ಜಾಗ ಒತ್ತುವರಿ ಮಾಡಲಾಗಿದೆ ಎಂದು ತೆರವು ಮಾಡಿದ ಲೋಕೋಪಯೋಗಿ ಇಲಾಖೆ
ಪುತ್ತೂರು; ಕುಂಬ್ರ ಬೆಳ್ಳಾರೆ ರಸ್ತೆಯ ಅಮೈ ಎಂಬಲ್ಲಿ ಮನೆ ಮಾಲಿಕರೋರ್ವರು ರಸ್ತೆ ಬದಿಯಲ್ಲಿ ಹಾಕಿದ್ದ ತಡೆ ಬೇಲಿಯನ್ನು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ತೆರವು ಮಾಡಿದ್ದು ಇದರ ವಿರುದ್ದ ಮನೆ ಮಾಲಿಕ ಆಕ್ರೋಶ ವ್ಯಕ್ತಪಡಿಸಿ ಇಲಾಖೆಗೆ ಪತ್ರ ಬರೆದ ಘಟನೆ ನಡೆದಿದೆ.
ಅಮೈ ನಿವಾಸಿ , ನಿವೃತ್ತ ಸೈನಿಕ ವಸಂತಕುಮಾರ್ ಸಿ ಸಿ ಎಂಬವರೇ ತನ್ನ ಮನೆ ಎದುರು ಇರುವ ರಸ್ತೆ ಬದಿಯಲ್ಲಿ ಶ್ಯಾಡೋ ನೆಟ್ ಬೇಲಿ ಹಾಕಿದವರು. ರಸ್ತೆಯಲ್ಲಿ ತೆರಳುವ ವಾಹನ ಚಾಲಕರು ರಾತ್ರಿ ವೇಳೆ ಇವರ ಮನೆಯ ಮುಂದೆ ಇರುವ ಖಾಲಿ ಜಾಗಕ್ಕೆ ತ್ಯಾಜ್ಯವನ್ನು ಎಸೆಯುತ್ತಿದ್ದು ಅನೇಕ ಬಾರಿ ಈ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ತ್ಯಾಜ್ಯ ಸುರಿಯದಂತೆ ಶ್ಯಾಡೋ ನೆಟ್ ಹಾಕಿದ್ದರು.
ಬಳಿಕ ಚರಂಡಿಯನ್ನು ಕೂಡಾ ಮಾಡಿದ್ದರು. ರಸ್ತೆ ಕಾಮಗಾರಿ ವೇಳೆ ಈ ಭಾಗದಲ್ಲಿ ಸೂಕ್ತ ಚರಂಡಿ ಮಾಡದ ಕಾರಣ ಮಳೆಯ ನೀರು ವಸಂತಕುಮಾರ್ ಅವರ ತೋಟಕ್ಕೆ ಹರಿಯುತ್ತಿದ್ದ ಕಾರಣ ಚರಂಡಿಯನ್ನು ಮಾಡಿದ್ದರು. ಇವರು ಚರಂಡಿ ಮಾಡಿರುವುದು ಮತ್ತು ಶ್ಯಾಡೋ ನೆಟ್ ಹಾಕಿ ತಡೆ ಬೇಲಿ ಹಾಕಿದ್ದರ ವಿರುದ್ದ ತಿಂಗಳಾಡಿಯ ಕೆಲವರು ಲೋಕೋಪಯೋಗಿ ಇಲಾಖೆಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಇಂಜಿನಿಯರ್ ತಡೆ ಬೇಲಿಯನ್ನು ಕಿತ್ತು ಹಾಕಿ ಮುಂದೆ ಬೇಲಿ ಹಾಕದಂತೆ ಸೂಚನೆಯನ್ನು ನೀಡಿದ್ದಾರೆ. ಲೋಕೋಪಯೋಗಿ ಇಲಾಖೆಯ ಕ್ರಮದ ಬಗ್ಗೆ ವಸಂತಕುಮಾರ್ ಆಕ್ರೋಶ ವ್ಯಕ್ತಪಡಿಸಿ ಇಲಾಖೆಗೆ ಪತ್ರವನ್ನು ಬರೆದಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಮನೆ ಮಾಲಿಕ ನಿವೃತ್ತ ಸೈನಿಕರಾದ ವಸಂತಕುಮಾರ್ ರವರು “ ನನ್ನ ಮನೆಯ ಮುಂಭಾಗದಲ್ಲಿ ಯಾರೋ ತ್ಯಾಜ್ಯ ಎಸೆಯುತ್ತಾರೆಂದು ಶ್ಯಾಡೋ ನೆಟ್ ಹಾಕಿದ್ದೆ. ತ್ಯಾಜ್ಯ ಹಾಕುವ ಕಾರಣ ಮನೆಯ ಪರಿಸರದಲ್ಲಿ ದುರ್ವಾಸನೆ ಬರುತ್ತಿತ್ತು. ತ್ಯಾಜ್ಯ ಹಾಕುವುದನ್ನು ತಡೆಯಲು ನೆಟ್ ಕಟ್ಟಿದ್ದೆ ಮತ್ತು ಇಲ್ಲಿನ ರಸ್ತೆ ಕಾಮಗಾರಿ ಮಾಡುವ ವೇಳೆ ಚರಂಡಿ ವ್ಯವಸ್ಥೆಯನ್ನು ಇಲಾಖೆ ಮಾಡದ ಕಾರಣ ರಸ್ತೆಯಲ್ಲಿ ಹರಿಯುವ ಮಳೆ ನೀರು ನನ್ನ ಕೃಷಿ ತೋಟಕ್ಕೆ ಬರುತ್ತಿತ್ತು ಮಳೆ ನೀರು ಮೋರಿಗೆ ಹರಿದು ಹೋಗಲು ಚರಂಡಿಯನ್ನು ಮಾಡಿದ್ದೆ. ನಾನು ಜಾಗ ಒತ್ತುವರಿ ಮಾಡಲು ನೆಟ್ ಕಟ್ಟಿದ್ದೂ ಅಲ್ಲ, ಚರಂಡಿ ಮಾಡಿದ್ದೂ ಅಲ್ಲ. ಯಾರೋ ನನ್ನ ಬಗ್ಗೆ ದೂರು ಕೊಟ್ಟಿರುವ ಕಾರಣ ಅಲ್ಲಿನ ಸಮಸ್ಯೆಯನ್ನು ತಿಳಿದುಕೊಳ್ಳದ ಇಂಜಿನಿಯರ್ ಬಂದು ತೆರವು ಮಾಡಿದ್ದಾರೆ. ರಸ್ತೆ ಬದಿಯ ಜಾಗವನ್ನು ಅತಿಕ್ರಮಿಸಿಕೊಳ್ಳುವ ಅಗತ್ಯವೂ ನನಗಿಲ್ಲ, ನನಗೆ ಸರಕಾರಿ ಜಾಗವೂ ಬೇಕಾಗಿಲ್ಲ. ಇದನ್ನು ಮನವರಿಕೆ ಮಾಡಿ ನಾನು ಇಲಾಖೆಗೆ ಪತ್ರವನ್ನು ಬರೆದಿದ್ದೇನೆ. ನನ್ನ ಮನೆಯ ಮುಂದೆ ರಸ್ತೆ ಬದಿಯಲ್ಲಿ ತ್ಯಾಜ್ಯ ಹಾಕಿದರೆ, ಮಳೆ ನೀರು ನನ್ನ ಕೃಷಿ ತೋಟಕ್ಕೆ ಹರಿದು ಬಂದರೆ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿರುವ ವಸಂತಕುಮಾರ್ ರವರು ರಸ್ತೆ ಮಾರ್ಜಿನ್ ಜಾಗವನ್ನು ಅತಿಕ್ರಮಿಸಿ ಕಟ್ಟಡ , ಅಂಗಡಿ ನಿರ್ಮಾಣ ಮಾಡಿದವರ ಮೇಲೆ ಯಾಕೆ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದು ಅನ್ಯಾಯದ ವಿರುದ್ದ ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.