`ನಮ್ಮಲ್ಲಿರುವ ಸ್ವಾರ್ಥವನ್ನು ತೊರೆದು ಮಾನವೀಯತೆಯ ಬದುಕು ಬಾಳೋಣ’ ಕ್ರಿಸ್ಮಸ್ ಸಂದೇಶದಲ್ಲಿ ಬಿಷಪ್ ಡಾ|ಗೀವರ್ಗೀಸ್ ಮಾರ್ ಮಕಾರಿಯೋಸ್

0

ಪುತ್ತೂರು: ಪ್ರೀತಿಯ ಸಹೋದರ, ಸಹೋದರಿಯರೇ, ಎಲ್ಲರಿಗೂ ನನ್ನ ಆತ್ಮೀಯ ನಮನಗಳು. ದೇವರ ದಯೆಯಿಂದ ಮಗದೊಮ್ಮೆ ಕ್ರಿಸ್ತ ಜಯಂತಿಯ ಆಚರಣೆಯ ಸಂಭ್ರಮದಲ್ಲಿ ನಾವಿದ್ದೇವೆ. ಸಮಸ್ತ ಜನತೆಗೂ ಕ್ರಿಸ್ತ ಜಯಂತಿಯ ಹಾಗೂ ಹೊಸ ವರ್ಷದ ಶುಭಾಶಯಗಳನ್ನು ತುಂಬು ಹೃದಯದಿಂದ ಕೋರುತ್ತಿದ್ದೇನೆ. ಕ್ರಿಸ್ತ ಜಯಂತಿಯ ಆಚರಣೆ ಬಹುತೇಕ ಕ್ರೈಸ್ತ ಧರ್ಮಕ್ಕೆ ಸೀಮಿತವಾಗಿದ್ದರೂ ಅದು ನೀಡುವ ಸಂದೇಶ ಜಾಗತಿಕ ಹಾಗೂ ಸೀಮಾತೀತ ಎಂದು ಹೇಳ ಬಯಸುತ್ತೇನೆ. ಈ ಸಂದೇಶ ಎಂದೆಂದಿಗೂ ಎಲ್ಲೆಡೆಯಲ್ಲಿಯೂ ಪ್ರಸ್ತುತ ಹಾಗೂ ಜನಜನಿತ.


ಕ್ರಿಸ್ಮಸ್ ಅಂದರೆ ದೇವರ ಮಾನವ ಅವತಾರ. ಆದಿಯಿಂದಲೇ ಇದ್ದ ದೇವರು ಕಾಲ ಪೂರ್ಣತೆಯಲ್ಲಿ ಪಿತದೇವರ ಇಚ್ಛೆಯಂತೆ ಮಾನವನಾಗಿ ಈ ಧರೆಯಲ್ಲಿ ಹುಟ್ಟಿ ನಮ್ಮೊಡನೆ ಜೀವಿಸಿದ ಸಂಗತಿಯಾಗಿದೆ. ನಮ್ಮೊಡನೆ ಆಗಿರುವ ದೇವರು ಅಂದರೆ ದೇವರು ಮಾನವನಾಗಿ, ಮಾನವನ ಮಧ್ಯೆ ಮಾನವನಿಗಾಗಿ ಇರುವ ವಿಚಾರ. ಇದಕ್ಕೆ ದೇವರು ಕೊಟ್ಟ ಬೆಲೆ ಅಂದರೆ, ತನ್ನನ್ನು ತಾನೇ ಬರಿದು ಮಾಡಿ ಮಾನವನಾಗಿ ಹುಟ್ಟಿದ್ದು.

ಈ ಸಂದರ್ಭದಲ್ಲಿ ಮೊಳಗಿದ ಸಂದೇಶ: `ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ದೇವರೊಲಿದ ಮಾನವನಿಗೆ ಶಾಂತಿ ಸಮಾಧಾನ’. ಈ ಸಂದೇಶದಲ್ಲಿ ಯಾವುದೇ ಬೇಧಭಾವಗಳಿಲ್ಲ. ನಮ್ಮೆಲ್ಲರ ಬದುಕಿನ ಅದು ಯಾವುದೇ ಜಾತಿ-ಧರ್ಮಗಳಿಗೆ ಸೀಮಿತವಾಗಿದ್ದರೂ ದೇವರಿಗೆ ಮಹಿಮೆ ಸಲ್ಲುವಂತದ್ದಾಗಬೇಕು. ದೇವರೊಲಿದ ಮಾನವರಾಗಿ ದೇವರಿಗೆ ಮಹಿಮೆ ಸಲ್ಲಿಸುವ ಕಾರ್ಯಗಳು ನಮ್ಮಿಂದಾಗಬೇಕು. ಇದಕ್ಕೆ ನಾವು ಕೊಡಬೇಕಾದ ಬೆಲೆ ನಮ್ಮ ಸ್ವಾರ್ಥವನ್ನು ತೊರೆದು ಇತರರ ಪರವಾಗಿ ಬಾಳುವುದು. ಇದಕ್ಕೂ ಆಧಾರವಾಗಿರುವುದು ಮಾನವೀಯತೆ ಹಾಗೂ ದೇವರೊಂದಿಗೆ ನಿಮಗಿರುವ ವೈಯಕ್ತಿಕ ಸಂಬಂಧ.

ಇದರ ಮುಖಾಂತರ ಪರಸ್ಪರ ಅನ್ಯೋನ್ಯತೆ, ಸಹಭಾಗಿತ್ವ ಹಾಗೂ ಸೇವಾ ನಿಯೋಗದಿಂದ ಬಾಳಿ ಬದುಕಲು ಸಾಧ್ಯ. ಇದೇ ಇಂದಿನ ಅನಿವಾರ್ಯ ಹಾಗೂ ಆದ್ಯತೆಯ ಸಂಗತಿ. ಈ ಕ್ರಿಸ್ಮಸ್ ಆಚರಣೆ ಎಲ್ಲರಿಗೂ ಒಂದು ಸದವಕಾಶವಾಗಿ ಮೂಡಲಿ ಎಂದು ಹಾರೈಸುತ್ತೇನೆ ಎಂದು ಪುತ್ತೂರು ಮಲಂಕರ ಧರ್ಮಪ್ರಾಂತ್ಯದ ಬಿಷಪ್ ಡಾ|ಗೀವರ್ಗೀಸ್ ಮಾರ್ ಮಕಾರಿಯೋಸ್ ತಮ್ಮ ಕ್ರಿಸ್ಮಸ್ ಸಂದೇಶದಲ್ಲಿ ನುಡಿದಿರುತ್ತಾರೆ.

LEAVE A REPLY

Please enter your comment!
Please enter your name here