ಪುತ್ತೂರು: ಸೂರ್ಯನಿಲ್ಲದಾಗ ಕತ್ತಲನ್ನು ನೀಗಿಸಲು ಸಣ್ಣ ದೀಪ ಪ್ರಯತ್ನಿಸುವಂತೆ, ಭಕ್ತರು ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮಾಡುವ ಸಣ್ಣ ಸೇವೆ ಬಹಳ ದೊಡ್ಡ ಕೆಲಸವಾಗಿ ಮಾರ್ಪಡುತ್ತದೆ. ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ಕೂ ಭಕ್ತರು ತಮ್ಮನ್ನು ಸಮರ್ಪಿಸಿಕೊಂಡಾಗ, ದೊಡ್ಡ ಪ್ರಮಾಣದ ಸೇವೆ ಹರಿದು ಬರಲು ಸಾಧ್ಯ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ನ. 12ರಂದು ದೇವಸ್ಥಾನದ ಆವರಣದಲ್ಲಿ ನಡೆದ ಜೀರ್ಣೋದ್ಧಾರ ಸಮಿತಿ ರಚನೆ ಮತ್ತು ಭಕ್ತರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಮೊದಲಿಗೆ ಎಲ್ಲರನ್ನು ಒಟ್ಟುಗೂಡಿಸುವ ಕೆಲಸ ಆಗಬೇಕಿದೆ. ನಮ್ಮ ಶಕ್ತಿ – ಸಾಮರ್ಥ್ಯ ಏನೆಂಬುದನ್ನು ತಿಳಿದುಕೊಳ್ಳಬೇಕು. ಆಗ ಇಡೀ ಗ್ರಾಮವನ್ನು ಒಟ್ಟುಗೂಡಿಸಲು ಸಾಧ್ಯ. ತನು ನಿನ್ನದು, ಮನ ನಿನ್ನದು, ಧನ ನಿನ್ನದು ಎನ್ನುವ ಸಮರ್ಪಣಾ ಭಾವದಿಂದ ದೇವಸ್ಥಾನದಲ್ಲಿ ಕೆಲಸ ನಿರ್ವಹಿಸಿದಾಗ, ಒಗ್ಗಟ್ಟು ತನ್ನಿಂದ ತಾನಾಗಿ ಮೂಡುತ್ತದೆ. ಜೀರ್ಣೋದ್ಧಾರದ ಕೆಲಸ ಸಾಂಗವಾಗಿ ನೆರವೇರುತ್ತದೆ. ವೈಭವದಿಂದ ಮೆರೆದ ದೇವಸ್ಥಾನ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ. ಮತ್ತೊಮ್ಮೆ ದೇವರ ವೈಭವವನ್ನು ನಾವು ಕಣ್ಣಾರೆ ನೋಡುವಂತಾಗಬೇಕು ಎನ್ನುವ ಸದುದ್ದೇಶದಿಂದ ಜೀರ್ಣೋದ್ಧಾರದ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಜೀರ್ಣೋದ್ಧಾರವನ್ನು ಮಾಡುವಂತೆ, ಗ್ರಾಮದ ದೇವಸ್ಥಾನಕ್ಕೆ ಜನರ ಮುಂದಾಳುತ್ವದಲ್ಲೇ ಜೀರ್ಣೋದ್ಧಾರದ ಕಾರ್ಯ ನಡೆಸುವಂತಾಗಲಿ. ನಿಗದಿತ ಸಮಯದೊಳಗೆ ಜೀರ್ಣೋದ್ಧಾರ ಕಾರ್ಯ ನೆರವೇರುವಂತಾಗಲಿ ಎಂದು ಶುಭಹಾರೈಸಿದರು.
10 ಲಕ್ಷ ರೂ. ಅನುದಾನ, ಅಗತ್ಯ ನೆರವು:
ಸರಕಾರ ಈಗಾಗಲೇ 10 ಲಕ್ಷ ರೂ. ಅನುದಾನವನ್ನು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಿಡುಗಡೆ ಮಾಡಿದೆ. ಇದರಲ್ಲಿ 1 ರೂಪಾಯಿ ಕೂಡ ಆಚೆ – ಈಚೆ ಆಗದೇ, ನೇರವಾಗಿ ದೇವಸ್ಥಾನದ ಖಾತೆಗೆ ಬಂದು ಬೀಳಲಿದೆ. ಇನ್ನು ದೇವಸ್ಥಾನಕ್ಕೆ ಬೇಕಾದ ಮರಮುಟ್ಟುಗಳನ್ನು ಒದಗಿಸಿಕೊಡುವಲ್ಲಿಯೂ ನೆರವಾಗುವುದಾಗಿ ಶಾಸಕರು ಭರವಸೆ ನೀಡಿದರು. ಇಲ್ಲಿನ ರಸ್ತೆಗಾಗಿ 15 ಲಕ್ಷ ರೂ. ಇಟ್ಟಿದ್ದು, ಇದರಲ್ಲಿ ಸೇತುವೆಯ ಕಾರ್ಯ ನಡೆಯಲಿದೆ. ಇದರ ಜೊತೆಗೆ ರಸ್ತೆಯನ್ನು ಅಗಲ ಮಾಡುವ ಯೋಚನೆಯೂ ಇದೆ ಎಂದು ತಿಳಿಸಿದರು.
ಗ್ರಾಮ ದೇವಸ್ಥಾನದ ಅಭಿವೃದ್ಧಿಗೆ ಕರೆ:
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತ್ತಡ್ಕ ಮಾತನಾಡಿ, ಗ್ರಾಮ ದೇವಸ್ಥಾನದ ಅಭಿವೃದ್ಧಿಗೆ ಗ್ರಾಮದ ಗ್ರಾಮದ ಪ್ರತಿಯೊಬ್ಬರು ಸೇವೆ ಸಲ್ಲಿಸಬೇಕು. ಗ್ರಾಮದ ದೈವ – ದೇವರುಗಳ ಅಭಿವೃದ್ಧಿಯಾಗದ ಹೊರತು, ಕುಟುಂಬದಲ್ಲಿ ನೆಮ್ಮದಿ ಕಾಣಲು ಸಾಧ್ಯವಿಲ್ಲ. ಆದ್ದರಿಂದ ಗ್ರಾಮದ ಪ್ರಮುಖ ದೇವಸ್ಥಾನಗಳ ಅಭಿವೃದ್ಧಿಗೆ ಕೈಜೋಡಿಸುವಂತೆ ಕರೆ ನೀಡಿದರು.
ಕಾರ್ಪಾಡಿ ಹೆಸರುವಾಸಿಯಾದ ದೇವಸ್ಥಾನ:
ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬಹಳ ಹೆಸರುವಾಸಿಯಾದ ದೇವಸ್ಥಾನ. ಇಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ ಎಂದರು.
ಎ ಗ್ರೇಡ್ ದೇವಸ್ಥಾನ ಸಾಧ್ಯತೆ:
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ್ ರಾವ್, ದೇವಸ್ಥಾನ ಈಗ ಬಿ ಗ್ರೇಡ್ನಲ್ಲಿ ಗುರುತಿಸಿಕೊಂಡಿದೆ. ಹಿಂದಿನ ವರ್ಷ ಒಟ್ಟು 23 ಲಕ್ಷ ರೂ. ಆದಾಯ ದೇವಸ್ಥಾನಕ್ಕೆ ಬಂದಿದೆ. 25 ಲಕ್ಷ ರೂ. ಆದಾಯ ಬಂದರೆ, ಅದು ಎ ಗ್ರೇಡ್ ದೇವಸ್ಥಾನವಾಗಿ ಗುರುತಿಸಿಕೊಳ್ಳುತ್ತದೆ. ಆದ್ದರಿಂದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಎ ಗ್ರೇಡ್ ದೇವಸ್ಥಾನವಾಗಿ ಗುರುತಿಸಿಕೊಳ್ಳುವ ದಿನ ದೂರವಿಲ್ಲ. ಕಾರ್ಪಾಡಿ ದೇವಸ್ಥಾನ ಭಕ್ತರ ಆಕರ್ಷಣೆ ಇರುವ ಕ್ಷೇತ್ರವಾಗಿದೆ. ಚೆನ್ನಾಗಿ ಅಭಿವೃದ್ಧಿಯಾದರೆ, ನಾಡಿನ ಪ್ರಮುಖ ದೇವಸ್ಥಾನಗಳ ಪಟ್ಟಿಯಲ್ಲಿ ಕಾರ್ಪಾಡಿ ದೇವಸ್ಥಾನವೂ ಗುರುತಿಸಿಕೊಳ್ಳಲಿದೆ ಎಂದು ತಿಳಿಸಿದ ಅವರು, ಭೂಮಿ ಖರೀದಿಗೆ 16 ಲಕ್ಷ ರೂ.ನಷ್ಟು ಸಂಗ್ರಹವಾಗಿದೆ. ಇನ್ನಷ್ಟು ಹಣ ಸಂಗ್ರಹದ ಕೆಲಸ ಆಗಬೇಕಿದೆ ಎಂದರು.
ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಗತಿಪರ ಕೃಷಿಕ ಎ.ಪಿ. ಸದಾಶಿವ ಮರಿಕೆ ಉಪಸ್ಥಿತರಿದ್ದರು. ದೇವಯ್ಯ ಗೌಡ ಸ್ವಾಗತಿಸಿ, ಜಯಂತ್ ಶೆಟ್ಟಿ ಕಂಬಳತ್ತಡ್ಡ ವಂದಿಸಿದರು. ಪವನ್ ಕಾರ್ಯಕ್ರಮ ನಿರೂಪಿಸಿದರು.
ಜಾತ್ರೆಯ ಆಮಂತ್ರಣ ಬಿಡುಗಡೆ:
ಶಾಸಕ ಸಂಜೀವ ಮಠಂದೂರು ಅವರು ಇದೇ ಸಂದರ್ಭ ದೇವಸ್ಥಾನದ ಕಿರುಷಷ್ಠಿ ಉತ್ಸವದ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿದರು. ಡಿ. 22ರಂದು ಗೊನೆ ಮುಹೂರ್ತ, ಬಲ್ಲೇರಿ ಮಲೆ ಯಾತ್ರೆ, ಡಿ. 26ರಂದು ಗಣಪತಿ ಹೋಮ, ಡಿ. 27ರಂದು ಹೊರೆಕಾಣಿಕೆ ಸಮರ್ಪಣೆ, 28ರಂದು ಬೆಳಿಗ್ಗೆ ಆಶ್ಲೇಷ ಹೋಮ, ಮಧ್ಯಾಹ್ನ ತುಲಾಭಾರ, ಸಂಜೆ ದುರ್ಗಾಪೂಜೆ, ರಾತ್ರಿ ದೇವರ ಬಲಿ ಹೊರಟು, ಪೆರಿಯ ಬಲಿ ಉತ್ಸವ, ಕೇರಳ ಸಂಪ್ರದಾಯದ ನೃತ್ಯಬಲಿ ಸೇವೆ, ಶ್ರೀ ದೇವರ ಸವಾರಿ, 29ರಂದು ಉತ್ಸವ, ದರ್ಶನ ಬಲಿ ಹಾಗೂ ಮಧ್ಯಾಹ್ನದ ಬಳಿಕ ವ್ಯಾಘ್ರ ಚಾಮುಂಡಿ ನೇಮ, ಗುಳಿಗ ದೈವದ ತಂಬಿಲ ನಡೆಯಲಿದೆ. ಜ. 14ರಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.
ಶಾಸಕ ಸಂಜೀವ ಮಠಂದೂರು ಮಾತನಾಡಿದರು.
ಜಾತ್ರೆಯ ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಲಾಯಿತು.