- ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 100 ದ್ವಿಚಕ್ರ ವಾಹನ
- ಶೀಘ್ರ ಫಲಾನುಭವಿಗಳ ಆಯ್ಕೆಗೆ ಅಧಿಕಾರಿಗಳಿಗೆ ಸೂಚನೆ
- ಫಲಾನುಭವಿ ಯಾವುದೇ ಕಂಪೆನಿಯ ದ್ವಿಚಕ್ರ ವಾಹನ ಖರೀದಿಸಬಹದು
ಬೆಂಗಳೂರು:ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ, ಯುವತಿಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳುವ ಸಲುವಾಗಿ ರಾಜ್ಯಾದ್ಯಂತ 28 ಸಾವಿರ ಸರಕು ದ್ವಿಚಕ್ರವಾಹನ ನೀಡುವ ಗುರಿ ಹೊಂದಲಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಉಡುಪಿಯ ಆದರ್ಶ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಆಸ್ಪತ್ರೆಯಿಂದಲೇ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಎಲ್ಲ ನಿಗಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.ಪ್ರಸಕ್ತ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ, ಯುವತಿಯರಿಗೆ ಸ್ವಯಂ ಉದ್ಯೋಗಕ್ಕೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಸರಕು ದ್ವಿಚಕ್ರ ವಾಹನಗಳನ್ನು ನೀಡಲಾಗುತ್ತಿದೆ ಎಂದ ಅವರು, ಫಲಾನುಭವಿಗಳನ್ನು ಶೀಘ್ರವೇ ಆಯ್ಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಯೋಜನೆ ಅನುಷ್ಠಾನಕ್ಕಾಗಿ 210 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ದ್ವಿಚಕ್ರ ವಾಹನ ವಿತರಣೆ ಗುರಿ ಹೊಂದಲಾಗಿದೆ.ಮೀನು ಮಾರಾಟ, ಬಟ್ಟೆ ವ್ಯಾಪಾರ ಸೇರಿದಂತೆ ಸರಕು ದ್ವಿಚಕ್ರ ವಾಹನಗಳಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳುವ ಅರ್ಹ ಫಲಾನುಭವಿಗಳು ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಅವರು ಹೇಳಿದರು.
ಪ್ರತಿ ದ್ವಿಚಕ್ರ ವಾಹನಕ್ಕೆ 70 ಸಾವಿರ ರೂ.ನಿಗದಿಗೊಳಿಸಲಾಗಿದ್ದು 50 ಸಾವಿರ ರೂ.ಸಬ್ಸಿಡಿ ಹಾಗೂ 20 ಸಾವಿರ ರೂ.ಬ್ಯಾಂಕ್ ಸಾಲ ಸೌಲಭ್ಯ ಇರಲಿದೆ. ಫಲಾನುಭವಿ ತನಗೆ ಅನುಕೂಲವಾಗುವ ಯಾವುದೇ ಕಂಪನಿಯ ದ್ವಿಚಕ್ರ ವಾಹನ ಖರೀದಿಸಬಹುದು ಎಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದರು.
ವ್ಯಾಪಕ ಪ್ರಚಾರ ಮಾಡಿ: ಈಗಾಗಲೇ ಆನ್ ಲೈನ್ ಮೂಲಕ ಆಹ್ವಾನಿಸಲಾದ ಅರ್ಜಿಗಳಲ್ಲಿ ಈವರೆಗೆ 8432 ಅರ್ಜಿಗಳು ಬಂದಿದ್ದು ಹೆಚ್ಚಿನ ಫಲಾನುಭವಿಗಳಿಗೆ ಯೋಜನೆ ಸೌಲಭ್ಯ ಸಿಗಬೇಕಿದೆ.ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಸುತ್ತೋಲೆ ಕಳುಹಿಸುವಂತೆ ಹಾಗೂ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಅವರು ತಿಳಿಸಿದರು.
ವಸತಿ ಶಾಲೆಯ ಆಹಾರದ ಗುಣಮಟ್ಟ ಸರಿಪಡಿಸಿ: ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡುವ ಬಗ್ಗೆ ಕೆಲವು ದೂರುಗಳು ಕೇಳಿಬರುತ್ತಿದ್ದು ಅದನ್ನು ತಕ್ಷಣ ಸರಿಪಡಿಸುವಂತೆ ಇಲಾಖೆ ಅಧಿಕಾರಿಗಳಿಗೆ ಕೋಟ ಸೂಚಿಸಿದರು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್, ಸಲಹೆಗಾರ ಇ.ವೆಂಕಟಯ್ಯ, ಆಯುಕ್ತ ಡಾ|ಕೆ.ರಾಕೇಶ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ.ದಯಾನಂದ್, ಸಚಿವರ ಆಪ್ತ ಕಾರ್ಯದರ್ಶಿ ಡಾ|ಉದಯಕುಮಾರ್ ಶೆಟ್ಟಿ ಸೇರಿದಂತೆ ವಿವಿಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರತಿ ದ್ವಿಚಕ್ರ ವಾಹನಕ್ಕೆ 70 ಸಾವಿರ ರೂ.ನಿಗದಿಗೊಳಿಸಲಾಗಿದ್ದು 50 ಸಾವಿರ ರೂ.ಸಬ್ಸಿಡಿ ಹಾಗೂ 20 ಸಾವಿರ ರೂ.ಬ್ಯಾಂಕ್ ಸಾಲ ಸೌಲಭ್ಯ ಇರಲಿದೆ.ಫಲಾನುಭವಿ ತನಗೆ ಅನುಕೂಲವಾಗುವ ಯಾವುದೇ ಕಂಪನಿಯ ದ್ವಿಚಕ್ರ ವಾಹನ ಖರೀದಿಸಬಹುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಗಂಗಾಕಲ್ಯಾಣ: ನ.30ರೊಳಗೆ ಫಲಾನುಭವಿಗಳ ಪಟ್ಟಿ
ಗಂಗಾಕಲ್ಯಾಣ ಯೋಜನೆ ಅನುಷ್ಠಾನ ಸಂಬಂಧ ಈಗಾಗಲೇ ಫಲಾನುಭವಿಗಳಿಂದ ಅರ್ಜಿ ಸ್ವೀಕೃತಿ ಪ್ರಕ್ರಿಯೆ ಮುಗಿದಿದ್ದು, ಶೀಘ್ರವೇ ಸಂಬಂಧಿಸಿದ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಮ್ಮ ಜಿಲ್ಲೆಯ ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ಕರೆದು ನ.30ರೊಳಗೆ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಬೇಕೆಂದು ಸಚಿವ ಕೋಟ ಸೂಚಿಸಿದರು.