ಪುತ್ತೂರು: ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಪ್ರತಿಭಾ ದಿನಾಚರಣೆ ಆಚರಿಸಲಾಯಿತು. ಶಾಲಾ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್ ಮಾತನಾಡಿ ವಿದ್ಯಾರ್ಥಿಗಳು ತಂದೆ ತಾಯಿಯರ ಇಚ್ಛೆಗೆ ಪೂರಕವಾಗಿ ಬೆಳೆದು ಸಂಸ್ಕಾರಯುತ ಜೀವನದ ಜೊತೆಗೆ ಪ್ರಭಾವಿ ವ್ಯಕ್ತಿಗಳಾಗಿ ಬೆಳೆಯಬೇಕೆಂದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹಾಗೂ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಮಾತನಾಡಿ ಶಿಕ್ಷಣ ವ್ಯವಸ್ಥೆ ಉದ್ಯಮ ಅಥವಾ ಕಮರ್ಷಿಯಲ್ ಆಗಿ ಇರುವ ಸಂದರ್ಭದಲ್ಲಿ ಈ ವಿದ್ಯಾಸಂಸ್ಥೆಯು ವಿದ್ಯೆಯನ್ನು ಸೇವೆಯ ರೀತಿಯಲ್ಲಿ ನೀಡುತ್ತಿದೆ. ಈ ಸಂಸ್ಥೆಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಧನ್ಯರು ಎಂದರು. ಪೋಷಕರು ಹಾಗೂ ದಿ ಸಿಟಿಜನ್ ಕೋ. ಆಪರೇಟಿವ್ ಬ್ಯಾಂಕ್ ಲಿ. ನಿರ್ದೇಶಕ ಕೆ. ಉಮೇಶ್ ಮಾತನಾಡಿ ಅಂಕ ಗಳಿಕೆಯ ಜೊತೆಗೆ ಒಂದು ಸಂಪೂರ್ಣ ವಿದ್ಯೆ ನೀಡುತ್ತಾ ವಿದ್ಯಾರ್ಥಿಗಳ ಸರ್ವಾಂಗಿಣ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಯು ಶ್ರಮಿಸುತ್ತಿದೆ ಎಂದರು.
ನರಿಮೊಗರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ಮಾತನಾಡಿ ಈ ವಿದ್ಯಾಸಂಸ್ಥೆಯಲ್ಲಿ ಸಂಸ್ಕಾರಯುತ ಯುವಜನಾಂಗವನ್ನು ನೀಡುತ್ತಿರುವುದು ಹೆಮ್ಮೆಯ ವಿಚಾರ. ವಿದ್ಯಾರ್ಥಿಗಳು ಅಬ್ದುಲ್ ಕಲಾಂನಂತೆ ಕಂಡ ಕನಸನನಸಾಗಿಸಲು ನಿದ್ದೆಯಿಲ್ಲದೆ ಶ್ರಮಪಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ, ಮಾತನಾಡಿ ಭಗವದ್ಗೀತೆಯನ್ನು ಮಕ್ಕಳು ಕಲಿಯುತ್ತಿರುವುದು ತುಂಬಾ ಸಂತೋಷದ ವಿಚಾರ. ಇದೇ ರೀತಿ ಸಂಸ್ಕಾರಯುತ ವಿದ್ಯೆಯನ್ನು ಕಲಿತು ಸತ್ಪ್ರಜೆಗಳಾಗಿ ಬಾಳಿ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ನಿವೃತ್ತ ಅಧಿಕಾರಿ ವಿಜಯಲಕ್ಷೀ, ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ, ಸದಸ್ಯರಾದ ಎಸ್.ಜಿ ಕೃಷ್ಣ, ಹರೀಶ್ ಪುತ್ತೂರಾಯರು ಉಪಸ್ಥಿತರಿದ್ದರು.
ಕಲಿಕೆಯಲ್ಲಿ ಮುಂದಿರುವ ಹಾಗೂ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯಗುರು ಜಯಮಾಲಾ ವಿ.ಎನ್ ಸ್ವಾಗತಿಸಿದರು. ವಾಣಿ ವಂದಿಸಿದರು. ನಮಿತಾ ಕಾರ್ಯಕ್ರಮ ನಿರ್ವಹಿಸಿದರು. ಪೋಷಕರು, ಶಿಕ್ಷಕ ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.