ಆಲಂಕಾರು: ಮೂರ್ತೆದಾರರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ

0

ಆಲಂಕಾರು: ಮೂರ್ತೆದಾರರ ಸೇವಾ ಸಹಕಾರಿ ಸಂಘ ಆಲಂಕಾರು ಇದರ ಆಶ್ರಯದಲ್ಲಿ ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಯಿಲ, ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮಂಗಳೂರು ಮತ್ತು ಗ್ರಾಮ ಪಂಚಾಯತ್ ಆಲಂಕಾರು ಇದರ ಸಹಯೋಗದೊಂದಿಗೆ ತಜ್ಞ ವೈದ್ಯರಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ ಮತ್ತು ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು ಇವರಿಂದ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಡಿ.16 ರಂದು ಆಲಂಕಾರು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.


ಗಯಾಪದ ಕ್ಷೇತ್ರ ದಕ್ಷಿಣಕಾಶಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ ಅವರು ಶಿಬಿರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಾವು ಎಷ್ಟೇ ಸಂಪಾದನೆ ಮಾಡಿದರೂ ಅದರಿಂದ ಸುಖ ಪಡೆಯಲು ಸಾಧ್ಯವಿಲ್ಲ. ಇಂತಹ ಸೇವಾ ಚಟುವಟಿಕೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗಲಿದೆ.

ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘವೂ ಗ್ರಾಮೀಣ ಪ್ರದೇಶದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಆಯೋಜಿಸುವ ಮೂಲಕ ನೂರಾರು ಜನರ ಬಾಳಿಗೆ ಬೆಳಕಾಗಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ನೇತ್ರಾಧಿಕಾರಿ ಡಾ. ಅನಿಲ್ ರಾಮನುಜಮ್‌ರವರು ಮಾತನಾಡಿ, ಕಣ್ಣಿನ ನರಗಳಿಗೆ ಒತ್ತಡ ಬಂದಲ್ಲಿ ರಕ್ತ ಸಂಚಲನ ನಿಂತು ನರಗಳು ನಿಷ್ಕ್ರೀಯಗೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಬೇಕಾಗುತ್ತದೆ. ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 100ಕ್ಕಿಂತ ಹೆಚ್ಚು ಮಂದಿ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ.

ವೆನ್ಲಾಕ್ ಆಸ್ಪತ್ರೆಯ ಕಣ್ಣಿನ ವಿಭಾಗದಲ್ಲಿ ಅತ್ಯುತ್ತಮ ವ್ಯವಸ್ಥೆ ಇದ್ದು ತಜ್ಞ ವೈದ್ಯರ ತಂಡವೂ ಇದೆ ಎಂದರು. ಇನ್ನೋರ್ವ ಅತಿಥಿ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿ ಡಾ.ಸುಚಿತ್ರಾ ರಾವ್‌ರವರು ಮಾತನಾಡಿ, ಪ್ರತಿಯೊಬ್ಬರೂ ಅಂಧತ್ವದ ತೊಂದರೆಯಿಂದ ಮುಕ್ತರಾಗಬೇಕೆಂಬ ನಿಟ್ಟಿನಲ್ಲಿ ನೇತ್ರ ಚಿಕಿತ್ಸಾ ಶಿಬಿರಗಳು ನಡೆಯುತ್ತಿರುತ್ತವೆ. ಕಣ್ಣಿನ ಪೊರೆ ಇದ್ದವರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ನಾವು ನೇತ್ರದಾನ, ದೇಹದ ಯಾವುದೇ ಅಂಗಾಗ ದಾನ ಮಾಡುವವರಾಗಬೇಕೆಂದು ಹೇಳಿದರು. ಆಲಂಕಾರು ಗ್ರಾ.ಪಂ.ಅಧ್ಯಕ್ಷ ಸದಾನಂದ ಆಚಾರ್ಯರವರು ಮಾತನಾಡಿ, ಶಿಬಿರದ ಸದುಪಯೋಗ ಎಲ್ಲರೂ ಪಡೆದುಕೊಳ್ಳುವಂತೆ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗರವರು ಮಾತನಾಡಿ, ನೇತ್ರ ಚಿಕತ್ಸಾ ಶಿಬಿರ ಸಂಘಟನೆಗೆ ನೇತ್ರ ಚಿಕಿತ್ಸಾ ಶಿಬಿರ ಸಂಘಟಕರಾಗಿರುವ ಗಂಗಾಧರ ಶೆಟ್ಟಿಯವರು ಮಾರ್ಗದರ್ಶನ ನೀಡಿದ್ದಾರೆ. ಆನಂದಾಶ್ರಮ ಸೇವಾ ಟ್ರಸ್ಟ್‌ನ ಡಾ. ಗೌರಿ ಪೈ, ವಿವಿಧ ಸಂಘಟನೆಗಳೂ ಸಹಕಾರ ನೀಡಿವೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಶಿಬಿರಗಳು ಇನ್ನಷ್ಟೂ ನಡೆಯಬೇಕೆಂದು ಹೇಳಿದರು.

ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ನೇತ್ರಾಧಿಕಾರಿ ಡಾ.ಶಾಂತರಾಜ್, ಪುತ್ತೂರು ಆನಂದಾಶ್ರಮ ಸೇವಾ ಟ್ರಸ್ಟ್‌ನ ಡಾ.ಗೌರಿ ಪೈ, ಶ್ರೀ ಕ್ಷೇತ್ರ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಮೋದರ ಗೌಡ ಕಕ್ವೆ, ಆಲಂಕಾರು ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಲಿಂಗಪ್ಪ ಪೂಜಾರಿ, ಆಲಂಕಾರು ಗ್ರಾ.ಪಂ.ಪಿಡಿಒ ಜಗನ್ನಾಥ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ, 45 ನೇ ನೇತ್ರ ಚಿಕಿತ್ಸಾ ಶಿಬಿರದ ಸಂಘಟಕರೂ ಆದ ಗಂಗಾಧರ ಶೆಟ್ಟಿ ಹೊಸಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿಕಟಪೂರ್ವ ಅಧ್ಯಕ್ಷರೂ, ಹಾಲಿ ನಿರ್ದೇಶಕರೂ ಆದ ಕೆ. ಚಂದ್ರಶೇಖರ ಆಲಂಕಾರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಲಿಂಗಪ್ಪ ಪೂಜಾರಿ ನೆಯ್ಯಲ್ಗ ವಂದಿಸಿದರು. ನೆಟ್ಟಣ ಶಾಖಾ ವ್ಯವಸ್ಥಾಪಕ ಮಿಥುನ್‌ಸುಂದರ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಸ್ವಾತಿ, ಚೈತನ್ಯ ಪ್ರಾರ್ಥಿಸಿದರು.

ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷ ವಸಂತ ಪೂಜಾರಿ ಬದಿಬಾಗಿಲು, ನಿರ್ದೇಶಕರಾದ ಜಯಕರ ಪೂಜಾರಿ ಕಲ್ಲೇರಿ, ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ಜಿನ್ನಪ್ಪ ಸಾಲಿಯಾನ್ ಕಡಬ, ಗಂಗಾರತ್ನ ವಸಂತ್ ಎ., ಜಯಂತ ಪೂಜಾರಿ ನೆಕ್ಕಿಲಾಡಿ, ಮಂಜುಳಾ ಚಂದ್ರಶೇಖರ ಕಲ್ಲೇರಿ, ಜಯಪ್ರಕಾಶ್ ದೋಳ, ಎಂ.ಸಂತೋಷ್‌ಕುಮಾರ್ ಮತ್ರಾಡಿ, ಕಡಬ ಶಾಖೆ ಸಲಹಾ ಸಮಿತಿ ಅಧ್ಯಕ್ಷ ಆನಂದ ಟೈಲರ್ ಕಡಬ, ನೂಜಿಬಾಳ್ತಿಲ-ಕಲ್ಲುಗುಡ್ಡೆ ಶಾಖೆ ಸಲಹಾ ಸಮಿತಿ ಅಧ್ಯಕ್ಷ ಕುಸುಮಾಧರ ಎನ್ಕಾಜೆ, ನೆಟ್ಟಣ ಶಾಖೆ ಸಲಹಾ ಸಮಿತಿ ಅಧ್ಯಕ್ಷ ಸಂತೋಷ್‌ ಕುಮಾರ್, ಕೊಯಿಲ ಶಾಖಾ ಸಲಹಾ ಸಮಿತಿ ಅಧ್ಯಕ್ಷ ಜನಾರ್ದನ ಕದ್ರ ಹಾಗೂ ಸಂಘದ ಸಿಬ್ಬಂದಿಗಳು, ಪಿಗ್ಮಿ ಸಂಗ್ರಾಹಕರು ಸಹಕರಿಸಿದರು.

ಸನ್ಮಾನ:
ಸಮಾಜ ಸೇವೆಗಾಗಿ 2022 ನೇ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನೆಲ್ಯಾಡಿ ವಲಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ, 45 ನೇ ನೇತ್ರ ಚಿಕಿತ್ಸಾ ಶಿಬಿರದ ಸಂಘಟಕರೂ ಆದ ಗಂಗಾಧರ ಶೆಟ್ಟಿ ಹೊಸಮನೆ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೋಗೀಶ್ ಕುಮಾರ್‌ರವರು ಅಭಿನಂದನಾ ಪತ್ರ ವಾಚಿಸಿದರು. ಪುತ್ತೂರು ಆನಂದಾಶ್ರಮ ಸೇವಾ ಟ್ರಸ್ಟ್‌ನ ಡಾ. ಗೌರಿ ಪೈ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.


586  ಮಂದಿಯಿಂದ ತಪಾಸಣೆ:
ಶಿಬಿರದಲ್ಲಿ ಆಲಂಕಾರು ಅಸುಪಾಸಿನ ಗ್ರಾಮಗಳ ಸುಮಾರು 586 ಮಂದಿ ಕಣ್ಣಿನ ತಪಾಸಣೆ ಮಾಡಿಕೊಂಡರು. ೪೪೦ ಮಂದಿಗೆ ಪುತ್ತೂರಿನ ಆನಂದಾಶ್ರಮ ಸೇವಾ ಟ್ರಸ್ಟ್ ವತಿಯಿಂದ ಉಚಿತವಾಗಿ ಕನ್ನಡಕ ವಿತರಣೆ ಮಾಡಲಾಯಿತು. ೨೭ ಮಂದಿಯನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಗೊತ್ತು ಮಾಡಲಾಗಿದೆ.

LEAVE A REPLY

Please enter your comment!
Please enter your name here