ಬೆಂಗಳೂರಿನಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ಪೊಲೀಸರಿಗೊಪ್ಪಿಸಿದ ನಿರ್ವಾಹಕ
ಪುತ್ತೂರು: ಕಳೆದ ನಾಲ್ಕು ತಿಂಗಳ ಹಿಂದೆ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಉಪ್ಪಿನಂಗಡಿಯಲ್ಲಿ ಮಹಿಳೆಯೋರ್ವರ ಬ್ಯಾಗ್ನಲ್ಲಿದ್ದ ಚಿನ್ನ ಹಾಗೂ ನಗದು ಕಳವು ಮಾಡಿದ್ದ ಆರೋಪಿಗಳು ಮತ್ತೆ ಬಸ್ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ನಿರ್ವಾಹಕ ಅವರ ಗುರುತು ಪತ್ತೆ ಮಾಡಿ ನಿಗಮದ ಅಧಿಕಾರಿಗಳ ಮೂಲಕ ಪೊಲೀಸರಿಗೆ ಒಪ್ಪಿಸಿರುವ ಘಟನೆ ನ.12 ರಂದು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಡೆದಿದೆ.
ಘಟನೆಯ ವಿವರ:
ಕಳೆದ ಜು.10ರಂದು ಮಂಗಳೂರು ಎರಡನೇ ಘಟಕದ ಬಸ್ ಕ್ಲಬ್ ಕ್ಲಾಸ್ ವೋಲ್ವೋ(ಕೆಎ 01 ಎಫ್ 268) ಬಸ್ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿರುವಾಗ ಉಪ್ಪಿನಂಗಡಿಯ ಗಡಿಯಾರದ ಬಳಿ ತಲುಪುತ್ತಿದ್ದಂತೆಯೇ ಮುಂಜಾನೆ 5 ಗಂಟೆಗೆ ಸೀಟ್ ನಂಬರ್ 27 ರಲ್ಲಿದ್ದ ಪ್ರಯಾಣಿಕ ತುರ್ತಾಗಿ ನೈಸರ್ಗಿಕ ಕರೆಗೆ ಹೋಗಬೇಕೆಂದು ತಿಳಿಸಿದ್ದರು. ಬಸ್ನ ಚಾಲಕ ಮತ್ತು ನಿರ್ವಾಹಕರು ವಾಹನವನ್ನು ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿ ಪ್ರಯಾಣಿಕ ಇಳಿಯಲು ಅವಕಾಶ ಮಾಡಿಕೊಟ್ಟಿದ್ದರು. ಇದೇ ಸಂದರ್ಭದಲ್ಲಿ ಸೀಟ್ ನಂಬರ್ 28 ರಲ್ಲಿದ್ದ ಪ್ರಯಾಣಿಕರು ಸಹ ನೈಸರ್ಗಿಕ ಕರೆಗಾಗಿ ಹೋಗುವುದಾಗಿ ತಿಳಿಸಿ ಅವರೂ ಬಸ್ನಿಂದ ಇಳಿದು ಹೋಗಿದ್ದರು. ಇದಾದ ಸುಮಾರು 10 ನಿಮಿಷದ ನಂತರ ಸದರಿ ಪ್ರಯಾಣಿಕರು ಬಾರದೇ ಇರುವುದರಿಂದ ಬಸ್ ನಿರ್ವಾಹಕರು ಪ್ರಯಾಣಿಕರ ಮೊಬೈಲ್ ಫೋನ್ ಗೆ ಕರೆ ಮಾಡಿದಾಗ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಘಟನೆಯ ಬಗ್ಗೆ ನಿರ್ವಾಹಕ ಅಶೋಕ್ ಜಾದವ್ರವರು ಕೆ.ಎಸ್.ಆರ್.ಟಿ.ಸಿ. ಘಟಕಕ್ಕೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದರು. ಘಟಕದ ಅಧಿಕಾರಿಗಳ ಸೂಚನೆಯ ಮೇರೆಗೆ ಸುಮಾರು 15 ನಿಮಿಷಗಳವರೆಗೆ ಸಹ ಪ್ರಯಾಣಿಕರು ಹಾಗೂ ಸ್ಥಳೀಯರ ನೆರವಿನೊಂದಿಗೆ ಸುತ್ತಮುತ್ತ ಸ್ಥಳಗಳನ್ನು ಪರಿಶೀಲಿಸಿ ಅವರು ಸಿಗದಿರುವ ಹಿನ್ನೆಲೆಯಲ್ಲಿ ಘಟಕದ ಸೂಚನೆಯಂತೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಬಸ್ಸಿನಲ್ಲಿರುವ ಎಲ್ಲಾ ಪ್ರಯಾಣಿಕರಿಗೆ ತಮ್ಮ ಲಗೇಜ್ ಗಳನ್ನು ಪರಿಶೀಲಿಸುವಂತೆ ತಿಳಿಸಲಾಗಿತ್ತು. ನಂತರ ಎಲ್ಲಾ ಪ್ರಯಾಣಿಕರು ತಮ್ಮ ಲಗೇಜ್ ಗಳು ಸರಿಯಾಗಿದೆ ಎಂದು ತಿಳಿಸಿದ ಬಳಿಕ ಬಸ್ ತೆರಳಿತ್ತು.
ಇದಾದ ಬಳಿಕ ಅದೇ ದಿನ ಬೆಳಿಗ್ಗೆ ಅದೇ ಬಸ್ನಲ್ಲಿದ್ದ ಪ್ರಯಾಣಿಕೆ ಲಕ್ಷ್ಮಿಯವರು ನಿರ್ವಾಹಕರಿಗೆ ಕರೆ ಮಾಡಿ ತಮ್ಮ ಬ್ಯಾಗಿನಲ್ಲಿದ್ದ ಸುಮಾರು ಎರಡೂವರೆ ಲಕ್ಷ ರೂ ಮೌಲ್ಯದ ಚಿನ್ನ ಮತ್ತು ಹಣ ಕಳೆದು ಹೋಗಿರುವುದಾಗಿ ತಿಳಿಸಿದ್ದರು. ಘಟನೆಯ ಬಗ್ಗೆ ನಿರ್ವಾಹಕರು ಘಟಕದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಘಟಕದ ಅಧಿಕಾರಿಗಳ ಸೂಚನೆಯಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ನಿರ್ವಾಹಕರು ಘಟಕದಲ್ಲಿ ಬಸ್ಸಿನ ಟ್ರಿಪ್ ಶೀಟ್ ಪರಿಶೀಲಿಸಿದಾಗ ಉಪ್ಪಿನಂಗಡಿ ಬಳಿ ಇಳಿದು ಹೋದ ಪ್ರಯಾಣಿಕರ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿರುವುದರಿಂದ ಅನುಮಾನಗೊಂಡು ಅವರ ಫೋನ್ ನಂಬರನ್ನು ಅವತಾರ್ ಬುಕಿಂಗ್ನಲ್ಲಿ ಟ್ರ್ಯಾಕ್ ಮಾಡಿ ಪರಿಶೀಲಿಸಿದಾಗ ಅವರು ಸತತವಾಗಿ ಕ್ಲಬ್ ಕ್ಲಾಸ್ ವೋಲ್ವೋ ವಾಹನದಲ್ಲಿ ಪ್ರಯಾಣಿಸಿರುವುದು ಕಂಡುಬಂದಿತ್ತು. ಪ್ರಯಾಣಿಕರು ಹಣ ಮತ್ತು ಒಡವೆ ಕಳೆದು ಹೋಗಿರುವ ಬಗ್ಗೆ ಪುತ್ತೂರು ಹಾಗೂ ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು.
ನ.12ರಂದು ರಾತ್ರಿ 9.45 ಕ್ಕೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಸ್(ಕೆಎ 01 ಎಫ್ 9356)ನ್ನು ಮಂಗಳೂರಿಗೆ ತೆರಳಲು ಫ್ಲಾಟ್ ಫಾರಂನಲ್ಲಿ ನಿಲ್ಲಿಸಿ ನಿರ್ವಾಹಕ ಅಶೋಕ್ ಜಾದವ್ರವರು ಟ್ರಿಪ್ ಶೀಟ್ ಪರಿಶೀಲಿಸುತ್ತಿರುವಾಗ ಸೀಟ್ ನಂಬರ್ 29 ಮತ್ತು 30ರಲ್ಲಿ ಪ್ರಯಾಣಿಕರಿಬ್ಬರು ಬಹು ಬೇಗನೆ ಬಸ್ಸನ್ನೇರಿ ತಮ್ಮ ಸೀಟಿನಲ್ಲಿ ಕುಳಿತಿದ್ದರು. ಅವರಿಬ್ಬರು ಇತರ ಪ್ರಯಾಣಿಕರ ಚಲನವಲನಗಳನ್ನು ಗಮನಿಸುತ್ತಿರುವುದನ್ನು ಗಮನಿಸಿದ ನಿರ್ವಾಹಕ ಅಶೋಕ್ ಜಾಧವ್ ಅನುಮಾನಗೊಂಡು ಅವರ ಹತ್ತಿರ ಹೋಗಿ ಪರಿಶೀಲಿಸಿದಾಗ ಅವರು ಈ ಹಿಂದೆ ಉಪ್ಪಿನಂಗಡಿಯಲ್ಲಿ ಪ್ರಯಾಣಿಕರ ಹಣ ಹಾಗೂ ಒಡವೆ ಕದ್ದು ಇಳಿದು ಹೋಗಿರುವ ಪ್ರಯಾಣಿಕರೇ ಆಗಿರುವುದನ್ನು ಖಚಿತಪಡಿಸಿಕೊಂಡು ಅವರಿಬ್ಬರಿಗೂ ಯಾವುದೇ ರೀತಿಯ ಅನುಮಾನ ಬಾರದಂತೆ ಕೂಡಲೇ ಘಟಕಕ್ಕೆ ಮಾಹಿತಿ ನೀಡಿದ್ದರು. ಘಟಕದ ಸೂಚನೆಯಂತೆ ಸಂಚಾರ ನಿಯಂತ್ರಕರಿಗೆ, ಭದ್ರತಾ ಸಿಬ್ಬಂದಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಕೆಬಿಎಸ್ನ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಆ ಇಬ್ಬರು ಪ್ರಯಾಣಿಕರನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಉಪ್ಪಿನಂಗಡಿಯಲ್ಲಿ ನಡೆದಿದ್ದ ಕಳವು ಪ್ರಕರಣದ ಆರೋಪಿಗಳನ್ನು ಮುಖಚರ್ಯೆ ಮೂಲಕ ಪತ್ತೆ ಹಚ್ಚಿ ಚಾಣಾಕ್ಷತನ ಮೆರೆದ ನಿರ್ವಾಹಕನ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ.
ಎಂ.ಡಿ ಅಭಿನಂದನೆ:
ಕಳೆದ ನಾಲ್ಕು ತಿಂಗಳ ಹಿಂದೆ ಬಸ್ಸಿನಲ್ಲಿ ಕಳ್ಳತನ ಮಾಡಿ ಮಾರ್ಗ ಮಧ್ಯೆ ಇಳಿದು ಹೋದ ಪ್ರಯಾಣಿಕರ ಮುಖ ಚಹರೆಯನ್ನು ನೆನಪಿನಲ್ಲಿಟ್ಟುಕೊಂಡು ಅದೇ ಪ್ರಯಾಣಿಕರು ಸುಮಾರು ನಾಲ್ಕು ತಿಂಗಳ ನಂತರ ಬಸ್ಸಿಗೆ ಬಂದಾಗ ಅವರನ್ನು ಗುರುತಿಸಿ ಪೊಲೀಸ್ ಠಾಣೆಗೆ ಒಪ್ಪಿಸಿ ಸಮಯಪ್ರಜ್ಞೆ ಮೆರೆದ ಬಸ್ ನಿರ್ವಾಹಕ ಅಶೋಕ್ ಜಾದವ್ರವರ ಕಾರ್ಯ ತತ್ಪರತೆಯನ್ನು ಗೌರವಿಸಿ ಕೆಎಸ್ಆರ್ಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.