ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಒಂಟಿ ಕಾಡಾನೆಯೊಂದು ಹಾಡಹಗಲೇ ನಾಡಿಗೆ ಬಂದು ಜನರಲ್ಲಿ ಭೀತಿ ಮೂಡಿಸಿದ ಘಟನೆ ನಡೆದಿದೆ.
ಅಡ್ಡಹೊಳೆಯ ಪೆಟ್ರೋಲ್ ಪಂಪಿನ ಬಳಿ ಕಾಡಿನಿಂದ ಹೆದ್ದಾರಿಗೆ ಬಂದ ಈ ಗಂಡಾನೆಯು ಹೆದ್ದಾರಿಯನ್ನು ದಾಟಲೆತ್ನಿಸಿದಾಗ ಹೆದ್ದಾರಿ ಅಗಲೀಕರಣ ಕಾರಣಕ್ಕೆ ಅಗೆಯಲ್ಪಟ್ಟ ಮಣ್ಣಿನಲ್ಲಿ ಹೂತು ಹೋಗಿ ಸಂಕಷ್ಠಕ್ಕೀಡಾಯಿತು. ಬಳಿಕ ಮೇಲೆದ್ದು ಸಾಗಿದ ಈ ಆನೆಯು ಅಯ್ಯಪ್ಪ ದೇವಾಲಯದ ಬಳಿಯಿಂದ ಪೇರಮಜಲು ರಸ್ತೆಯಲ್ಲಿ ಜನವಸತಿ ಪ್ರದೇಶದಿಂದ ಸಾಗಿ ಕಾಡು ಸೇರಿಕೊಂಡಿದೆ.
ಆನೆಯು ಸಾಗುವ ಪಥದಲ್ಲಿ ಜನರೇನಾದರೂ ಆನೆಯ ಆಕ್ರಮಣಕ್ಕೆ ತುತ್ತಾಗುವ ಭೀತಿಯಿಂದ ಗ್ರಾಮಸ್ಥರು ಬೊಬ್ಬೆ ಹೊಡೆದು ಆನೆಯ ಹಿಂದೆಯೇ ಓಡೋಡಿಕೊಂಡು ನಿವಾಸಿಗರನ್ನು ಎಚ್ಚರಿಸುತ್ತಿದ್ದರು. ರಾತ್ರಿ ವೇಳೆ ಈ ಪ್ರದೇಶದಲ್ಲಿ ಗೋಚರಿಸುವ ಕಾಡಾನೆಗಳು ಹಾಡಹಗಲೇ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನತೆ ಭಯಭೀತರಾದರು. ಆದರೆ ಕಾಣಿಸಿಕೊಂಡ ಆನೆಯು ಜನರಿಗಾಗಲಿ ಕೃಷಿ ಬೆಳೆಗಾಗಲಿ ಯಾವುದೇ ಹಾನಿ ಮಾಡದೇ ಜನರ ಬೊಬ್ಬೆಯ ನಡುವೆ ಕಾಡು ಸೇರಿಕೊಂಡಿತು.