ಪುತ್ತೂರು: ಪ್ರತಿ ಮಗುವು ದೇವರ ವರ. ಹುಟ್ಟಿದ ಪ್ರತಿ ಮಗುವಿನಲ್ಲಿ ಒಂದಲ್ಲ ಒಂದು ಪ್ರತಿಭೆಯನ್ನು ದೇವರು ಕರುಣಿಸಿರುತ್ತಾನೆ. ಕೆಲವರು ಹುಟ್ಟಿನಿಂದಲೇ ವಿಶೇಷ ಪ್ರತಿಭಾ ಸಂಪನ್ನರಾಗಿ ಸಾಧನೆಯನ್ನು ತೋರಿಸುತ್ತಾರೆ. ಇನ್ನು ಕೆಲವರು ಬೆಳೆದು ದೊಡ್ಡವರಾದ ಮೇಲೆ ಸಾಧನೆಯನ್ನು ಓರೆಗೆ ಹಚ್ಚುವಲ್ಲಿ ಸಫಲರಾಗುತ್ತಾರೆ. ಆದರೆ ಇಲ್ಲೊಂದು ಮಗು ಅತೀ ಸಣ್ಣ ಪ್ರಾಯದಲ್ಲಿಯೇ ವಿಶೇಷ ಪ್ರತಿಭೆಯನ್ನು ತರ‍್ಪಡಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದ್ದಾನೆ.
ಹೌದು, ಎಳವೆ ಹಂತದಲ್ಲಿಯೇ ವಿಶೇಷ ಸಾಧನೆಗೈದ ಮಗುವಿನ ಹೆಸರು ವಿವಾನ್. ಹೆಸರಿನಲ್ಲಿಯೇ ‘ವಿ ವನ್’ ಜಯ ಮೇಳೈಸಿದೆ. ಮೊಟ್ಟೆತ್ತಡ್ಕ ನಿವಾಸಿ ಕರ‍್ಪೊರೇಶನ್ ಬ್ಯಾಂಕ್ ಬಿ.ಸಂಜೀವ ಹಾಗೂ ಸುಮ ದಂಪತಿ ಪುತ್ರ ನಿತಿನ್ ಕುಮಾರ್ ಹಾಗೂ ಸೊಸೆ ಅಕ್ಷತಾ ದಂಪತಿಯ ಪ್ರತಿಭಾವಂತ ಪುತ್ರನಾಗಿರುವ ವಿವಾನ್ ಗೆ ಪ್ರಸ್ತುತ 3 ವರ್ಷ 3 ತಿಂಗಳು 25 ದಿನಗಳ ಹರೆಯ. ವಿವಿಧ ಗಂಟೆಗಳನ್ನು ಸೂಚಿಸುವ ಗರಿಷ್ಠ ಗಡಿಯಾರಗಳ ಸಮಯವನ್ನು ಒಂದು ನಿಮಿಷದಲ್ಲಿ ಗುರುತಿಸುವ ಮೂಲಕ ಬಾಲಕ ವಿವಾನ್ ಇಂಡಿಯಾ ಬುಕ್ ಆಫ್ ರೆಕರ‍್ಡ್ ನಲ್ಲಿ ದಾಖಲೆಯನ್ನು ಸೃಷ್ಟಿಸಿದ್ದಾನೆ. ಕೈ ಚಿತ್ರದ ಮೂಲಕ ಬಿಡಿಸಿದ 45 ಗೋಡೆ ಗಡಿಯಾರಗಳ ಸಮಯವನ್ನು ಒಂದು ನಿಮಿಷದಲ್ಲಿ ಅತ್ಯಂತ ವೇಗವಾಗಿ ಗುರುತಿಸುವ ಮೂಲಕ ವಿವಾನ್ ಇಂತಹದ್ದೊಂದು ಸಾಧ್ಯತೆಯ ಮೂಲಕ ಸಾಧಕನೆನಿಸಿಕೊಂಡಿದ್ದಾನೆ.
ಮಗುವಿನ ಗ್ರಹಿಕಾ ಸಾರ‍್ಥ್ಯವನ್ನು ಗುರುತಿಸಿದ ಪೋಷಕರು, ಸೂಕ್ತ ತರಬೇತಿಯನ್ನು ನೀಡಿ ಈ ಸಾಧನೆಯನ್ನು ವಿಶೇಷ ವೇದಿಕೆಯ ಮೂಲಕ ಬೆಳಕಿಗೆ ತಂದಿದ್ದಾರೆ.
ಇದರ ಜೊತೆಗೆ ಒಂದು ಸಾವಿರದ ವರೆಗೆ ಸಂಖ್ಯೆಗಳನ್ನು ಬರೆಯುವುದು,ಶ್ಲೋಕಗಳನ್ನು ಹೇಳುವುದು, ಭಜನೆ ಹಾಡುಗಳನ್ನು ನೆನಪಿನಲ್ಲಿಟ್ಟುಕೊಂಡು ಹೇಳುವ ಮೂಲಕ ಉತ್ತಮ ಜ್ಞಾಪಕ ಶಕ್ತಿಯನ್ನೂ ಹೊಂದಿರುವ ಪುಟಾಣಿ
ವಿವಾನ್, ಉಜ್ವಲ ಭವಿಷ್ಯದ ಭರವಸೆಯಾಗಿ ಮೂಡಿಬರಲಿ ಎಂಬುದೇ ನಮ್ಮ ಹಾರೈಕೆ.