ರೋಟರಿ ಪುತ್ತೂರು, ಚೆನ್ನೈ ಫ್ರೀಡಂ ಟ್ರಸ್ಟ್, ಕುಟುಂಬ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಉಚಿತ ಕೃತಕ ಕಾಲು ಜೋಡಣಾ ತಪಾಸಣಾ ಶಿಬಿರ

0

ಕಾಲಿಲ್ಲದವರ ಬಾಳಿಗೆ ಆಶಾಕಿರಣವಾಗಿದೆ ರೋಟರಿ ಸಂಸ್ಥೆ-ಡಾ.ಸೂರ್‍ಯನಾರಾಯಣ

ಪುತ್ತೂರು: ಆಕ್ಸಿಡೆಂಟ್, ಮಧುಮೇಹ ಅಥವಾ ಬದುಕಿನ ಹಾದಿಯ ಯಾವುದಾದರೊಂದು ಘಟನೆಯಲ್ಲಿ ಕೆಲವರು ತನ್ನ ಕಾಲನ್ನು ಕಳೆದುಕೊಂಡು ನರಕಯಾತನೆಯನ್ನು ಅನುಭವಿಸುವವರು ನಮ್ಮ ನಡುವೆ ಇದ್ದಾರೆ. ಕಾಲನ್ನು ಕಳೆದುಕೊಂಡವರಿಗೆ ಉಚಿತವಾಗಿ ಕೃತಕ ಕಾಲನ್ನು ಜೋಡಿಸುವ ಮೂಲಕ ರೋಟರಿ ಪುತ್ತೂರು ನಿಜಕ್ಕೂ ಅವರ ಬಾಳಿಗೆ ಆಶಾಕಿರಣವಾಗಿದ್ದಾರೆ ಎಂದು ರೋಟರಿ ಜಿಲ್ಲೆ 3181 ಇದರ ಡಿಆರ್‌ಎಫ್‌ಸಿ ಡಾ.ಸೂರ್‍ಯನಾರಾಯಣ ಕೆ.ರವರು ಹೇಳಿದರು.


ರೋಟರಿ ಕ್ಲಬ್ ಪುತ್ತೂರು, ಪ್ರೀಡಂ ಟ್ರಸ್ಟ್ ಚೆನ್ನೈ ಹಾಗೂ ಕುಟುಂಬ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವುಗಳ ಸಹಯೋಗದಲ್ಲಿ ಶಾರೀರಿಕವಾಗಿ ಅಂಗತ್ವ ಕಳಕೊಂಡವರಿಗೆ ವಿವಿಧ ಯೋಜನೆಗಳ `ವಾಕ್ ಇಂಡಿಯಾ’ ಯೋಜನೆಯಡಿಯಲ್ಲಿ ಜ.6 ರಂದು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಮೊಣಗಂಟಿನಿಂದ ಕೆಳಗೆ ಅಥವಾ ಎರಡೂ ಕಾಲುಗಳನ್ನು ಕಳಕೊಂಡವರಿಗೆ ಕೃತಕ ಕಾಲು ಜೋಡಣೆ(ಮೂರನೇ ವರ್ಷ)ಗೆ ಅಳತೆ ಮಾಡುವ ತಪಾಸಣಾ ಶಿಬಿರವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಚಾಲನೆ ನೀಡುತ್ತಾ ಮಾತನಾಡಿದರು.

ಸರಿಯಾಗಿ ಔಷಧ ಹಾಗೂ ಪಥ್ಯೆ ಮಾಡದೆ ಕಾಲನ್ನು ಕಳಕೊಂಡವರಿದ್ದಾರೆ. 1970 ರಲ್ಲಿ ರಾಜಸ್ತಾನದಲ್ಲಿ ಕೃತಕ ಕಾಲನ್ನು ಜೋಡಿಸುವ ಕಾರ್ಯ ಆರಂಭವಾಗಿತ್ತು. ಕಾಲಿಲ್ಲದವರಿಗೆ ಕೃತಕ ಕಾಲುಗಳನ್ನು ಉಚಿತವಾಗಿ ನೀಡುವುದಕ್ಕೆ ದೂರದ ತಮಿಳ್ನಾಡಿನಿಂದ ಪುತ್ತೂರಿಗೆ ಆಗಮಿಸಿ ರೋಟರಿ ಪುತ್ತೂರು ಕ್ಲಬ್‌ರವರೊಂದಿಗೆ ಕೈಜೋಡಿಸಿರುವ ಫ್ರೀಡಂ ಟ್ರಸ್ಟ್‌ರವರ ಕಾಳಜಿ ಶ್ಲಾಘನೀಯವಾಗಿದೆ ಎಂದರು.


ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈ ಮಾತನಾಡಿ, ದಂತ ವೈದ್ಯ ಹಾಗೂ ರೋಟರಿ ಪುತ್ತೂರು ಇದರ ಡಾ.ಶ್ರೀಪ್ರಕಾಶ್‌ರವರು ಚೆನ್ನೈ ಫ್ರೀಡಂ ಟ್ರಸ್ಟ್‌ನ ಡಾ.ಸುಂದರ್‌ರವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುದರಿಂದ ಫಲಾನುಭವಿಗಳಿಗೆ ಕೃತಕ ಕಾಲುಗಳನ್ನು ಜೋಡಿಸುವ ಕಾರ್ಯ ಸುಗಮವಾಗಿದ್ದು, ಇಂತಹ ಕಾರ್ಯ ನಿಜಕ್ಕೂ ಸಮಾಜಕ್ಕೆ ಮಾದರಿ ಎನಿಸಿದೆ. ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಜೀವನ ಸುಧಾರಿಸುವ ಕಾಯಕ ಮುಂದುವರೆಯಲಿ ಎಂದರು.

ಕುಟುಂಬ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಶ್ರೀಮತಿ ಲತಾ ಮಾತನಾಡಿ, ಸರಕಾರ ಮಾಡುವ ಕಾರ್ಯವನ್ನು ರೋಟರಿ ಪುತ್ತೂರು ಸಂಸ್ಥೆಯು ಚೆನ್ನೈ ಫ್ರೀಡಂ ಟ್ರಸ್ಟ್‌ರವರೊಡಗೂಡಿ ಕಾಲಿಲ್ಲದವರಿಗೆ ಕೃತಕ ಕಾಲನ್ನು ಜೋಡಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಜೊತೆಗೆ ರೋಟರಿ ಪುತ್ತೂರು ಸಂಸ್ಥೆಯು ಫಲಾನುಭವಿಗಳಿಗೆ ನಿರಂತರ ಸವಲತ್ತುಗಳನ್ನು ನೀಡುತ್ತಾ ಬರುತ್ತಿರುವುದು ಅಭಿನಂದನೀಯ. ಫಲಾನುಭವಿಗಳು ತಮಗೆ ಕಾಲುಗಳಿಲ್ಲ ಎಂಬುದಾಗಿ ಧೃತಿಗೆಡದೆ ಧೈರ್ಯದಿಂದ, ಭರವಸೆಯಿಂದ ಮುಂದಡಿಯಿಡಬೇಕು ಎಂದರು.

ವಿಕಲಾಂಗರ ಕ್ಷೇಮ ವಿಭಾಗ ಪುತ್ತೂರು ಇದರ ನೋಡಲ್ ಆಫೀಸರ್ ಶ್ರೀಮತಿ ಭಾರತಿ ಮಾತನಾಡಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸರಕಾರಿ ಇಲಾಖೆಯ ಭಾಗವಾಗಿದೆ. ಸಮಾಜದಲ್ಲಿ ತಳಮಟ್ಟದಲ್ಲಿರುವ ಅರ್ಹ ಫಲಾನುಭವಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ರೋಟರಿ ಸಂಸ್ಥೆಯು ಶ್ರಮಿಸುತ್ತಿರುವುದು ಮೆಚ್ಚುವಂತಹುದು. ಕಳೆದ ಕೆಲವು ವರ್ಷಗಳಿಂದ ಕಾಲಿಲ್ಲದವರಿಗೆ ಕೃತಕ ಕಾಲು ಜೋಡಿಸುವ ಕಾರ್ಯವನ್ನು ಹಮ್ಮಿಕೊಂಡು ರೋಟರಿ ಸಂಸ್ಥೆಯು ಅಂಥವರ ಬಾಳಿಗೆ ಶಕ್ತಿ ಕೊಡುವ, ಬೆಳಕು ಚೆಲ್ಲುವ ಮೂಲಕ ಊರುಗೋಲಾಗುತ್ತಿರುವುದು ಪ್ರಶಂಸನೀಯ ಎಂದರು.

ಕ್ಲಬ್ ಸದಸ್ಯ ದಾಮೋದರ್ ಪ್ರಾರ್ಥಿಸಿದರು. ಅಧ್ಯಕ್ಷ ಉಮಾನಾಥ್ ಪಿ.ಬಿ ಸ್ವಾಗತಿಸಿ, ಸಮುದಾಯ ಸೇವಾ ವಿಭಾಗದ ನಿರ್ದೇಶಕ ಪ್ರೊ|ಝೇವಿಯರ್ ಡಿ’ಸೋಜ ವಂದಿಸಿದರು. ಕ್ಲಬ್ ಕಾರ್ಯದರ್ಶಿ ಡಾ.ಶ್ರೀಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯರಾದ ಶ್ರೀಕಾಂತ್ ಕೊಳತ್ತಾಯ, ಆನೆಟ್ ಡಾ.ಶಾಯರಿ ಕೊಳತ್ತಾಯ, ಹೆರಾಲ್ಡ್ ಮಾಡ್ತಾ, ಶ್ರೀಧರ್ ಕಣಜಾಲು, ಪ್ರೇಮಾನಂದ್, ಎಂ.ಜಿ ರಫೀಕ್, ತಾಲೂಕು ಮಟ್ಟದ ವಿವಿಧೋದ್ಧೇಶ ಪುನರ್‌ವಸತಿ ಕಾರ್ಯಕರ್ತರು ಹಾಗೂ ಸಂಯೋಜಕ ನವೀನ್ ಕುಮಾರ್ ಉಪಸ್ಥಿತರಿದ್ದರು. ಪುತ್ತೂರು ಸಿಟಿ ಆಸ್ಪತ್ರೆ ಸಿಬ್ಬಂದಿಗಳು ಸಹಕರಿಸಿದರು.

20 ಫಲಾನುಭವಿಗಳು, ರೂ.3 ಲಕ್ಷ ವೆಚ್ಚ…
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ತಪಾಸಣಾ ಶಿಬಿರದಲ್ಲಿ ಫ್ರೀಡಂ ಟ್ರಸ್ಟ್‌ನ ಪಿಆರ್‌ಒ ರಿಶಿಕ್, ತಾಂತ್ರಿಕ ಸಿಬ್ಬಂದಿಗಳಾದ ಜಯವೇಲು, ಬಾಲಾಜಿ, ಅಭಿಲಾಶ್‌ರವರಿಂದ ಕಾಲು ಕಳೆದುಕೊಂಡ ಫಲಾನುಭವಿಗಳಿಗೆ ಕೃತಕ ಕಾಲು ಜೋಡಣಾ ತಪಾಸಣಾ ಕುರಿತು ಪುತ್ತೂರು ಹಾಗೂ ಕಡಬ ತಾಲೂಕಿನ ಸುಮಾರು 20 ಮಂದಿ ಫಲಾನುಭವಿ ಕಾಲು ಕಳೆದುಕೊಂಡವರ ಕಾಲಿನ ಅಳತೆಯನ್ನು ಮಾಡಲಾಯಿತು. ಕೃತಕ ಕಾಲು ಜೋಡಣೆಗೆ ಓರ್ವರಿಗೆ ಅಂದಾಜು ರೂ.10 ರಿಂದ 15 ಸಾವಿರ ತಗಲುತ್ತಿದ್ದು, ೨೦ ಮಂದಿ ಫಲಾನುಭವಿಗಳಿಗೆ ಸುಮಾರು ರೂ.3 ಲಕ್ಷ ವೆಚ್ಚವಾಗಲಿದೆ.

ಫೆ.19 /24ರಂದು ಜೋಡಣಾ ಕಾರ್ಯ..
ಅಳತೆ ಮಾಡಲಾದ ಕಾಲುಗಳ ತಯಾರಿಕೆಯನ್ನು ಚೆನ್ನೈಯಲ್ಲಿ ಮಾಡಲಾಗುತ್ತಿದ್ದು, ಅಳತೆ ಮಾಡಿದ ಕಾಲುಗಳ ಫಲಾನುಭವಿಗಳಿಗೆ ಫೆಬ್ರವರಿ 19 ಹಾಗೂ 24 ರಂದು ಎರಡು ಹಂತದಲ್ಲಿ ಜೋಡಣಾ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತಿದೆ. ರವಿ ರಾಮಯ್ಯ ಹಾಗೂ ಎಸ್ ಹರಿಹರನ್ ಕುಟುಂಬ ಆಮೇರಿಕ ಇವರು ಶಿಬಿರದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದಾರೆ. 2018, 2019ರಲ್ಲಿ ಇದೇ ರೋಟರಿ ಪುತ್ತೂರು ಸಂಸ್ಥೆಯು ಚೆನ್ನೈ ಫ್ರೀಡಂ ಟ್ರಸ್ಟ್ ಆಶ್ರಯದಲ್ಲಿ ಉಚಿತವಾಗಿ ಕೃತಕ ಕಾಲಿನ ಜೋಡಣೆಯನ್ನು ಮಾಡಿಕೊಡಲಾಗಿತ್ತು. ಮಹಾಮಾರಿ ಕೊರೋನಾ ಹಿನ್ನೆಲೆಯಲ್ಲಿ ಜೋಡಣಾ ಕಾರ್ಯ ಸ್ಥಗಿತಗೊಂಡಿತ್ತು.

LEAVE A REPLY

Please enter your comment!
Please enter your name here