್ ವಂದಿಸಿದರು. ವಿದ್ಯಾರ್ಥಿಗಳಾದ ಅರುಂಧತಿ, ಅನಘ ವಿ. ಪಿ ಕಾರ್ಯಕ್ರಮ ನಿರ್ವಹಿಸಿದರು.
Home ಚಿತ್ರ ವರದಿ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ: ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಹಾಗೂ ಮಾನಸಿಕ ದೃಢತೆ...