ಪುತ್ತೂರು: ಮತದಾರರ ಗುರುತಿನ ಚೀಟಿ(ವೋಟರ್ ಐಡಿ)ಯನ್ನು ಅನಧಿಕೃತವಾಗಿ ಮುದ್ರಿಸಿ ವಿತರಣೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಇಲ್ಲಿನ ತಾಲೂಕು ಕಚೇರಿ ರಸ್ತೆಯ ಮೇದಿನಿ ಜನ ಸೇವಾ ಕೇಂದ್ರಕ್ಕೆ ಡಿ.5ರಂದು ಸಂಜೆ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ ಬೀಗ ಜಡಿದ ಬಳಿಕ ಡಿ.6ರಂದು ತನಿಖೆಯ ಹಿನ್ನೆಲೆಯಲ್ಲಿ ಪೊಲೀಸರು ಸಂಸ್ಥೆಯ ಕಂಪ್ಯೂಟರ್ ಅನ್ನು ಠಾಣೆಗೆ ಕೊಂಡೊಯ್ದಿದ್ದಾರೆ.
ಕಳೆದಿರುವ ವೋಟರ್ ಐಡಿಯನ್ನು ಮರು ಮುದ್ರಣ ಮಾಡಿದ ಆರೋಪಕ್ಕೆ ಸಂಬಂಧಿಸಿ ಮೇದಿನಿ ಜನಸೇವಾ ಕೇಂದ್ರದಲ್ಲಿ ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರ್ ಪರಿಶೀಲನೆ ನಡೆಸಿದ್ದರು. ತನಿಖೆ ವೇಳೆ ಭಾರತ ಚುನಾವಣಾ ಆಯೋಗದ ಹೆಸರಿರುವ ಸ್ಮಾರ್ಟ್ ಕಾರ್ಡ್ ಮಾದರಿಯ ಖಾಲಿ ಕಾರ್ಡ್ಗಳು ಪತ್ತೆಯಾಗಿತ್ತು. ಈ ಎಲ್ಲಾ ಬೆಳವಣಿಗೆಯಲ್ಲಿ ಸಂಸ್ಥೆಯ ಕಂಪ್ಯೂಟರ್ ಅನ್ನು ಪರಿಶೀಲನೆ ಮಾಡಲೆಂದು ಪುತ್ತೂರು ನಗರ ಠಾಣೆ ಪೊಲೀಸರು ಡಿ.6ರಂದು ಸಂಜೆ ಸಂಸ್ಥೆಯ ಕಚೇರಿಯ ಬೀಗವನ್ನು ಕಂದಾಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ತೆರೆದು ಅಲ್ಲಿನ ಕಂಪ್ಯೂಟರ್ನ್ನು ತನಿಖೆಗಾಗಿ ಠಾಣೆಗೆ ಕೊಂಡೊಯ್ದಿದ್ದಾರೆ ಎಂದು ತಿಳಿದು ಬಂದಿದೆ.