ಉಪ್ಪಿನಂಗಡಿ: ಸವಾರನನ್ನು ಕುಳ್ಳಿರಿಸಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ ಕುದುರೆಯೊಂದು ಬಸ್ಸಿಗೆ ಡಿಕ್ಕಿ ಹೊಡೆದ ಘಟನೆ ಬೆಳ್ತಂಗಡಿ ತಾಲೂಕಿನ ಪೆದಮಲೆ ಎಂಬಲ್ಲಿ ಭಾನುವಾರ ನಡೆದಿದ್ದು, ಘಟನೆಯಿಂದ ಕುದುರೆ ಸಾವೀಗೀಡಾಗಿದೆ. ಅದೃಷ್ಟವಶಾತ್ ಕುದುರೆ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಪಿಲಿಗೂಡು ಮೋನು ಎಂಬವರಿಗೆ ಸೇರಿದ ಕುದುರೆ ಇದಾಗಿದ್ದು, ಇವರ ಪುತ್ರ ಬೆಳಗ್ಗಿನ ಹೊತ್ತು ಕುದುರೆಯಲ್ಲಿ ಗುರುವಾಯನಕೆರೆ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ರೈಡಿಂಗ್ ಹೊರಟಿದ್ದ. ಆಗ ಈತನ ಪರಿಚಯದ ಅಡಿಕೆ ವರ್ತಕ ಸಚಿನ್ ಎಂಬವರು ಈ ಕುದುರೆಯ ಮೇಲೆ ತಾನೊಮ್ಮೆ ರೈಡಿಂಗ್ ಮಾಡುತ್ತೇನೆಂದು ಹೇಳಿ, ತಾನು ಕೂತು ರೈಡಿಂಗ್ ಹೊರಟಿದ್ದರು. ಕುದುರೆ ಓಡುತ್ತಿದ್ದ ಸಂದರ್ಭ ಪೆದಮಲೆ ಬಳಿಯ ತಿರುವಿನಲ್ಲಿ ಧರ್ಮಸ್ಥಳದಿಂದ ಉಪ್ಪಿನಂಗಡಿಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನ ಮುಂಭಾಗಕ್ಕೆ ಕುದುರೆಯ ತಲೆ ಹೋಗಿ ಬಡಿದಿದೆ. ಇದರಿಂದ ಸಚಿನ್ ಕುದುರೆಯ ಮೇಲಿನಿಂದ ಎಸೆಯಲ್ಪಟ್ಟಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ಸಿಗೆ ಡಿಕ್ಕಿಯಾಗುತ್ತಲೇ ಕುಸಿದು ಬಿದ್ದ ಕುದುರೆ, ಬಳಿಕ ಅಲ್ಲೇ ಹೊರಳಾಡಿ ಪ್ರಾಣ ಬಿಟ್ಟಿದೆ. ಕುದುರೆ ಬಿದ್ದ ಸಂದರ್ಭ ಕುದುರೆಯನ್ನು ಮಡಿಲಲ್ಲಿ ಮಲಗಿಸಿ ಆರೈಕೆ ಮಾಡುತ್ತಿದ್ದ ಕುದುರೆಯ ಯಜಮಾನನ ಪುತ್ರನ ಕೂಗು ಸ್ಥಳದಲ್ಲಿದ್ದವ ಕಣ್ಣಲ್ಲೂ ಕಣ್ಣೀರು ಬರಿಸಿತು. ಸಚಿನ್ ಅವರ ಬಳಿ ಕೂಡಾ ಕುದುರೆಯೊಂದಿದ್ದು, ಅವರು ಕೂಡಾ ಕುದುರೆ ಸವಾರಿಯ ಹವ್ಯಾಸವುಳ್ಳವರಾಗಿದ್ದಾರೆ. ಮೂಳೆಮುರಿತಕ್ಕೊಳಗಾಗಿರುವ ಸಚಿನ್ ಅವರನ್ನು ಚಿಕಿತ್ಸೆಗೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.