ರಾಷ್ಟ್ರೀಯ ಹೆದ್ದಾರಿಯಲ್ಲಿ 3 ತಾಸು ಸಂಚಾರಕ್ಕೆ ಅಡಚಣೆ
ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಹೊಸಮಜಲು ಎಂಬಲ್ಲಿ ಕಬ್ಬಿಣದ ಸರಳು ಸಾಗಾಟದ ಬೃಹತ್ ಲಾರಿಯೊಂದು ರಸ್ತೆಗೆ ಅಡ್ಡವಾಗಿ ಪಲ್ಟಿಯಾದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 3 ತಾಸು ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ನ.12 ರಂದು ಸಂಜೆ ನಡೆದಿದೆ.
ಕೊಯಮತ್ತೂರಿನಿಂದ ಮಂಗಳೂರಿಗೆ ಕಬ್ಬಿಣದ ಸರಳು ಸಾಗಾಟದ ಲಾರಿ ನೆಲ್ಯಾಡಿ ಸಮೀಪ ಕೌಕ್ರಾಡಿ ಗ್ರಾಮದ ಹೊಸಮಜಲು ಎಂಬಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಲಾರಿ ರಸ್ತೆಗೆ ಸಂಪೂರ್ಣ ಅಡ್ಡವಾಗಿ ಬಿದ್ದ ಪರಿಣಾಮ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸಂಜೆ ಸುಮಾರು 6.30 ರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತು.
ಉಪ್ಪಿನಂಗಡಿಯಿಂದ ಎರಡು ಕ್ರೇನ್ ತರಿಸಿ ರಸ್ತೆಗೆ ಅಡ್ಡಬಿದ್ದ ಲಾರಿಯನ್ನು ಬದಿಗೆ ಸರಿಸಿದ ಬಳಿಕ ರಾತ್ರಿ ಸುಮಾರು 9.30ರ ವೇಳೆಗೆ ವಾಹನ ಸಂಚಾರ ಸುಗುಮಗೊಂಡಿದೆ. ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 3 ಗಂಟೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುವ ಹಾಗೂ ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುವ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಿವೆ. ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಂಡಿದ್ದರು.