ನೆಹರೂನಗರ: ವಿವೇಕಾನಂದ ಸಿ ಬಿ ಎಸ್ ಇ ಶಾಲಾ ವಾರ್ಷಿಕೋತ್ಸವ

0

ಪುತ್ತೂರು : ನೆಹರೂ ನಗರದ ವಿವೇಕಾನಂದ ಸಿ ಬಿ ಎಸ್ ಇ ಶಾಲೆಯ ವಾರ್ಷಿಕೋತ್ಸವ ಇದೇ ಡಿ. 17 ರಂದು ವಿಜ್ರಂಭಣೆಯಿಂದ ನಡೆಯಿತು.

ಮಕ್ಕಳು ದೇಶದ ಹೆಮ್ಮೆಯ ಪ್ರಜೆಯಾಗಬೇಕು – ಶ್ರೀ ಸತೀಶ್ ರಾವ್
ಪ್ರತಿಕೂಲಾವಸ್ಥೆಯ ಸಂದರ್ಭದಲ್ಲಿ ಮಗು ತನ್ನ ವಿವೇಚನೆಯಿಂದ ಅದನ್ನು ಎದುರಿಸಿ, ಯಶಸ್ವಿಯಾಗಿ ದೇಶಕ್ಕೆ ಒಬ್ಬ ಯೋಗ್ಯ ವ್ಯಕ್ತಿಯಾಗುವಂತೆ ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಹಾಗೂ ಶಾಲೆಯ ಪಾತ್ರ ಮಹತ್ತರವಾದುದು.
ಅದಕ್ಕಾಗಿ ಶ್ರಮಿಸೋಣ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಶ್ರೀ ಸತೀಶ್ ರಾವ್ ಅವರು ತಿಳಿಸಿದರು.

ಮನೆಯೇ ಮೊದಲ ಪಾಠಶಾಲೆ – ನಿವೃತ್ತ ಯೋಧ ಎಸ್. ಶ್ರೀರಂಗ ಶಾಸ್ತ್ರಿ.
ರಾಷ್ಟ್ರೀಯತೆ ಎಂಬುವುದು ಹುಟ್ಟಿನಿಂದಲೇ ಪ್ರತಿಯೊಬ್ಬರಲ್ಲೂ ಇರುತ್ತದೆ. ಮನೆಯೇ ಮೊದಲ ಪಾಠಶಾಲೆ ; ತಾಯಿಯೇ ಮೊದಲ ಗುರು ಎಂಬಂತೆ ಮನೆಯ ಶಿಕ್ಷಣ ಅದನ್ನು ಮೊಳಕೆಯೊಡೆಸಿದರೆ; ಶಾಲಾ ಶಿಕ್ಷಣವು ದೇಶಭಕ್ತ ಪ್ರಜೆಯನ್ನು ಸೃಷ್ಟಿಸಿ ಬಲಿಷ್ಠ ರಾಷ್ಟ್ರದ ನಿರ್ಮಾಣ ಮಾಡುತ್ತದೆ.


ನಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರದೆ ಅವರ ಆಸಕ್ತಿಯನ್ನು ಗಮನಿಸಿ ಗುರಿ ತಲುಪಲು ಸಹಾಯ,ಸಹಕಾರ ನೀಡಬೇಕೆಂದು ಕಾರ್ಯಕ್ರಮದ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಯೋಧ ಎಸ್ ಶ್ರೀರಂಗ ಶಾಸ್ತ್ರಿ ಪೋಷಕರಿಗೆ ಕರೆ ನೀಡಿದರು. ಮಾತ್ರವಲ್ಲದೆ ಈ ಶಾಲೆಯ ಆಡಳಿತ ಮಂಡಳಿಯ ಉದ್ದೇಶವೇ ಸಮೃದ್ಧ ರಾಷ್ಟದ ನಿರ್ಮಾಣವಾಗಿದೆ. ನನ್ನ ಶಾಲೆ, ನನ್ನ ಊರು, ನನ್ನ ದೇಶ ಎಂಬ ಭಾವ ಮಕ್ಕಳಲ್ಲಿ ಮೊದಲು ಜಾಗೃತವಾಗಬೇಕೆಂದು ಶ್ರೀಯುತರು ತಿಳಿಸಿದರು.

ಮಕ್ಕಳಲ್ಲಿ ಆಗಾಗ ಬರುವ ತಲೆನೋವು – ಡಾ.ಕಿಶನ್ ರಾವ್.
ಮಂಗಳೂರು ಎಜೆ ಮೆಡಿಕಲ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಕಿಶನ್ ರಾವ್ ಅವರು ಇನ್ನೋರ್ವ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಕ್ಕಳ ಆರೋಗ್ಯದ ಪ್ರಾಮುಖ್ಯತೆಯ ಕುರಿತು ಮಾಹಿತಿ ನೀಡಿದರು.
ಹದಿಹರೆಯದ ವಯಸ್ಸಿನಲ್ಲಿ ಬರುವ ತಲೆನೋವು, ಕಣ್ಣಿನ ಸಮಸ್ಯೆ, ಪೋಷಕಾಂಶ ರಹಿತ ಜಂಕ್ ಫುಡ್ ನ ಅತಿಯಾದ ಸೇವನೆ, ಸಣ್ಣ ವಯಸ್ಸಿನ ಬೊಜ್ಜು, ಮಧುಮೇಹ ಇತ್ಯಾದಿಗಳ ಕುರಿತು ಗಂಭೀರವಾಗಿ ಪೋಷಕರಿಗೆ ತಿಳಿ ಹೇಳಿದರು.

ಶಿಕ್ಷಣದಲ್ಲಿ ಕ್ರಿಯಾತ್ಮಕ ಕಲಿಕೆಯ ಪಾತ್ರ – ಶ್ರೀ ಭರತ್ ಪೈ
ಮಕ್ಕಳು ದೇಶದ ಸಂಪತ್ತು. ಅವರ ಸರ್ವತೋಮುಖ ಬೆಳವಣಿಗೆಗೆ ಕಲಿಕೆ ಅತ್ಯಂತ ಪರಿಣಾಮಕಾರಿಯಾಗಿರಬೇಕು. ಮಕ್ಕಳಲ್ಲಿ ಕಲಿಕೆಯ ಕುರಿತು ಆಸಕ್ತಿ ಬೆಳೆಯಬೇಕಾದರೆ ಕ್ರಿಯಾತ್ಮಕ,ಚಟುವಟಿಕೆಯಾಧಾರಿತ ಶಿಕ್ಷಣ ಪ್ರಾಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪೋಷಕರ ಸಲಹೆ, ಸಹಕಾರದೊಂದಿಗೆ ನಮ್ಮ ಸಂಸ್ಥೆ ಹೆಜ್ಜೆಯನ್ನಿಡುತ್ತಿದೆ ಎಂದು ಶಾಲಾ ಸಂಚಾಲಕರಾದ ಶ್ರೀ ಭರತ್ ಪೈ ಅವರು ಹೇಳಿದರು.

ಸಭಾ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಶ್ರೀಮತಿ ವಸಂತಿ ಕೆ , ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರಾದ ಡಾ.ದೀಪಕ್ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಶ್ರೀಮತಿ ಸಿಂಧೂ ವಿ ಜಿ ಯವರು ಶಾಲೆಯ ವಾರ್ಷಿಕ ವರದಿಯನ್ನು ವಾಚಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ “ಏಕ್ ಭಾರತ್ ಶ್ರೇಫ್ಠ ಭಾರತ್” ಎಂಬ ವಿಷಯಕ್ಕನುಗುಣವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಶಾಲಾ ಶಿಕ್ಷಕ- ಶಿಕ್ಷಕೇತರ ಬಂಧುಗಳ ಸಹಯೋಗದೊಂದಿಗೆ ನಡೆದ ಸಂಭ್ರಮದ ವಾರ್ಷಿಕೋತ್ಸವಕ್ಕೆ ನೂರಾರು ಪೋಷಕ ಬಂಧುಗಳು ಹಾಗೂ ಊರ ಬಂಧುಗಳು ಸಾಕ್ಷಿಯಾದರು.

LEAVE A REPLY

Please enter your comment!
Please enter your name here