ಬೆಟ್ಟಂಪಾಡಿ: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ಬೆಟ್ಟಂಪಾಡಿ ವಿದ್ಯಾಗಿರಿ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಸಂಗೀತ, ಭರತನಾಟ್ಯ, ಯಕ್ಷಗಾನ ತರಬೇತಿಗಳ ರಂಗಪ್ರಯೋಗ ‘ಕಲಾದರ್ಶಿನಿ – 22’ ಕಾರ್ಯಕ್ರಮ ದ. 18 ರಂದು ಜರಗಿತು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಶಿವಪ್ರಸಾದ್ ಇ. ಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ‘ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಆಂಗ್ಲಮಾಧ್ಯಮ ಶಾಲೆಗಳಲ್ಲಿ ಇಂಗ್ಲೀಷ್ ಭಾಷೆಯ ಮೂಲಕ ಕಲಿಕೆಯಾಗುತ್ತದೆಯೇ ಹೊರತು ಮಕ್ಕಳಲ್ಲಿ ಇಂಗ್ಲೀಷ್ ಸಂಸ್ಕೃತಿಯ ಕಲಿಕೆಯಲ್ಲ. ಪ್ರತಿನಿತ್ಯ ಇಲ್ಲಿ ನಡೆಸಲಾಗುವ ಪ್ರತಿಯೊಂದು ಚಟುವಟಿಕೆಗಳೂ ಭಾರತೀಯ ಸಂಸ್ಕೃತಿಗೆ ಪೂರಕ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವಂತಿವೆ’ ಎಂದರು.
ಮುಖ್ಯ ಅತಿಥಿಯಾಗಿದ್ದ ಪುತ್ತೂರು ಉಪವಿಭಾಗ ಪೊಲೀಸ್ ಉಪ ಅಧೀಕ್ಷಕ ವೀರಯ್ಯ ಹಿರೇಮಠ್ ರವರು ಮಾತನಾಡಿ ‘ಕಲಿಕೆಯಲ್ಲಿ ಶಿಸ್ತು ಮುಖ್ಯ. ಪರೀಕ್ಷೆ ಬಂದಾಗ ಓದುವುದಲ್ಲ. ವರ್ಷಾರಂಭದಿಂದಲೇ ಓದಿನಲ್ಲಿ ತೊಡಗಿಸಿಕೊಳ್ಳಬೇಕು. ನಾಳೆಯ ಪಾಠ ಇವತ್ತು ಓದಿ ಕ್ಲಾಸಿಗೆ ಬಂದಾಗ ಸುಲಭವಾಗಿ ವಿಷಯಗಳ ಮನನ ಮಾಡಿಕೊಳ್ಳಲು ಸಾಧ್ಯ. ಇಲ್ಲಿನ ಮಕ್ಕಳಲ್ಲಿ ಗುರು ಹಿರಿಯರಿಗೆ ಗೌರವ ಕೊಡುವ, ರಾಷ್ಟ್ರಭಕ್ತಿ ಎದ್ದು ಕಾಣುತ್ತಿದೆ. ಸಂಸ್ಕಾರಯುತ ಶಿಕ್ಷಣ ಪದ್ದತಿ ರಹಿತವಾದ ಶಿಕ್ಷಣ ವ್ಯವಸ್ಥೆಗಿಂತ ಹೊರತಾಗಿರುವ ವಿವೇಕಾನಂದ ಶಿಕ್ಷಣ ಸಂಸ್ಥೆಗಳು ತಮ್ಮದೇ ಆದ ವ್ಯವಸ್ಥೆಯಲ್ಲಿ ನೈತಿಕ ಶಿಕ್ಷಣವನ್ನೂ ಮಗುವಿನಲ್ಲಿ ಅಳವಡಿಸುತ್ತಿರುವುದರಿಂದ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ಕೊಡುತ್ತಿವೆ’ ಎಂದರು.
ಮುಖ್ಯ ಅತಿಥಿ ಬೆಂಗಳೂರಿನಲ್ಲಿ ಸಿಬಿಐ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಶಿವಾನಂದ ಪೆರ್ಲರವರು ಮಾತನಾಡಿ ‘ಅವಿರತ ಪರಿಶ್ರಮದಿಂದ ಯುವಸಂಪತ್ತು ಈ ದೇಶಕ್ಕೆ ಸದ್ಬಳಕೆಯಾಗಬೇಕು. ಮಕ್ಕಳು ಮಾತ್ರ ವಿದ್ಯಾರ್ಥಿಗಳಲ್ಲ. ಅವರ ಜೊತೆ ಪೋಷಕರಾದ ನಾವೂ ನಿತ್ಯ ಕಲಿಕಾರ್ಥಿಗಳಾಗಬೇಕು. ಸುಂದರ ಜೀವನಕ್ಕೆ ಕಷ್ಟಗಳು ಸಹಜ. ನನ್ನ ದೇಶಕ್ಕೆ ಕೊಡುಗೆಯಾಗುವ ವ್ಯಕ್ತಿಯಾಗಿ ಬೆಳೆದು ಯಾವುದಾದರೂ ಒಂದು ಕ್ಷೇತ್ರದಲ್ಲಿ ಸಾಧನೆ ತೋರಿ ನಾವು ಗುರುತಿಸಲ್ಪಡಬೇಕು’ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಯಕ್ಷಗಾನ ಹಾಸ್ಯ ಕಲಾವಿದ ಚನಿಯಪ್ಪ ನಾಯ್ಕ್‌ರವರು ಮಾತನಾಡಿ ‘ಅಂಕವೇ ಮಾನದಂಡವಲ್ಲ ಮತ್ತು ಜೀವನದ ಸಾಧನೆಯಲ್ಲ. ಸಮಾಜದಲ್ಲಿ ಉತ್ತಮ ವ್ಯಕ್ತಿಯೆನಿಸಿಕೊಳ್ಳುವ ಬದುಕನ್ನು ನಾವು ರೂಪಿಸಿಕೊಳ್ಳಬೇಕು. ಮೊಬೈಲ್‌ನಿಂದ ಮಕ್ಕಳನ್ನು ದೂರವಿಡಿ. ಪುಸ್ತಕವನ್ನು ತಲೆತಗ್ಗಿಸಿ ಓದಿದಾಗ ತಲೆ ಎತ್ತಿ ನಡೆಯುವಂತೆ ಮಾಡುತ್ತದೆ. ಆದರೆ ತಲೆತಗ್ಗಿಸಿ ಮೊಬೈಲ್ ನೋಡಿದರೆ ಅದು ತಲೆಎತ್ತದಂತೆ ಮಾಡುತ್ತದೆ’ ಎಂದ ಅವರು ವಿದ್ಯಾರ್ಥಿಗಳು, ಪೋಷಕರು ಮತ್ತು ಗುರುವಾದವನು ಹೇಗಿರಬೇಕೆಂಬುದನ್ನು ಹಾಸ್ಯ ನಿದರ್ಶನಗಳೊಂದಿಗೆ ಬಣ್ಣಿಸಿದರು.
ಸನ್ಮಾನ
ಕಾರಾಟೆ ಶಿಕ್ಷಕ ಸುರೇಶ್ ಕುಮಾರ್, ಸಂಗೀತ ಶಿಕ್ಷಕ ವಸಂತ ಗೋಸಾಡ, ಯಕ್ಷಗಾನ ನಾಟ್ಯ ತರಬೇತುದಾರ ಬಾಲಕೃಷ್ಣ ಪೂಜಾರಿ ಉಡ್ಡಂಗಳ, ಸೆಮಿ ಕ್ಲಾಸಿಕಲ್ ಡ್ಯಾನ್ಸ್ ತರಬೇತುದಾರೆ ವಿದ್ಯಾಶ್ರೀ ಸನತ್ ಶೆಟ್ಟಿ ಹಾಗು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಭರತನಾಟ್ಯ ಗುರು ಗಿರೀಶ್ ರವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶುಭಕರ ರೈ ಬೈಲಾಡಿ ಉಪಸ್ಥಿತರಿದ್ದರು.
ಮುಖ್ಯಗುರು ರಾಜೇಶ್ ಎನ್. ಸ್ವಾಗತಿಸಿ, ಶಾಲಾ ಸಂಚಾಲಕ ಡಾ. ಸತೀಶ್ ರಾವ್ ವಂದಿಸಿದರು.
ವಿದ್ಯಾರ್ಥಿನಿಯರಾದ ಅಪರ್ಣಾ, ಸಿಂಚನಾ, ಮಧುರ, ವಂದಿತಾ, ಇಂಚರ ಹಾಗು ವೈಷ್ಣವಿ ಶ್ಲೋಕ, ಪಂಚಾಂಗ, ಸುಭಾಷಿತ, ಅಮೃತವಚನ ಹೇಳಿದರು.
ಸಭಾ ಕಾರ್ಯಕ್ರಮದ ಮೊದಲು ಸಂಗೀತ ವಿದ್ಯಾರ್ಥಿಗಳಿಂದ ಸಂಗೀತ, ಬಳಿಕ ಭರತನಾಟ್ಯ, ಸೆಮಿಕ್ಲಾಸಿಕಲ್ ಡ್ಯಾನ್ಸ್, ಯಕ್ಷಗಾನ ಪ್ರದರ್ಶನಗೊಂಡಿತು.