ಪುತ್ತೂರು: ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಬಯಸಿ ಪುತ್ತೂರು,ಸುಳ್ಯ ಸೇರಿದಂತೆ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 45 ಮಂದಿ ಆಕಾಂಕ್ಷಿಗಳು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಕೆ ಅವಧಿ ನ.21ಕ್ಕೆ ಮುಕ್ತಾಯಗೊಂಡಿದ್ದು ಈ ಪೈಕಿ ಪುತ್ತೂರು ಮತ್ತು ಮಂಗಳೂರು ಉತ್ತರ ಕ್ಷೇತ್ರದಿಂದ ಅತಿಹೆಚ್ಚು ಆಕಾಂಕ್ಷಿಗಳು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ.
ವಿಧಾನಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ಆಕಾಂಕ್ಷಿಗಳಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅರ್ಜಿ ಆಹ್ವಾನಿಸಿತ್ತು.ಅರ್ಜಿಗೆ ರೂ.5,೦೦೦ ಶುಲ್ಕ ನಿಗದಿಪಡಿಸಿ, ಪಕ್ಷಕ್ಕೆ ವಂತಿಗೆಯಾಗಿ ರೂ.2 ಲಕ್ಷದ ಡಿ.ಡಿ.ಯನ್ನು ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ.ಅರ್ಜಿ ಸಲ್ಲಿಸಿರುವವರಲ್ಲಿ ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾದವರು, ಸಚಿವರಾದವರು, ಸ್ಪರ್ಧಿಸಿ ಪರಾಭವಗೊಂಡವರು, ಹಿರಿಯ ರಾಜಕಾರಣಿಗಳ ಸಂಬಂಧಿಕರೂ ಇದ್ದಾರೆ.ಅರ್ಜಿ ಸಲ್ಲಿಸಿರುವ ಅನೇಕರು ಈಗಾಗಲೇ ಪಕ್ಷದ ಪ್ರಭಾವಿಗಳ ಹಿಂದೆ ಅಲೆದಾಡುತ್ತಿದ್ದು, ಟಿಕೆಟ್ ಪಡೆಯಲು ಲಾಬಿ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.
ಪುತ್ತೂರು:
ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ಎಸ್.ಮೊಹಮ್ಮದ್,ಜಿ.ಪಂ.ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ,ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭರತ್ ಮುಂಡೋಡಿ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಕೃಪಾ ಅಮರ್ ಆಳ್ವ, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಕೆಡೆಂಜಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಬಿ.ರಾಜಾರಾಮ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಬೆಳ್ಳಿಪ್ಪಾಡಿ ಅರ್ಜಿ ಸಲ್ಲಿಸಿದ್ದಾರೆ.
ಸುಳ್ಯ:
ಸುಳ್ಯ ವಿಧಾನಸಭಾ ಕ್ಷೇತ್ರದಿಂದ ನಂದ ಕುಮಾರ್, ಕೃಷ್ಣಪ್ಪ ರಾಮಕುಂಜ,ಪ್ರಹ್ಲಾದ್ ಬೆಳ್ಳಿಪ್ಪಾಡಿ, ಅಭಿಷೇಕ್ ಬೆಳ್ಳಿಪ್ಪಾಡಿ, ಅಪ್ಪಿ ಅರ್ಜಿ ಸಲ್ಲಿಸಿದ್ದಾರೆ.
ಬಂಟ್ವಾಳ:
ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಬಿ.ರಮಾನಾಥ ರೈ,ಇಂಟಕ್ ನಾಯಕ ರಾಕೇಶ್ ಮಲ್ಲಿ, ಅಶ್ವಿನ್‌ಕುಮಾರ್ ರೈ ಅರ್ಜಿ ಸಲ್ಲಿಸಿದ್ದಾರೆ.
ಬೆಳ್ತಂಗಡಿ:
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಬಯಸಿ ಮಾಜಿ ಸಚಿವ ಗಂಗಾಧರ ಗೌಡ, ಮಾಜಿ ಶಾಸಕ ವಸಂತ ಬಂಗೇರ, ರಕ್ಷಿತ್ ಶಿವರಾಮ್ ಅರ್ಜಿ ಸಲ್ಲಿಸಿದ್ದಾರೆ.ಉಳಿದಂತೆ, ಉಳ್ಳಾಲ ಕ್ಷೇತ್ರದಿಂದ ಹಾಲಿ ಶಾಸಕ ಯು.ಟಿ.ಖಾದರ್, ಮಂಗಳೂರು ದಕ್ಷಿಣ ಕ್ಷೇತ್ರದಿಂದ ಮಾಜಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಶಾಲೆಟ್ ಪಿಂಟೊ, ಲಾರೆನ್ಸ್ ಡಿಸೋಜ, ಮೆರಿಲ್ ರೇಗೊ, ವಿಶ್ವಾಸ್ ಕುಮಾರ್ ದಾಸ್, ಮಂಗಳೂರು ಉತ್ತರ ಕ್ಷೇತ್ರದಿಂದ ಮೊಹಿಯುದ್ದೀನ್ ಬಾವ, ಇನಾಯತ್ ಅಲಿ, ಅಲ್ತಾಫ್, ಲುಕ್ಮಾನ್, ಪ್ರತಿಭಾ ಕುಳಾಯಿ, ಕವಿತಾ ಸನಿಲ್, ಪುರುಷೋತ್ತಮ ಚಿತ್ರಾಪುರ, ಪದ್ಮನಾಭ, ಶಶಿಧರ್ ಹೆಗ್ಡೆ ಅರ್ಜಿ ಸಲ್ಲಿಸಿದ್ದಾರೆ.ಮೂಡುಬಿದಿರೆ ಕ್ಷೇತ್ರದಿಂದ ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಥುನ್ ರೈ, ರಾಜಶೇಖರ್ ಕೋಟ್ಯಾನ್ ಅವಕಾಶ ಕೋರಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಅಧಿಕೃತ ಮೂಲಗಳು ತಿಳಿಸಿವೆ.ಕೆಲವರು ಒಂದೆರಡು ಕ್ಷೇತ್ರಗಳಲ್ಲಿ ಅರ್ಜಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.ಹಾಲಿ ಶಾಸಕರು ಹಾಗೂ ಇನ್ನು ಒಂದಿಬ್ಬರಿಗೆ ಟಿಕೆಟ್ ಬಹುತೇಕ ಖಚಿತ ಎನ್ನಲಾಗುತ್ತಿದೆ.ಯುವಕರು ಹಾಗೂ ಹಿರಿಯರು ಇಬ್ಬರನ್ನೂ ಸಮಾಧಾನಪಡಿಸುವ ರೀತಿಯಲ್ಲಿ ಟಿಕೆಟ್ ಹಂಚಿಕೆಯಾಗಲಿದೆ.
ನ.25:ಬೆಂಗಳೂರಿನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಭೆ
ನ.25ರಂದು ಪಕ್ಷದ ಪ್ರಮುಖರಾದ ರಣದೀಪ್ ಸುರ್ಜಿವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ,ಬಿ.ಕೆ.ಹರಿಪ್ರಸಾದ್ ಅವರು ಟಿಕೆಟ್ ಆಕಾಂಕ್ಷಿಗಳನ್ನು ಬೆಂಗಳೂರಿಗೆ ಕರೆದಿದ್ದು,ಪರಸ್ಪರ ಮಾತುಕತೆ ನಡೆಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.