ಪುತ್ತೂರು: ವೀರಮಂಗಲ ಆನಾಜೆ ಶ್ರೀ ಮಹಾವಿಷ್ಣು ಸೇವಾ ಸಮಿತಿಯ 22ನೇ ವಾರ್ಷಿಕ ಸಂಭ್ರಮ-2022 ಹಾಗೂ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಡಿ.3ರಂದು ಸಂಜೆ ವೀರಮಂಗಲ ಆನಾಜೆ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯಲ್ಲಿ ನಡೆಯಿತು.
ವೀರಮಂಗಳ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ರಾಧಾಕೃಷ್ಣ ಶಗ್ರಿತ್ತಾಯರವರ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಕಾರ್ಯಕ್ರಮಗಳು ನಡೆಯಿತು. ವೇ.ಮೂ ಶ್ರೀವತ್ಸ ಕೆದಿಲಾಯ ಕಥಾ ಪ್ರವಚನ ನೀಡಿದರು. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು.
ಜಾಗ ಮಂಜೂರುಗೊಳಿಸಲು ಶಾಸಕರ ಮೂಲಕ ಸರಕಾರಕ್ಕೆ ಒತ್ತಡ-ಅರುಣ್ ಕುಮಾರ್ ಪುತ್ತಿಲ:
ಧಾರ್ಮಿಕ ಸಭೆವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಹಿಂದು ಸಮಾಜದ ಮುಂದೆ ನಾನಾ ಸವಾಲಗಳನ್ನು ಎದುರಿಸುತ್ತಿದೆ. ಧರ್ಮದ ಮೇಲೆ ಸವಾರಿಗಳು ನಡೆಯುತ್ತವೆ. ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ಸಾಮಾಜಿಕ ಬದ್ದತೆಯಲ್ಲಿ ರಾಷ್ಟ್ರ ಉಳಿಸಿ, ಸನಾತನ ಧರ್ಮದ ರಕ್ಷಣೆ ಮಾಡುತ್ತೇವೆ, ನ್ಯಾಯ ಒದಗಿಸುವ ಸಂಕಲ್ಪ ಮಾಡಬೇಕಾಗಿದೆ ಎಂದರು. ಮಹಾವಿಷ್ಣು ಸೇವಾ ಸಮಿತಿಗೆ ಅಗತ್ಯವಿರುವ ಭೂಮಿಯನ್ನು ಒದಗಿಸಲು ಶಾಸಕರಿಗೆ ಒತ್ತಡ ತರುವ ಮೂಲಕ ನಿಮ್ಮ ನೋವಿಗೆ ಬೆಂಬಲವಾಗಿ ಕೆಲಸ ಮಾಡುತೇವೆ. ಸಮಿತಿಯ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಎಲ್ಲಾ ನೋವು, ಸಮಸ್ಯೆಗಳಿಗೆ ನಿವಾರಿಸಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಜಾತಿವಾದ ಬಿಟ್ಟು ಒಂದಾಗುವುದೇ ನನಗೆ ನೀಡುವ ಸನ್ಮಾನ-ಡಾ.ಎಂ.ಕೆ ಪ್ರಸಾದ್:
ಸನ್ಮಾನ ಸ್ವೀಕರಿಸಿದ ಆದರ್ಶ ಆಸ್ಪತ್ರೆಯ ಡಾ.ಎಂ.ಕೆ ಪ್ರಸಾದ್ ಮಾತನಾಡಿ, ದೇಶದಲ್ಲಿ ಶೇ.20ರಷ್ಟು ದಲಿತರಿದ್ದು ಹಿಂದು ಧರ್ಮದವರನ್ನು ಕಾಯುವವರು ದಲಿತರು. ದಲಿತರನ್ನು ಸಹೋದರರಂತೆ ಕಾಣಬೇಕು. ಧರ್ಮಕ್ಕಾಗಿ ಯಾವುದೇ ಹಿಂದುಗಳಲ್ಲಿಯೂ ಜಗಳವಾಡುವುದಿಲ್ಲ. ನಾವು ಹಿಂದುಗಳ ಜೊತೆ ವ್ಯವಹಾರ ಮಾಡಬೇಕು. ಹಿಂದುಗಳಾದ ನಾವೆಲ್ಲರೂ ಒಂದೇ ಎಂದು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು. ದೇಶ ನಮ್ಮದು ಎಂಬ ಭಾವನೆ ನಮ್ಮಲ್ಲಿರಬೇಕು. ಜಾತಿ ವ್ಯವಸ್ಥೆ ಮುಖ್ಯವಲ್ಲ. ದೇಶ, ಧರ್ಮದ ವಿಚಾರ ಬಂದಾಗ ನಾವೆಲ್ಲ ಒಂದಾಗಬೇಕು ಎಂದ ಅವರು ಹಿಂದುಗಳಾದ ನಾವೆಲ್ಲರೂ ಜಾತಿವಾದ ಬಿಟ್ಟು ಒಂದಾಗಬೇಕು ಇದುವೇ ನನಗೆ ನೀಡುವ ದೊಡ್ಡ ಸನ್ಮಾನ, ಗೌರವವಾಗಿದೆ ಎಂದು ಹೇಳಿದರು.
ಸನಾತನ ಸಂಸ್ಕೃತಿಗಳ ಉಳಿವಿಗಾಗಿ ಒಂದಾಗಬೇಕು-ದಯಾನಂದ ಕತ್ತಲ್ಸಾರ್:
ಧಾರ್ಮಿಕ ಉಪನ್ಯಾಸ ನೀಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಮಾತನಾಡಿ, ಹಿಂದು ಧರ್ಮದ ಆಚರಣೆಗಳಲ್ಲಿ ವೈಜ್ಞಾನಿಕ ಚಿಂತನೆಗಳು ಒಳಗೊಂಡಿದೆ. ಪುರಾತನ ಸಂಸ್ಕೃತಿ, ಆಚರಣೆಗಳ ಹಿಂದು ಧರ್ಮದ ತಿರುಳು. ಅವುಗಳ ಆಚರಣೆಯೇ ಧರ್ಮದ ಉಳಿವು. ಆಚರಣೆ ಪ್ರಥಮ ದರ್ಮ. ಮಕ್ಕಳನ್ನು ಸಂಸ್ಕಾರ ನೀಡಿ ಬೆಳೆಸಬೇಕು. ನಮ್ಮ ಸಂಸ್ಕೃತಿಯ ಬಗ್ಗೆ ನಾವು ತಿಳಿದುಕೊಳ್ಳಬೇಕು. ಸಂಸ್ಕೃತಿಗೆ ದಕ್ಕೆ ಬರುವಾಗ ಹಿಂದುಗಳಾದ ನಾವೆಲ್ಲ ಒಗ್ಗಟ್ಟಾಗಬೇಕು. ನಮ್ಮೊಲಗಿನ ಭಿನ್ನಾಭಿಪ್ರಾಯ ಬಿಟ್ಟು ಸನಾತನ ಸಂಸ್ಕೃತಿಗಳ ಸನಾತನ ಸಂಸ್ಕೃತಿಗಳ ಉಳಿವಿಗಾಗಿ ಒಂದಾಗಬೇಕು ನಮ್ಮಲ್ಲಿ ರಾಜಕೀಯ ಚುನಾವಣಾ ಸಂದರ್ಭದಲ್ಲಿ ಮಾತ್ರವಿರಬೇಕು ಎಂದು ಹೇಳಿದ ಅವರು ಊರಿನ ಯುವಕ ಒಂದಾಗಿ ರಚಿಸಿರುವ ವಿಷ್ಣುಸೇವಾ ಸಮಿತಿ ವ್ಯಾಪಕವಾಗಿದೆ. ಅರ್ಥಪೂರ್ಣವಾದ ಸಮಿತಿ ರಚಿಸಿಕೊಂಡು ಅದ್ಬುತವಾದ ಸೇವೆ ನೀಡುತ್ತಿದೆ.
ಶಾಲೆಗಳಲ್ಲಿ ಮಕ್ಕಳಿಗೆ ಸಂಸ್ಕಾರ ನೀಡುವ ಯೋಜನೆಗಳು ಜಾರಿಗೊಳಿಸಬೇಕು-ದಿವ್ಯಪ್ರಭಾ ಗೌಡ:
ಮುಖ್ಯ ಅತಿಥಿಯಾಗಿದ್ದ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಮಾತನಾಡಿ, ಶಾಲೆಗಳಲ್ಲಿ ಮಕ್ಕಳಿಗೆ ಸಂಸ್ಕಾರ ನೀಡುವ ಯೋಜನೆಗಳನ್ನು ಜಾರಿಮಾಡಬೇಕು. ವೇದ ಉಪನಿಷತ್ತು ನೀಡುವ ಪಾಠಗಳನ್ನು ಅಳವಡಿಸಿಕೊಳ್ಳಲು ಸರಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಧರ್ಮ ರಕ್ಷಣೆ ಆಚರಣೆಯಲ್ಲಿ ಬಂದಾಗ ಮಾತ್ರ ರಕ್ಷಣೆ ಸಾಧ್ಯ. ಧಾರ್ಮಿಕವಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳುವ ಮೂಲಕ ಮಹಾವಿಷ್ಣು ಸೇವಾ ಸಮಿತಿ ಧರ್ಮ ರಕ್ಷಣೆಯ ಕಾರ್ಯದಲ್ಲಿ ತೊಡಗಿದೆ. ಸಮಿತಿಯ ಜಾಗದ ಸಮಸ್ಯೆ ಮುಂದಿನ ವರ್ಷದ ಕಾರ್ಯಕ್ರಮಕ್ಕೆ ಮುಂಚಿತವಾಗಿ ಪಡೆಯುವಂತಾಗಬೇಕು. ಇದಕ್ಕೆ ತನ್ನಿಂದಾಗುವ ಎಲ್ಲಾ ಸಹಕಾರ ನೀಡುವುದಾಗಿ ಹೇಳಿದರು.
ಶನೈಶ್ಚರ ಪೂಜೆಯ ಮೂಲಕ ಧಾರ್ಮಿಕ ಜಾಗೃತಿ-ಕೇಶವ ಪ್ರಸಾದ್ ಮುಳಿಯ:
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ನಮ್ಮಲ್ಲಿ ಧರ್ಮದ ಬಗ್ಗೆ ಜಾಗೃತಿಯಿರಬೇಕು. ಮಕ್ಕಳು ಧರ್ಮದ ಬಗ್ಗೆ ಯೋಚಿಸಬೇಕು. ಧರ್ಮ ಹೋದಾಗ ಅಧರ್ಮ ತಾಂಡವಾಡುತ್ತದೆ. ಸಾರ್ವಜನಿಕ ಶನೈಶ್ಚರ ಪೂಜೆಯ ಮೂಲಕ ಈ ಭಾಗದ ಜನರಲ್ಲಿ 22 ವರ್ಷಗಳಿಂದ ಧಾರ್ಮಿಕ ಪ್ರಜ್ಞೆ ಬೆಳೆಸಲಾಗುತ್ತಿದೆ. ಮುಂದಿನ ಜನಾಂಗಕ್ಕೆ ಧಾರ್ಮಿಕ ಆಲೋಚಿಬೇಕಾದ ಸಮಯದಲ್ಲಿದೆ. ಧಾರ್ಮಿಕ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವಷ್ಟು ವಿಜ್ಞಾನ ಬೆಳೆದಿಲ್ಲ ಎಂದು ಹೇಳಿದರು.
ಸೇವಾ ಸಮಿತಿಗೆ ಜಾಗ, ಕಟ್ಟಡದ ಆವಶ್ಯಕತೆಯಿದೆ-ಉಮೇಶ್ ಕೋಡಿಬೈಲು:
ಮಹಾವಿಷ್ಣು ಸೇವಾ ಸಮಿತಿ ಉಪಾಧ್ಯಕ್ಷ ಉಮೇಶ್ ಕೋಡಿಬೈಲು ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಕ್ರೀಡಾ ಭಾವನೆಯೊಂದಿಗೆ ವಿವಿಧ ರೂಪದಲ್ಲಿ ಮಹಾವಿಷ್ಣು ಸೇವಾ ಸಮಿತಿಯು ಸೇವೆ ನೀಡುತ್ತಾ ಬಂದಿರುತ್ತದೆ. ಶೈಕ್ಷಣಿಕ ದತ್ತ ಸ್ವೀಕಾರದ ಜೊತೆಗೆ ದತ್ತಿ ನಿಧಿ ನೀಡುತ್ತಿದೆ. ಸೇವೆಯ ಮೂಲಕ ಸಮಾಜದಲ್ಲಿ ಬೆರೆತುಕೊಂಡಿದೆ. 22 ವರ್ಷಗಳಿಂದ ನಿರಂತವಾಗಿ ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದರೂ ಹಲವು ಸಮಸ್ಯೆ ಹಾಗೂ ನೋವನ್ನು ಅನುಭವಿಸುತ್ತಾ ಬರುತ್ತಿದ್ದೆವೆ. ನಮಗೆ ಸ್ಥಳಾವಕಾಶ ಹಾಗೂ ಸಂಸ್ಥೆಗೆ ಕಟ್ಟಡ ಆವಶ್ಯಕತೆ ಇದೆ. ಮುಂದಿನ ಎರಡು ವರ್ಷದಲ್ಲಿ ಬೆಳ್ಳಿ ಹಬ್ಬ ನಡೆಯಲಿದ್ದು ಈ ಸಂದರ್ಭದಲ್ಲಿ ನಮ್ಮ ಬೇಡಿಕೆ ಈಡೇರುವ ನಿರೀಕ್ಷೆಯಲ್ಲಿದ್ದೇವೆ ಎಂದರು.
ಶಾಸಕ ಸಂಜೀವ ಮಠಂದೂರು, ಮಹಾವಿಷ್ಣ ಸೇವಾ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಐ.ಎಂ.ಕೆ-ಕೆ..ಎಸ್.ಬಿ ಡಾಕ್ಟರ್ಸ್ ಡೇ ಪ್ರಶಸ್ತಿ ಪುರಸ್ಕೃತರಾದ ಆದರ್ಶ ಆಸ್ಪತ್ರೆಯ ಡಾ. ಎಂ.ಕೆ ಪ್ರಸಾದ್ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ನಮೃತಾ, ಭವಿಷ್ಯ ಹಾಗೂ ಆತ್ಮಿಕಾ ಪ್ರಾರ್ಥಿಸಿದರು. ಸೇವಾ ಸಮಿತಿ ಉಪಾಧ್ಯಕ್ಷ ಉಮೇಶ್ ಕೋಡಿಬೈಲು ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ಪುಣೀತ್ ಸುಳಿವೇಲು ವರದಿ ವಾಚಿಸಿದರು. ಕಟ್ಟೆಪೂಜೆ ಸಮಿತಿ ಗೌರವಾಧ್ಯಕ್ಷ ವಸಂತ ಗೌಡ ಸೇರಾಜೆ, ಸದಸ್ಯರಾದ ಗುರು, ವಿಜಿತ್ ಆನಾಜೆ, ಸಂದೀಪ್ ಕಾಂತಿಲ, ಉಷಾ ಜಗನ್ನಾಥ, ನಿರಂಜನ, ಗುರುಪ್ರಸಾದ್ ಆಚಾರ್ಯ ಅತಿಥಿಗಳಿಗೆ ಫಲ ತಾಂಬೂಲ ನೀಡಿ ಸ್ವಾಗತಿಸಿದರು. ಗೋಪಾಲಕೃಷ್ಣ ವೀರಮಂಗಲ ಸನ್ಮಾನಿತರ ಪರಿಚಯ ಮಾಡಿದರು. ಯೋಗೀಶ್ ವೀರಮಂಗಲ ಕಾರ್ಯಕ್ರಮ ನಿರೂಪಿಸಿ, ನಿರಂಜನ ಕುಲಾಲ್ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು:
ರಾತ್ರಿ ಸಭಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆಯ ಬಳಿಕ ಶ್ರೀಕೃಷ್ಣ ಕಲಾಕೇಂದ್ರ ವೀರಮಂಗಲ, ಭಕ್ತಕೋಡಿ ಇದರ ವಿದ್ಯಾರ್ಥಿಗಳಿಂದ ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ ರಚಿಸಿ, ನಿರ್ದೇಶಿಸಿದ ಭರತನಾಟ್ಯ, `ವಿನಾಯಕ ಚರಿತೆ’ ನೃತ್ಯ ರೂಪಕ, ಸರಕಾರಿ ಹಿ.ಪ್ರಾ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಹಾಗೂ ಬಂಗಾರ್ ಕಲಾವಿದೆರ್ ಪುರುಷರಕಟ್ಟೆ ಇವರಿಂದ ನೈಜ ಘಟನೆ ಆಧಾರಿತ `ನಾಡ್ಂಡಲ ತಿಕ್ಕಂದ್’ ಎಂಬ ತುಳು ಹಾಸ್ಯಮಯ ನಾಟಕ ನಡೆಯಿತು.