ಪುತ್ತೂರು: ಮಂಗಳೂರು ಸಿಸಿಬಿ ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಹೇಶ್ ಪ್ರಸಾದ್ ಅವರನ್ನು ಸುರತ್ಕಲ್ ಠಾಣೆ ಇನ್ಸ್‌ಪೆಕ್ಟರ್ ಆಗಿ ನೇಮಕಗೊಳಿಸಿ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಮಹೇಶ್ ಪ್ರಸಾದ್ ಅವರನ್ನು ಕೆಲ ದಿನಗಳ ಹಿಂದೆ ಸಿಐಡಿಗೆ ವರ್ಗಾವಣೆ ಮಾಡಿ ಆದೇಶವಾಗಿತ್ತು. ಇದೀಗ ಅವರ ವರ್ಗಾವಣೆಯನ್ನು ಮಾರ್ಪಾಡುಗೊಳಿಸಿ ಸುರತ್ಕಲ್ ಇನ್ಸ್‌ಪೆಕ್ಟರ್ ಆಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.
ಉಗ್ರರ ವಿರುದ್ಧ ವಿಶೇಷ ಕಾರ್‍ಯಾಚರಣೆ ನಡೆಸಿದ ಪೊಲೀಸರಿಗೆ ಕೇಂದ್ರ ಗೃಹ ಸಚಿವಾಲಯ ನೀಡುವ ಪುರಸ್ಕಾರಕ್ಕೆ ಮೂಲತಃ ಪುತ್ತೂರಿನವರಾಗಿದ್ದು ಮಂಗಳೂರು ಸಿಸಿಬಿ ವಿಭಾಗದ ಇನ್ಸ್‌ಪೆಕ್ಟರ್ ಆಗಿದ್ದ ಮಹೇಶ್ ಪ್ರಸಾದ್‌ರವರು ಇತ್ತೀಚೆಗಷ್ಟೇ ಆಯ್ಕೆಯಾಗಿದ್ದರು. ಮಂಗಳೂರಿನ ಉಳ್ಳಾಲದಲ್ಲಿ ಕಾರ್‍ಯಾಚರಣೆ ನಡೆಸಿ ಐಸಿಸ್ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದವರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಹೇಶ್ ಪ್ರಸಾದ್‌ರವರ ಕಾರ್ಯ ದಕ್ಷತೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಪೊಲೀಸ್ ಇಲಾಖೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿ ಹಾವೇರಿ, ಬೆಂಗಳೂರು, ಹಿರಿಯಡ್ಕ, ಕೋಟ, ಬಂಟ್ವಾಳ ಮತ್ತು ಶೃಂಗೇರಿಯಲ್ಲಿ ಕಾರ್‍ಯ ನಿರ್ವಹಿಸಿದ್ದ ಇವರು ಬಳಿಕ ಇನ್ಸ್‌ಪೆಕ್ಟರ್ ಆಗಿ ಭಡ್ತಿ ಪಡೆದು ಕಾರವಾರ, ಮಣಿಪಾಲ, ಪುತ್ತೂರು ಮತ್ತು ಕಾಪು ಠಾಣೆಗಳಲ್ಲಿ ಕಾರ್‍ಯ ನಿರ್ವಹಿಸಿದ್ದು ಪ್ರಸ್ತುತ ಮಂಗಳೂರು ಸಿಸಿಬಿ ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಪೊಲೀಸ್ ಇಲಾಖೆಯಲ್ಲಿದ್ದ ರಘು ನಾಯ್ಕ್ ಮತ್ತು ಪುಷ್ಪಲತಾ ದಂಪತಿಯ ಪುತ್ರರಾದ ಮಹೇಶ್ ಪ್ರಸಾದ್‌ರವರು ಪುತ್ತೂರಿನಲ್ಲಿ ಜನಿಸಿದವರಾಗಿದ್ದು ಪ್ರಸ್ತುತ ಉಡುಪಿ ಜಿಲ್ಲೆಯ ಬ್ರಹ್ಮಾವರದ ಚೆರ್ಕಾಡಿ ನಿವಾಸಿಯಾಗಿದ್ದಾರೆ. ಮೂಡಬಿದ್ರೆಯ ಶ್ರೀ ಮಹಾವೀರ ಕಾಲೇಜ್‌ನ ಹಿರಿಯ ವಿದ್ಯಾರ್ಥಿಯಾಗಿರುವ ಮಹೇಶ್ ಪ್ರಸಾದ್‌ರವರು ತನ್ನ ಕರ್ತವ್ಯದ ಅವಧಿಯಲ್ಲಿ ಹಲವು ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಿ ಜನಮನ್ನಣೆ ಗಳಿಸಿದ್ದಾರೆ.