ಉಪ್ಪಿನಂಗಡಿ: ದೂರದೃಷ್ಟಿಯ ಯೋಜನೆಗಳನ್ನು ರೂಪಿಸಲು ಕರೆಯಲಾದ ವಿಶೇಷ ಗ್ರಾಮ ಸಭೆಯಲ್ಲಿ ಉಪ್ಪಿನಂಗಡಿ ಪುತ್ತೂರು ನಡುವಣ ರೈಲು ಮಾರ್ಗದ ಬೇಡಿಕೆಯನ್ನು ಒಳಗೊಂಡಂತೆ ಸಾವಿರಾರು ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ನಡೆಸಲು ಗ್ರಾಮಸ್ಥರು ಅಗ್ರಹಿಸಿದ ಘಟನೆ ನಡೆದಿದೆ.
ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಮುಳಿಯ ರವರ ಅಧ್ಯಕ್ಷತೆಯಲ್ಲಿ ನಡೆದ ಈ ವಿಶೇಷ ಗ್ರಾಮ ಸಭೆಯಲ್ಲಿ ಪುತ್ತೂರಿನ ಸಾಮಾಜಿಕ ವಲಯ ಅರಣ್ಯಾಧಿಕಾರಿ ಶ್ ವಿದ್ಯಾ ರಾಣಿ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು.
ಸಭೆಯಲ್ಲಿ ಉಪ್ಪಿನಂಗಡಿಯಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ, ರೈಲು ಸಂಪರ್ಕ , ಐಟಿಐ ಕಾಲೇಜು, ಗ್ಯಾಸ್ ಪೈಪು ಲೈನ್, ಮಹಿಳಾ ಹಾಸ್ಟೇಲ್, ಕ್ರೀಡಾಂಗಣ, ಈಜುಕೊಳ, ಪಾರ್ಕ್ , ಪಾರ್ಕಿಂಗ್ ಸೌಲಭ್ಯ ಸಹಿತ ಕಟ್ಟಡಗಳ ನಿರ್ಮಾಣ, ರಸ್ತೆ ಅಗಲೀಕರಣ ದಂತಹ ಬೇಡಿಕೆಗಳು ಗ್ರಾಮಸ್ಥರಿಂದ ವ್ಯಕ್ತವಾಯಿತು.
ಗ್ರಾಮಸ್ಥರ ಬೇಡಿಕೆಗಳು ದೊಡ್ಡ ಮಟ್ಟದ್ದು ಎನಿಸಿದರೂ ಇವುಗಳು ಒಂದು ಸುವ್ಯವಸ್ಥಿತ ಗ್ರಾಮದಲ್ಲಿ ಇರಬೇಕಾದ ಸೌಲಭ್ಯಗಳೇ ಆಗಿದ್ದು, ಭವಿಷ್ಯದಲ್ಲಿಯಾದರೂ ಇದು ಅನುಷ್ಠಾನವಾಗಲಿದೆ ಎಂದು ಪಂಚಾಯತ್ ಪಿಡಿಒ ರವಿಚಂದ್ರ ತಿಳಿಸಿದರು.
ಭಾರತೀಯ ಅಂಚೆ ಇಲಾಖಾ ಸಿಬ್ಬಂದಿ ಅಶೋಕ್ ಅಂಚೆ ಇಲಾಖಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ವಿನಾಯಕ ಪೈ, ಕಾರ್ಯದರ್ಶಿ ದಿನೇಶ್ ಎಂ. ಉಪಸ್ಥಿತರಿದ್ದರು.
ಗ್ರಾಮ ಸಭೆಯಲ್ಲಿ ಗಣ್ಯರಾದ ಚಂದಪ್ಪ ಕುಲಾಲ್, ಯತೀಶ್ ಶೆಟ್ಟಿ, ಶೋಭಾ ದಯಾನಂದ್, ಮಹಮ್ಮದ್ ತೌಶಿಫ್ , ಅಬ್ದುಲ್ ರಹಿಮಾನ್, ಭರಮಣ್ಣ, ಶಶಿಕಲಾ ಭಾಸ್ಕರ್, ಧರ್ಣಪ್ಪ ನಾಯ್ಕ, ಚಂದ್ರಹಾಸ ಹೆಗ್ಡೆ, ಇರ್ಷಾದ್ ಯು.ಟಿ. ಮತ್ತಿತರರು ಭಾಗವಹಿಸಿದರು.