ಜ.19ರವರೆಗೆ ನಂದಿನಿ ಸಿಹಿ ಉತ್ಪನ್ನಗಳ ಮೇಲೆ ಶೇ.20 ರಿಯಾಯಿತಿ
ಪುತ್ತೂರು: ಕೆಎಂಎಫ್ ವತಿಯಿಂದ ರಾಜ್ಯದಲ್ಲಿರುವ ಕೆಎಂಎಫ್ ಒಕ್ಕೂಟ, ಘಟಕ, ಮತ್ತು ಡಿಪೋಗಳಲ್ಲಿ ಡಿ.19ರಿಂದ ಜ.19ರವರೆಗೆ ಸೀಮಿತ ಅವಧಿಯವರೆಗೆ ಆಚರಿಸಲ್ಪಡುವ ನಂದಿನಿ ಸಿಹಿ ಉತ್ಸವದಲ್ಲಿ ವಿಶೇಷವಾಗಿ ಎಲ್ಲಾ ನಂದಿನಿ ಸಿಹಿ ಉತ್ಪನ್ನಗಳ ಮೇಲೆ ಶೇ.20 ರಿಯಾಯಿತಿ ನೀಡಲಾಗುತ್ತಿದೆ. ಇದರ ಪ್ರಯುಕ್ತ ದ.ಕ.ಹಾಲು ಒಕ್ಕೂಟದ ವತಿಯಿಂದ ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಅವಿನಾಶ್ ಭಂಡಾರ‍್ಕರ್‌ರವರ ನಂದಿನಿ ಫ್ರಾಂಚೈಸಿಯಲ್ಲಿ ನಂದಿನಿ ಸಿಹಿ ಉತ್ಸವ ಆಯೋಜಿಸಲಾಗಿದೆ. ದ.ಕ. ಹಾಲು ಉತ್ಪಾದಕರ ಒಕ್ಕೂಟ ಉಪಾಧ್ಯಕ್ಷ ಎಸ್. ಬಿ. ಜಯರಾಮ್ ರೈ ಬಳಜ್ಜ ಹಾಗೂ ನಿರ್ದೇಶಕ ನಾರಾಯಣ ಪ್ರಕಾಶ್‌ರವರು ಸಿಹಿ ಉತ್ಸವ ಉದ್ಘಾಟಿಸಿದರು.
ಬಳಿಕ ಎಸ್.ಬಿ.ಜಯರಾಮ ರೈ ಬಳಜ್ಜರವರು ಮಾತನಾಡಿ ರೈತರಿಂದ ಖರೀದಿಸಿದ ಹಾಲಿನಿಂದ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳನ್ನು ಒಕ್ಕೂಟ ನೀಡುತ್ತಿದೆ. ಗ್ರಾಹಕರಿಗೆ ವಿಶೇಷವಾಗಿ ಶೇ.20 ರಿಯಾಯಿತಿ ದರದಲ್ಲಿ ಒಂದು ತಿಂಗಳ ಕಾಲ ನೀಡಲಾಗುತ್ತಿದೆ. ಗ್ರಾಹಕರು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು. ನಾರಾಯಣ ಪ್ರಕಾಶರವರು ಮಾತನಾಡಿ ಹಾಲು ಒಕ್ಕೂಟ ರೈತರ ಸಂಸ್ಥೆಯಾಗಿದ್ದು ರೈತರ ಶ್ರೇಯೋಭಿವೃದ್ಧಿಯೊಂದಿಗೆ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಕಡಿಮೆ ಲಾಭಾಂಶ ಪಡೆದು ಮಾರಾಟ ಮಾಡಲಾಗುತ್ತಿದೆ. ಇದರ ಲಾಭಾಂಶವು ರೈತರಿಗೆ ಸಿಗಲಿದೆ. ಗ್ರಾಹಕರು ಅತೀ ಹೆಚ್ಚು ಉತ್ಪನ್ನಗಳನ್ನು ಖರೀದಿಸಬೇಕು ಎಂದು ವಿನಂತಿಸಿದರು. ಮಾರುಕಟ್ಟೆ ಅಧೀಕ್ಷಕ ಸದಾಶಿವ ನಾಯ್ಕ್ ಸ್ವಾಗತಿಸಿ ಅಭಿಯಾನ ತಂಡದ ಸಂಯೋಜಕ ಲೋಕೇಶ್ ಕುಮಾರ್ ವಂದಿಸಿದರು. ಡೈರಿ ಮೇಲ್ವಿಚಾರಕ ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.