ಕೌಡಿಚ್ಚಾರ್ ಶ್ರೀಕೃಷ್ಣ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವ-ಧಾರ್ಮಿಕ ಸಭೆ:  ಜಗತ್ತಿಗೆ ಧರ್ಮಮಾರ್ಗವನ್ನು ಸಾರಿದ ಶ್ರೀಕೃಷ್ಣ ಜಗದ್ಗುರು-ಕಮಲಾದೇವಿ ಅಸ್ರಣ್ಣ

0

ಚಿತ್ರ: ನಿಶು ಕೌಡಿಚ್ಚಾರ್
ವರದಿ: ಸುನೀಲ್ ಕಾವು

ಕಾವು: ಶ್ರೀಕೃಷ್ಣ ಪರಮಾತ್ಮನು ದೇವರು ಮಾತ್ರವಲ್ಲ, ಗುರು ಕೂಡ ಆಗಿದ್ದಾನೆ, ಇಡೀ ಜಗತ್ತಿಗೆ ಧರ್ಮಮಾರ್ಗವನ್ನು ಸಾರಿದ ಶ್ರೀಕೃಷ್ಣ ಪರಮಾತ್ಮನು ಜಗದ್ಗುರು ಆಗಿದ್ದಾನೆ ಎಂದು ಕಟೀಲು ಶ್ರೀಕ್ಷೇತ್ರದ ಪ್ರಧಾನ ಅರ್ಚಕ ಕಮಲಾದೇವಿ ಅಸ್ರಣ್ಣರವರು ಹೇಳಿದರು.
ಅವರು ಜ.೭ರಂದು ಕೌಡಿಚ್ಚಾರ್ ಶ್ರೀಕೃಷ್ಣ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಭವಾನಿ ಅಮ್ಮ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀಕೃಷ್ಣನ ವ್ಯಕ್ತಿತ್ವನ್ನು ಜೀವನದಲ್ಲಿ ಪಾಲಿಸಬೇಕು-ಕಡಮಜಲು
ಧಾರ್ಮಿಕ ಉಪನ್ಯಾಸ ಮಾಡಿದ ದೇಶಭಕ್ತ ಕಿಲ್ಲೆ ಪ್ರತಿಷ್ಠಾನದ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆಗಿರುವ ಕಡಮಜಲು ಸುಭಾಶ್ ರೈಯವರು ಮಾತನಾಡಿ ಭಕ್ತರು ಭಕ್ತಿಯಿಂದ ಭಗವಂತನನ್ನು ಭಜಿಸುವುದೇ ಭಜನೆಯಾಗಿದೆ, ಭಜನೆಯಲ್ಲಿ ನಾವು ಮಾನಸಿಕವಾಗಿ ತೊಡಗಿಸಿಕೊಂಡು, ಶ್ರೀಕೃಷ್ಣನ ವ್ಯಕ್ತಿತ್ವವನ್ನು ಜೀವನದಲ್ಲಿ ಪಾಲಿಸಿಕೊಂಡು ಜೀವನದಲ್ಲಿ ಸಾರ್ಥಕ್ಯವನ್ನು ಪಡೆಯಬೇಕು ಎಂದು ಹೇಳಿದರು.

ಧಾರ್ಮಿಕ ಶಿಕ್ಷಣ ಕೇಂದ್ರವೂ ಆರಂಭವಾಗಲಿ-ಮುಳಿಯ ಕೇಶವ ಪ್ರಸಾದ್
ಮುಖ್ಯ ಅತಿಥಿಯಾಗಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯವರು ಮಾತನಾಡಿ ದೇವಸ್ಥಾನ, ಮಂದಿರಗಳಲ್ಲಿ ಪೂಜಾ ಕಾರ್ಯಕ್ರಮ ಮಾತ್ರವಲ್ಲದೇ ಧಾರ್ಮಿಕ ಚಟುವಟಿಕೆಗಳು ನಿತ್ಯ ನಿರಂತರವಾಗಿ ನಡೆಯಬೇಕು, ಅದಕ್ಕಾಗಿ ಕೌಡಿಚ್ಚಾರ್ ಭಜನಾ ಮಂದಿರದಲ್ಲೂ ಧಾರ್ಮಿಕ ಶಿಕ್ಷಣ ಕೇಂದ್ರ ಆರಂಭವಾಗಬೇಕು ಎಂದು ಹೇಳಿದರು.

ದೈವ-ದೇವರುಗಳ ಅನುಗ್ರಹದಿಂದ ಎಲ್ಲವೂ ಸಾಧ್ಯ-ರವಿ ಅಜಲಾಯ
ತಾಲೂಕು ನಲಿಕೆ ಸಮಾಜದ ಅಧ್ಯಕ್ಷ ರವಿ ಅಜಲಾಯರವರು ಮಾತನಾಡಿ ಯಾವುದೇ ಕಾರ್ಯಕ್ರಮ ಸುಸೂತ್ರವಾಗಿ ನಡೆಯಬೇಕಾದರೆ ದೈವ-ದೇವರುಗಳ ಅನುಗ್ರಹ ಇರಬೇಕು, ಕೌಡಿಚ್ಚಾರ್ ಶ್ರೀಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರದಲ್ಲೂ ದೈವ-ದೇವರುಗಳ ಅನುಗ್ರಹದಿಂದ ಭಕ್ತಾದಿಗಳ ಸಹಕಾರದಿಂದ ಭವ್ಯವಾದ ಮಂದಿರ ನಿರ್ಮಾಣವಾಗಲು ಸಾಧ್ಯವಾಗಿದೆ ಎಂದು ಹೇಳಿದರು.

ಎಲ್ಲರ ಸಹಕಾರದಿಂದ ಮಂದಿರ ನಿರ್ಮಾಣ-ಗುಂಡ್ಯಡ್ಕ ವಾಸು ಪೂಜಾರಿ
ಸಭಾಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡ್ಯಡ್ಕ ವಾಸು ಪೂಜಾರಿಯವರು ಮಾತನಾಡಿ ಎಲ್ಲರ ಸರ್ವವಿಧದ ಸಹಕಾರದಿಂದಾಗಿ ನೂತನ ಭಜನಾ ಮಂದಿರ ನಿರ್ಮಾಣವಾಗಿ ಪ್ರತಿಷ್ಠಾಪನೆಗೊಂಡಿತು, ಅದಕ್ಕಾಗಿ ಶ್ರಮಿಸಿದ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ವೇದಿಕೆಯಲ್ಲಿ ಉದ್ಯಮಿ ಮನು ರೈ ನರಿಮೊಗರು, ಜೀರ್ಣೋದ್ಧಾರ ಸಮಿತಿ ಗೌರವ ಸಲಹೆಗಾರ ಅಮ್ಮಣ್ಣ ರೈ, ಮುಂಬೈನ ಉದ್ಯಮಿ ಅಜಿತ್ ಕುಮಾರ್ ಭಂಡಾರಿ, ಆಡಳಿತ ಸಮಿತಿ ಅಧ್ಯಕ್ಷ ರಾಮದಾಸ ರೈ ಮದ್ಲರವರು ಉಪಸ್ಥಿತರಿದ್ದರು.

ಸನ್ಮಾನ:
ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕೆ ಧನಸಹಕಾರ ನೀಡಿದ ಕಡಮಜಲು ಸುಭಾಶ್ ರೈ, ಶಶಿಧರ್ ಕೌಡಿಚ್ಚಾರ್‌ರವರ ಪರವಾಗಿ ಅವರ ತಾಯಿ ಗಿರಿಜಾಕೇಪು ಮೂಲ್ಯರವರಿಗೆ, ಅರುಣ್ ಕುಮಾರ್ ದೇರ್ಲರ ಪರವಾಗಿ ಅಜಿತ್ ಕುಮಾರ್ ದೇರ್ಲರವರಿಗೆ, ಭಜನಾ ಮಂದಿರದ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ದಿವಾಕರ ಆಚಾರ್ಯ, ಯಶೋಧರ ಮೇಸ್ತ್ರೀಯವರಿಗೆ, ದಾನಿಗಳಾದ ಸುಜನಿ ಸಂದೀಪ್ ಬೆಂಗಳೂರು, ಸುಶಾಂತ್ ರೈ ಕುತ್ಯಾಡಿ, ದೇವಪ್ಪ ನಾಯ್ಕ ಬಳ್ಳಿಕಾನ, ಮಂದಿರದ ಪ್ರಧಾನ ಅರ್ಚಕ ಕರುಣಾಕರ ಗೌಡ, ಸಿವಿಲ್ ಡಿಸೈನರ್ ಕಮಲ್‌ರವರಿಗೆ ಪೇಟೆ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ಫಲಪುಷ್ಫ ಕಾಣಿಕೆ ನೀಡಿ ಗೌರವಿಸಲಾಯಿತು.

ಕೊಡಿಯಾಲ್‌ಬೈಲ್‌ಗೆ ಗೌರವಾರ್ಪಣೆ:
ತುಳು ರಂಗಭೂಮಿಗೆ ವಿಭಿನ್ನ ಮತ್ತು ವಿನೂತನ ಮಾದರಿಯಲ್ಲಿ ಶಿವದೂತೆ ಗುಳಿಗೆ ಎಂಬ ನಾಟಕವನ್ನು ನಿರ್ದೇಶಿಸಿದ ವಿಜಯ್ ಕುಮಾರ್ ರೈ ಕೊಡಿಯಾಲ್‌ಬೈಲ್‌ರವರಿಗೆ ಸಭಾವೇದಿಕೆಯಲ್ಲಿ ಗೌರವಾರ್ಪಣೆ ಸಲ್ಲಿಸಲಾಯಿತು.
ಪ್ರಕೃತಿ, ವಿಶ್ಮಿತಾ, ಯಕ್ಷಿತಾ, ನಿಶ್ಮಿತಾರವರು ಪ್ರಾರ್ಥಿಸಿದರು. ಆಡಳಿತ ಸಮಿತಿ ಕೋಶಾಧಿಕಾರಿ ತಿಲಕ್ ರೈ ಕುತ್ಯಾಡಿ ಸ್ವಾಗತಿಸಿ, ಉಪಾಧ್ಯಕ್ಷ ಸಚಿನ್ ರೈ ಪಾಪೆಮಜಲು ವಂದಿಸಿದರು. ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕಿ ಸೌಮ್ಯವಿನಯ್ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿಯ ಸದಸ್ಯರುಗಳಾದ ಶುಶಾಂತ್ ರೈ, ಪ್ರಮೋದ್ ಪನೆಕ್ಕಳ, ಶೇಷಪ್ಪ ನಾಯ್ಕ ಮಾಯಿಲಕೊಚ್ಚಿ, ನಾರಾಯಣ ಚಾಕೋಟೆ, ರಕ್ಷಿತ್ ಪಾದೆಲಾಡಿ, ಅನೂಪ್‌ಕೃಷ್ಣ ರೈ, ಸುನೀಲ್ ಗುಂಡ್ಯಡ್ಕ, ಗುರುವಪ್ಪ ಹೊಸಗದ್ದೆರವರು ಅತಿಥಿಗಳಿಗೆ ಶಾಲುಹಾಕಿ ಗೌರವಿಸಿದರು. ರಾತ್ರಿ ಸಾವಿರಕ್ಕೂ ಅಧಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಶಿವದೂತೆ ಗುಳಿಗೆ ನಾಟಕ:
ಸಭಾ ಕಾರ್ಯಕ್ರಮದ ಬಳಿಕ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶನದಲ್ಲಿ, ಕಲಾ ಸಂಗಮ ಕಲಾವಿದರಿಂದ ಚಲನಚಿತ್ರ ನಟ ಸ್ವರಾಜ್ ಶೆಟ್ಟಿ ಅಭಿನಯದ ಶಿವದೂತೆ ಗುಳಿಗೆ ನಾಟಕ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here