ಪುತ್ತೂರು: 34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ದ.25ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವಕ್ಕೆ ದ.20ರಂದು ಹಸಿರು ಹೊರೆಕಾಣಿಕೆ ಸಮರ್ಪಣೆಯಾಗಲಿದೆ.
ಬೆಳಿಗ್ಗೆ 8.35ಕ್ಕೆ ನಿತ್ಯ ಮಹಾಪೂಜೆ, 9.30ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು ಬಳಿಕ ಏಕಕಾಲದಲ್ಲಿ ವಿವಿಧೆಡೆಯಿಂದ ಮೆರವಣಿಗೆಯಲ್ಲಿ ಶ್ರೀ ದೇವಳಕ್ಕೆ ಸಾಗಿ ಬಂದು ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ನಂತರ ಉಗ್ರಾಣ ಮುಹೂರ್ತ ನಡೆಯಲಿದ್ದು ಮುಖ್ಯ ಅತಿಥಿಯಾಗಿ ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಭಾಗವಹಿಸಲಿದ್ದಾರೆ. ಬಳಿಕ ಅನ್ನಛತ್ರ ಉದ್ಘಾಟನೆಯಾಗಲಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಲಿದ್ದು ಸಂಜೆ ಕ್ಷೇತ್ರದ ತಂತ್ರಿಗಳಿಗೆ ಹಾಗೂ ಇತರ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ ಜರಗಲಿದೆ. ನಂತರ ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದೆ.