ಅಂಬಿಕಾ ಸಂಸ್ಥೆಗಳ ವತಿಯಿಂದ ಪೋಷಕರೊಂದಿಗೆ ಸಂವಾದ ಕಾರ್ಯಕ್ರಮ

0

ಪೋಷಕರ ನಡೆ ನುಡಿ ಮಕ್ಕಳ ಮೇಲೆ ಪರಿಣಾಮ: ಡಾ. ಗುರುರಾಜ ಕರಜಗಿ

ಪುತ್ತೂರು: ಮಕ್ಕಳು ಹೆಚ್ಚಿನ ಸಮಯವನ್ನು ಶಾಲೆ ಕಾಲೇಜುಗಳಲ್ಲಿ ವ್ಯಯಿಸುತ್ತಾರೆ ಎಂಬ ಭಾವನೆ ಪೋಷಕರಲ್ಲಿದೆ. ಆದರೆ ಮಕ್ಕಳು ದಿನದಲ್ಲಿ ಸುಮಾರು 16 ಗಂಟೆಗಳ ಕಾಲ ಮನೆಯಲ್ಲಿಯೇ ಸಮಯ ಕಳೆಯುತ್ತಾರೆ. ಮನೆಯಲ್ಲಿರುವ ಸಂದರ್ಭದಲ್ಲಿ ಪೋಷಕರ ಹಾಗೂ ಹಿರಿಯರ ಗುಣ ನಡತೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದನ್ನೇ ಅನುಕರಣೆ ಮಾಡುತ್ತಾರೆ. ಆದ್ದರಿಂದ ಹೆತ್ತವರು ತಮ್ಮ ನಡೆ, ನುಡಿ, ನಡತೆಯ ಕುರಿತು ಹೆಚ್ಚಿನ ಜಾಗರೂಕತೆ ವಹಿಸಬೇಕಾದ ಅವಶ್ಯಕತೆ ಇದೆ ಎಂದು ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಹೇಳಿದರು.

ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಬಪ್ಪಳಿಗೆಯಲ್ಲಿನ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯ ಆವರಣದಲ್ಲಿರುವ ಶ್ರೀ ಶಂಕರ ಸಭಾಭವನದಲ್ಲಿ ಶನಿವಾರ ಆಯೋಜಿಸಲಾದ ಪೋಷಕರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಮಕ್ಕಳು ಪೋಷಕರನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ ಎಂಬುದು ಗಮನದಲ್ಲಿರಬೇಕು. ಅವರ ಸಮ್ಮುಖದಲ್ಲಿ ತಂದೆ- ತಾಯಿ ಗಲಾಟೆ ಮಾಡಿದಲ್ಲಿ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಪ್ರಾಥಮಿಕ ಹಂತದಲ್ಲಿ ಪ್ರೀತಿಯಿಂದ ಮಕ್ಕಳ ಜೊತೆಗೆ ವ್ಯವಹರಿಸುವ ಮೂಲಕ ಅವರ ಬೇಕು ಬೇಡಗಳನ್ನು ತಿಳಿದುಕೊಳ್ಳಬೇಕು. ಪ್ರೌಢಾವಸ್ಥೆಯಲ್ಲಿ ನಿಗಾ ಇಡಬೇಕು ಹಾಗೂ ದಾರಿ ತಪ್ಪುವುದು ಕಂಡಲ್ಲಿ ತಿದ್ದಬೇಕು. ಕಾಲೇಜು ಹಂತದಲ್ಲಿ ಗೆಳೆಯರಂತೆ ಇದ್ದು, ಅವರ ಜೀವನದ ಗುರಿ ಸಾಧನೆಗೆ ಪ್ರೋತ್ಸಾಹ ನೀಡಬೇಕಿದೆ ಎಂದು ಕಿವಿ ಮಾತು ಹೇಳಿದರು.

ಸಮಯ ನೀಡಿ:

ಇಂದಿನ ಮಕ್ಕಳಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಸೌಲಭ್ಯ ಲಭಿಸುತ್ತಿದೆ. ಆದರೆ ಪೋಷಕರೊಂದಿಗೆ ಹೆಚ್ಚಿನ ಸಮಯ ಕಳೆಯುವ, ಅವರೊಂದಿಗೆ ಮಾತನಾಡುವ ಅವಕಾಶ ಲಭಿಸುತ್ತಿಲ್ಲ. ಹಾಗಾಗಿ ದಿನ ನಿತ್ಯ ಮಕ್ಕಳ ಚಟುವಟಿಕೆ ಬಗ್ಗೆ ಮಾತನಾಡಿ, ಅರಿತುಕೊಳ್ಳಬೇಕು. ಮಕ್ಕಳ ಮಾತುಗಳನ್ನು ಆಸಕ್ತಿಯಿಂದ ಕೇಳಿಸಿಕೊಂಡಾಗ ಅವರೂ ಮುಕ್ತವಾಗಿ ಪೋಷಕರೊಂದಿಗೆ ವ್ಯವಹರಿಸುತ್ತಾರೆ. ಹೆಚ್ಚು ಒತ್ತಡವನ್ನೂ ಹೇರದೆ, ಹೆಚ್ಚು ಸಲುಗೆಯನ್ನೂ ನೀಡದೆ ಸಮಚಿತ್ತತೆಯಿಂದ ಮಕ್ಕಳನ್ನು ಬೆಳೆಸಬೇಕಿದೆ ಮತ್ತು ಮಕ್ಕಳಿಗೆ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಬೆಳವಣಿಗೆ ಹೊಂದಲು ಪ್ರೋತ್ಸಾಹ ನೀಡಬೇಕಿದೆ ಎಂದರು.

ಸ್ವಾವಲಂಬಿ ಜೀವನ :

ಇಂದಿನ ಕೆಲ ಮಕ್ಕಳು ಮನೆಗಳಲ್ಲಿ ಶ್ರೀಮಂತಿಕೆಯಿಂದ ಬದುಕುತ್ತಾರೆ, ಆದರೆ ಹೊರ ಜಗತ್ತಿನೊಂದಿಗೆ ಯಾವ ರೀತಿ ಬೆರೆಯಬೇಕು ಎಂಬ ವಿಚಾರ ಅರಿಯುವಲ್ಲಿ ಎಡವುತ್ತಾರೆ. ದೈನಂದಿನ ಚಟುವಟಿಕೆ ನಡೆಸುವ ವಿಚಾರವೂ ತಿಳಿದಿರುವುದಿಲ್ಲ. ಆದ್ದರಿಂದ ಮಕ್ಕಳು ಸ್ವಾವಲಂಬಿ ಜೀವನ ಸಾಧಿಸಲು ಬೇಕಾದ ವಿಚಾರಗಳನ್ನು ಅರಿಯುವಂತೆ ಮಾಡಬೇಕಿದೆ ಎಂದು ಡಾ.ಕರಜಗಿ ಪೋಷಕರಿಗೆ ಕಿವಿಮಾತು ಹೇಳಿದರು.

ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ, ವಿಶ್ರಾಂತ ಪ್ರಾಚಾರ್ಯ ಡಾ.ಹೆಚ್.ಮಾಧವ ಭಟ್, ಪೋಷಕರು ಹಾಗೂ ಶಿಕ್ಷಕರು ಜೊತೆಯಾದಾಗ ಮಾತ್ರ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಲು ಸಾಧ್ಯ. ಮಕ್ಕಳ ಪ್ರತೀ ಹಂತದ ಬೆಳವಣಿಗೆಗಳನ್ನು ಚರ್ಚಿಸಿದಾಗ ಅವರ ಬೇಕು, ಬೇಡಗಳನ್ನು ನಿರ್ಧರಿಸಿ ಅವರು ಉತ್ತಮ ಸಾಧನೆ ಮಾಡುವಂತೆ ಪ್ರೇರೇಪಿಸಲು ಸಾಧ್ಯ. ಶೈಕ್ಷಣಿಕ ಹಂತದಲ್ಲಿ ಗೊಂದಲಗಳನ್ನು ಪರಿಹರಿಸಿ, ಉತ್ತಮ ಮಾರ್ಗದರ್ಶನ ನೀಡಿದಾಗ ಯಶಸ್ವೀ ಪ್ರಜೆಯನ್ನು ರೂಪಿಸಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಮಕ್ಕಳಿಗೆ ಜೀವನ ಶಿಕ್ಷಣ ನೀಡುವ ಕಾರ್ಯ ಅತ್ಯಂತ ಅಗತ್ಯ. ದೇಶದಲ್ಲಿ ಜವಾಬ್ದಾರಿಯುತ ವ್ಯಕ್ತಿಗಳನ್ನು ನಿರ್ಮಿಸುವ ಸಲುವಾಗಿ, ಸರ್ವತೋಮುಖ ಅಭಿವೃದ್ಧಿಗೆ ಬೇಕಾದ, ಸ್ವಾವಲಂಬಿ ಜೀವನಕ್ಕೆ ಬೇಕಾದ ವಿಚಾರಗಳನ್ನು ಕಲಿಸುವುದು ಮುಖ್ಯ ಎಂದರು.

ಪೋಷಕರು ಹಾಗೂ ಸಾರ್ವಜನಿಕರ ಪ್ರಶ್ನೆಗಳಿಗೆ ಡಾ. ಗುರುರಾಜ ಕರಜಗಿ ಅವರು ಉತ್ತರಿಸಿದರು. ಬೆಂಗಳೂರಿನ ವಿಶ್ರಾಂತ ಪ್ರಾಂಶುಪಾಲ ಡಾ.ಎಂ.ಸಿ.ಪ್ರಕಾಶ್, ನಟ್ಟೋಜ ಫೌಂಡೇಶನ್ ಟ್ರಸ್ಟ್ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ. ಸ್ವಾಗತಿಸಿ, ಶಿಕ್ಷಕಿ ಸುಷ್ಮಾ ವಂದಿಸಿದರು. ರಮ್ಯಲಕ್ಷ್ಮೀ ನಿರೂಪಿಸಿದರು.

ಸೋಲನ್ನು ಸ್ವೀಕರಿಸಲು ಕಲಿಸಬೇಕು:

ಹಿಂದಿನ ಕಾಲದಲ್ಲಿ ಮನೆಯಲ್ಲಿ ಹಲವು ಮಕ್ಕಳಿದ್ದರೂ ತಂದೆ ತಾಯಿ ಜೀವನ ರೂಪಿಸಿಕೊಳ್ಳುವ ಶಿಕ್ಷಣವನ್ನು ಮಕ್ಕಳಿಗೆ ತಿಳಿಸುತ್ತಿದ್ದರು. ಇಂದಿನ ಯುವಜನತೆಗೆ ಪೋಷಕರು ಎಲ್ಲಾ ವ್ಯವಸ್ಥೆಗಳನ್ನು ನೀಡುತ್ತಾರೆ, ಕೇಳಿದ್ದನ್ನು ಕೊಡಿಸುತ್ತಾರೆ. ಆದರೆ ಸ್ಪರ್ಧಾತ್ಮಕ ಜಗತ್ತಿಗೆ ಕಾಲಿಟ್ಟಾಗ ವಿದ್ಯಾರ್ಥಿಗಳು ಗಲಿಬಿಲಿಗೊಳ್ಳುತ್ತಿದ್ದಾರೆ. ಪರೀಕ್ಷೆಯಲ್ಲಿ ಸ್ವಲ್ಪ ಕಡಿಮೆ ಅಂಕ ಬಂದರೂ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಆದ್ದರಿಂದ ಸೋಲುಗಳ ಕುರಿತು ಅಥವಾ ಬದುಕಲು ಇರುವ ಹಲವು ದಾರಿಗಳ ಕುರಿತು ಮಕ್ಕಳಿಗೆ ಅರಿವು ಮಾಡಿಸಬೇಕು.

– ಡಾ.ಗುರುರಾಜ ಕರಜಗಿ

LEAVE A REPLY

Please enter your comment!
Please enter your name here