ಪುತ್ತೂರು: ಸುಮಾರು 300 ವರ್ಷಗಳ ಇತಿಹಾಸವಿರುವ ಮುಂಡೂರು ಗ್ರಾಮದ ಅಜಲಾಡಿ ಉದಯಗಿರಿಯ ಕಾರಣಿಕ ಕ್ಷೇತ್ರ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಒತ್ತೆಕೋಲವು ಡಿ.30ರಿಂದ ಪ್ರಾರಂಭಗೊಂಡು ಜ.2ರ ತನಕ ವೇ.ಮೂ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಡಗರ, ಸಂಭ್ರಮದಿಂದ ಜರುಗಲಿದೆ.
ಕಾರಣಿಕ ಕ್ಷೇತ್ರ ಅಜಲಾಡಿ ಉದಯಗಿರಿ….!
ಪುತ್ತೂರು ಪಟ್ಟಣದಿಂದ ಸುಮಾರು 8 ಕಿ.ಮೀ ದೂರದ ಅಜಲಾಡಿ ಉದಯಗಿರಿಯ ಪ್ರಕೃತಿ ರಮಣಿಯ ತಾಣದಲ್ಲಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನವಿದೆ. ಶ್ರೀಕ್ಷೇತ್ರದಲ್ಲಿ ವಿಷ್ಣುಮೂರ್ತಿ ಪ್ರಧಾನ ದೈವವಾಗಿ ಮತ್ತು ಗುಳಿಗ ಸಾನಿಧ್ಯವೂ ಇದೆ. ಶ್ರೀಕ್ಷೇತ್ರವು ಕುರಿಯ, ಕೆಮ್ಮಿಂಜೆ, ಮುಂಡೂರು ಹಾಗೂ ನರಿಮೊಗರು ಗ್ರಾಮದ ವ್ಯಾಪ್ತಿಗೆ ಸಂಬಂಧಿಸಿರುವುದಾಗಿ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿದೆ.
ಮನುಷ್ಯರಿಗೆ ಬಾಧಿಸುವ ನಾನಾ ರೀತಿಯ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಈ ದೈವಸ್ಥಾನದ ಮುಂದೆ ನಿಂತು ಪ್ರಾರ್ಥಿಸಿಕೊಂಡಾಗ ಖಾಯಿಲೆಗಳು ಶೀಘ್ರ ಗುಣಮುಖಗೊಂಡಿರುವ ಅನೇಕ ನಿದರ್ಶನಗಳಿವೆ. ವಾಹನಗಳಿಗೆ ತಾಂತ್ರಿಕ ತೊಡಕುಂಟಾದಾಗ ಭಕ್ತಿಯಿಂದ ಪ್ರಾರ್ಥಿಸಿದರೆ ಸಂಚಾರಕ್ಕೆ ಅನುವು ಆಗಿರುವ ನಿದರ್ಶನಗಳಿವೆ. ಪ್ರತಿವರ್ಷ ನಡೆಯುವ ಒತ್ತೆಕೋಲದ ಸಂದರ್ಭದಲ್ಲಿ ಸಮಾರು 5000ಕ್ಕೂ ಅಧಿಕ ಮಂದಿ ಭಕ್ತರು ಪಾಲ್ಗೊಳ್ಳುತ್ತಿರುವುದು ಈ ಕ್ಷೇತ್ರದ ಇನ್ನೊಂದು ಕಾರಣಿಕ, ಮಹಿಮೆಯೇ ಆಗಿದೆ.
60 ದಿನದಲ್ಲಿ ರೂ.60ಲಕ್ಷದಲ್ಲಿ ಜೀರ್ಣೋದ್ಧಾರ…!
ದೈವಸ್ಥಾನದಲ್ಲಿ ಪ್ರಮುಖವಾಗಿ ತಾಮ್ರದ ಹೊದಿಕೆಯೊಂದಿಗೆ ವಿಷ್ಣುಮೂರ್ತಿ ದೈವಸ್ಥಾನ, ಗುಳಿಗ ದೈವದ ಕಟ್ಟೆ, ತೀರ್ಥಬಾವಿ, ಆಡಳಿತ ಕಚೇರಿ, ಭಕ್ತರ ಅನುಕೂಲತೆಗಾಗಿ ದೈವಸ್ಥಾನದ ಮುಂಭಾಗದಲ್ಲಿ ಶೀಟ್‌ನ ಛಾವಣಿ, ನೆಲಕ್ಕೆ ಗ್ರಾನೈಟ್, ಹೊರಾಂಗಣದಲ್ಲಿ ಇಂಟರ್‌ಲಾಕ್ ಅಳವಡಿಕೆ, ಸ್ಟೀಲ್ ರೈಲಿಂಗ್ಸ್, ದೈವಸ್ಥಾನದ ಸುತ್ತ ಆವರಣಗೋಡೆ, ತಡೆಗೋಡೆ, ಶಾಶ್ವತ ರಸ್ತೆ ನಿರ್ಮಾಣ ಸೇರಿದಂತೆ ಸುಮಾರು ರೂ.60ಲಕ್ಷ ವೆಚ್ಚದಲ್ಲಿ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರದ ಕಾಮಗಾರಿಗಳು ನಡೆದು ಜಿಲ್ಲೆಯಲ್ಲಿ ಮಾದರಿ ದೈವಸ್ಥಾನವಾಗಿ ನಿರ್ಮಾಣವಾಗಿದೆ.
ಈ ಎಲ್ಲಾ ಕಾಮಗಾರಿಗಳು ಜೀರ್ಣೋದ್ಧಾರಕ್ಕೆ ಚಾಲನೆ ನೀಡಿದ ಕೇವಲ 60 ದಿನಗಳಲ್ಲಿ ಒಟ್ಟು ರೂ.60ಲಕ್ಷದ ಕಾಮಗಾರಿಗಳು ಪೂರ್ಣಗೊಂಡು ಬ್ರಹ್ಮಕಲಶೋತ್ಸವ ನೆರವೇರಿಸುವ ಮೂಲಕ ದೈವಸ್ಥಾನವೂ ಮತ್ತೊಂದು ಇತಿಹಾಸ ನಿರ್ಮಿಸಿದೆ. ಪ್ರತಿನಿತ್ಯ ಸುಮಾರು 200ಮಂದಿಯಂತೆ ಕರಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಮೂಲಕ ಸುಮಾರು 2000ಕ್ಕೂ ಅಧಿಕ ಮಂದಿ ಭಕ್ತಾದಿಗಳು ಕರೆಸೇವೆಯಲ್ಲಿ ಸಹಕರಿಸಿದ್ದಾರೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.
ಬ್ರಹ್ಮಕಲಶೋತ್ಸವಕ್ಕೆ ಚಾಲನೆ:
ಡಿ.30ರಂದು ಸಂಜೆ ವಿಷ್ಣುಮೂರ್ತಿ ದೈವಕ್ಕೆ ನೂತನವಾಗಿ ನಿರ್ಮಾಣಗೊಂಡ ಬೆಳ್ಳಿಯ ಮೊಗ ಹಾಗೂ ಹಸಿರು ಹೊರೆಕಾಣಿಕೆ ಮೆರವಣಿಗೆಯ ಮೂಲಕ ಬ್ರಹ್ಮಕಲಶೋತ್ಸವಗಳಿಗೆ ಚಾಲನೆ ದೊರೆಯಲಿದೆ. ಮೆರವಣಿಗೆಯು ಪಂಜಳ ಜಂಕ್ಷನ್‌ನಿಂದ ದೈವಸ್ಥಾನದ ತನಕ ನಡೆಯಲಿದೆ.
ಡಿ.31 ರಂದು ಬೆಳಿಗ್ಗೆ ಅರ್ಧ ಏಕಾಹ ಭಜನೆ ಆರಂಭಗೊಳ್ಳಲಿದೆ. ಡಾ.ಪ್ರದೀಪ್ ಕುಮಾರ್ ಹಾಸ್ಪಿಟಲ್ ಆಫ್ ಆರ್ಯುವೇದ ಇದರ ಡಾ.ಪ್ರದೀಪ್ ಕುಮಾರ್ ದೀಪ ಪ್ರಜ್ವಲಿಸಲಿದ್ದಾರೆ. ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪ ಪುರಂದರ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಸದಸ್ಯರಾದ ಯಶೋಧ, ದುಗ್ಗಪ್ಪ ಅಜಿಲ, ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರಘುನಾಥ ಶೆಟ್ಟಿ ಪೊನೋನಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಜೆ ಕ್ಷೇತ್ರದ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ ನಡೆಯಲಿದೆ. ಬಳಿಕ ಪ್ರಾಸಾದ ಪರಿಗ್ರಹ, ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತು ಬಲಿ, ದಿಕ್ಪಾಲಬಲಿ, ಬಿಂಬಾಧಿವಾಸ, ಅನ್ನಸಂತರ್ಪಣೆ ನಡೆಯಲಿದೆ.
ಜ.೧ರಂದು ಬೆಳಿಗ್ಗೆ ಗಣಹೋಮ, ಕಲಶಪೂಜೆ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.
ಅಜಲಾಡಿ ಉದಯಗಿರಿ ವಿಷ್ಣುಮೂರ್ತಿ ದೈವಸ್ಥಾನದ ಅಭಿವೃದ್ಧಿ, ಒತ್ತೆಕೋಲ ಸಮಿತಿ ಅಧ್ಯಕ್ಷ ಭಾಸ್ಕರ ಆಚಾರ್ಯ ಹಿಂದಾರು ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ತಹಶೀಲ್ದಾರ್ ನಿಸರ್ಗಪ್ರಿಯ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕೆಯ್ಯೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಳ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಆನಂದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಜಿಲ್ಲೆಯ ಪ್ರತಿಷ್ಠಿತ ಕಲಾವಿದರಿಂದ ಸಾಂಸ್ಕೃತಿಕ ವೈಭವ ಜರುಗಲಿದೆ.
ಜ.೨ರಂದು ಬೆಳಿಗ್ಗೆ ಗಣಗೋಮ, ಸಂಜೆ ದೈವಗಳ ಭಂಡಾರ ತೆಗೆಯುವುದು, ಮೇಲೇರಿಗೆ ಅಗ್ನಿಸ್ಪರ್ಶ, ರಾತ್ರಿ ಧಾರ್ಮಿಕ ಸಭೆ ಹಾಗೂ ಸನ್ಮಾನ ಕಾರ್ಯಕ್ರಮಗಳು ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಮುಂಡೂರು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೂಡಂಬೈಲು ರವಿ ಶೆಟ್ಟಿ ನೇಸರ ಕಂಪ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಸಂಪ್ಯ ಠಾಣಾ ಎಸ್.ಐ ಉದಯ ರವಿ, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮುರಳೀಧರ ಭಟ್ ಬಂಗಾರಡ್ಕ, ಹಿಂದಾರು ವೆಂಕಟೇಶ್ ಅಯ್ಯಂಗಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ, ಕುಳಿಚಟ್ಟು ದೈವದ ನೇಮ, ರಸಮಂಜರಿ ಕಾರ್ಯಕ್ರಮ, ವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ, ಮಾರಿಕಳ, ಪ್ರಸಾದ ವಿತರಣೆ ನಂತರ ಮುಳ್ಳುಗುಳಿಗ ದೈವದ ನೇಮದೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.