ಮಡಂತ್ಯಾರು ಸೆಕ್ರೇಡ್ ಹಾರ್ಟ್ಚಾಂಪಿಯನ್, ಮಂಗಳೂರು ಎಸ್.ಡಿ.ಎಂಬಿಬಿಎಂ ರನ್ನರ್ಸ್
ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಹಾಗೂ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಿದ ಮಂಗಳೂರು ವಲಯವನ್ನೊಳಗೊಂಡ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್-ಕಾಲೇಜು ಪುರುಷರ ಲೆದರ್ಬಾಲ್ ಮ್ಯಾಟ್ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ ಮಾತ್ರವಲ್ಲದೆ “ಶ್ರೀ ಮೂಲ್ಕಿ ದಯಾನಂದ್ ಕಾಮತ್ ರೋಲಿಂಗ್ ಟ್ರೋಫಿ”ಯನ್ನು ತನ್ನದಾಗಿಸಿಕೊಂಡಿತು. ಮಂಗಳೂರು ಎಸ್.ಡಿ.ಎಂ ಬಿಬಿಎಂ ಕಾಲೇಜು ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು.
ಜ.12 ರಂದು ನಡೆದ ಫೈನಲ್ ಹೋರಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು 20 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 150 ರನ್ಗಳನ್ನು ಗಳಿಸಿತ್ತು. ತಂಡದ ಪರ ಆರಂಭಿಕ ಬ್ಯಾಟರ್ಗಳಾದ ನಯನ್ ಸಿ.ಎಚ್ 65(54 ಎಸೆತ), ವಿಕೆಟ್ ಕೀಪರ್ ಋಷಿ ಶೆಟ್ಟಿ 21(10), ವನ್ಡೌನ್ ಬ್ಯಾಟರ್ ನೂತನ್ ಬಿ 27(39 )ರವರ ಸಮಯೋಚಿತ ಬ್ಯಾಟಿಂಗ್ನಿಂದ ಗೌರವಯುತ ಮೊತ್ತವನ್ನು ಗಳಿಸಲು ಶಕ್ತವಾಯಿತು.
ಎಸ್ಡಿಎಂ ಬಿಬಿಎಂ ಪರ ಬೌಲರ್ಗಳಾದ ದೇವಿ ಪ್ರಥಮ್ 4-12-1, ಅಲೌರೌಂಡರ್ ರಿಶಿತ್ ಶೆಟ್ಟಿ 24/2, ದೀಕ್ಷಿತ್ 29/2 ಉತ್ತಮ ಬೌಲಿಂಗ್ ದಾಳಿಯನ್ನು ಸಂಘಟಿಸಿದರು. ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಎಸ್ಡಿಎಂ ಬಿಬಿಎಂ ಕಾಲೇಜು, ಮಡಂತ್ಯಾರು ಕಾಲೇಜು ತಂಡದ ಬೌಲರ್ಗಳ ಕರಾರುವಾಕ್ ದಾಳಿಯಿಂದಾಗಿ ಕೇವಲ 104 ರನ್ಗಳಿಗೆ ಅಲೌಟಾಗಿ 46 ರನ್ಗಳಿಂದ ಸೋಲೊಪ್ಪಿಕೊಂಡಿತು. ತಂಡದ ಪರ ಆರಂಭಿಕ ರಿಶಿತ್ ಶೆಟ್ಟಿ 28(26), ರವೀಂದ್ 11(18), ಅಭಯ್ 10(19)ರವರು ಮಾತ್ರ ಎರಡಂಕಿ ಮೊತ್ತವನ್ನು ಗಳಿಸಿರುತ್ತಾರೆ. ಮಡಂತ್ಯಾರು ಕಾಲೇಜು ಪರ ಮಾರ್ಲನ್ 8/3 ವಿಕೆಟ್, ಸೌರವ್ ಗೌಡ 22/2, ಸಿಯಾನ್29/2ರವರು ಅದ್ಭುತ ದಾಳಿಯನ್ನು ಸಂಘಟಿಸಿ ಎದುರಾಳಿ ಎಎಸ್ಡಿಎಂ ಬಿಬಿಎಂ ಕುಸಿಯಲು ಕಾರಣರಾದರು.
ಸಮಾರೋಪ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಹಾಗೂ ಕಾಲೇಜು ಹಿರಿಯ ವಿದ್ಯಾರ್ಥಿ ಶಿವರಾಂ ಆಳ್ವರವರು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ರಾಷ್ಟ್ರ ಹಾಗೂ ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಈ ಕ್ರೀಡಾಂಗಣ ಕೊಡುಗೆಯಾಗಿ ನೀಡಿದೆ. ಫಿಲೋಮಿನಾ ಕಾಲೇಜು ಕ್ರೀಡಾ ಕ್ಷೇತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿದೆ. ಕ್ರೀಡಾಪಟುಗಳು ಕ್ರೀಡೆಯಲ್ಲೂ ಭಾಗವಹಿಸಿ ಜೊತೆಗೆ ಕಲಿಕೆಯಲ್ಲೂ ಮುಂದುವರೆದಾಗ ಭವಿಷ್ಯ ಉಜ್ವಲವಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ವಿದ್ಯಾರ್ಥಿಗಳು ಕ್ಲಾಸ್ ರೂಂ ಹಾಗೂ ಕ್ರೀಡಾಂಗಣದಲ್ಲಿ ಉತ್ತಮವಾಗಿ ಆಭ್ಯಸಿಸಿದಾಗ ಅದುವೇ ಜೀವನದ ಭವಿಷ್ಯದ ಘಟ್ಟವಾಗಿರುತ್ತದೆ. ಇಂದು ಸೋತವರು ನಾಳೆ ವಿಜಯಿಗಳಾಗಬಹುದು ಎಂದರು. ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಕ್ರೀಡಾ ನಿರ್ದೇಶಕ ಡಾ|ರಮೇಶ್, ಮಂಗಳೂರು ವಿ.ವಿ ಕ್ರಿಕೆಟ್ ಪಂದ್ಯಾಟದ ವೀಕ್ಷಕ ಹಾಗೂ ಪುತ್ತೂರು ಸರಕಾರಿ ಮಹಿಳಾ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಅಬ್ದುಲ್ ಕುಂಞ, ಪುತ್ತೂರು ಯೂನಿಯನ್ ಕ್ರಿಕೆಟರ್ಸ್ ಕಾರ್ಯದರ್ಶಿ ವಿಶ್ವನಾಥ್ ನಾಯಕ್ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ ಸ್ವಾಗತಿಸಿ, ವಂದಿಸಿದರು. ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು. ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ, ದೈಹಿಕ ಶಿಕ್ಷಣ ನಿರ್ದೇಶಕರಾಗಿ ಫಿಲೋಮಿನಾ ಕಾಲೇಜಿನಲ್ಲಿ ಇಂಟರ್ನ್ಶಿಪ್ ಮಾಡುತ್ತಿರುವ ಭುವನೇಂದ್ರರವರು ಸಹಕರಿಸಿದರು.
5 ರನ್ಗಳಿಂದ ಫೈನಲ್ ತಪ್ಪಿಸಿಕೊಂಡ ಫಿಲೋಮಿನಾ..
ಮಂಗಳೂರಿನ ಎಸ್ಡಿಎಂಬಿಬಿಎಂ ಹಾಗೂ ಸಂತ ಫಿಲೋಮಿನಾ ಕಾಲೇಜು ನಡುವೆ ನಡೆದ ಎರಡನೇ ಸೆಮಿಫೈನಲ್ ಹೋರಾಟದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎಸ್ಡಿಎಂಬಿಬಿಎಂ ಕಾಲೇಜು ಆರಂಭಿಕ ಆಟಗಾರರಾದ ರಿಶಿತ್ ಶೆಟ್ಟಿ(51) ಹಾಗೂ ರಾಹುಲ್ ಶೆಟ್ಟಿ(49) ನಡುವಣ 99 ರನ್ಗಳ ಭಾಗಿದಾರಿಕೆಯಲ್ಲಿ ಬಳಿಕ ಮಧ್ಯಮ ಕ್ರಮಾಂಕದಲ್ಲಿ ನಾಯಕ ವಿಖ್ಯಾತ್ರವರ 30(19 ಎಸೆತ) ಬೀಡುಬೀಸಾದ ಬ್ಯಾಟಿಂಗ್ನಿಂದ 20 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 159 ರನ್ಗಳನ್ನು ಕಲೆ ಹಾಕಿತು. ಬೌಲಿಂಗ್ನಲ್ಲಿ ಫಿಲೋಮಿನಾದ ಶ್ರೀಕರ್ ಎಸ್(28/2), ಆರ್ಯನ್(18/1)ರವರು ಹಿಡಿತ ಸಾಧಿಸಿದರೂ ಉಳಿದವರು ಬಹಳ ದುಬಾರಿಯಾದರು. ಬಳಿಕ ಬ್ಯಾಟಿಂಗ್ ಆರಂಭಿಸಿದ ಫಿಲೋಮಿನಾ ಕಾಲೇಜು ಆರಂಭಿಕ ಸೂರಜ್ ಎಸ್.ಎ(55), ನಿಖಿಲ್ ಬರೆತ್(30)ರವರ ಸಾಹಸಿಕ ಬ್ಯಾಟಿಂಗ್ ಹೊರತಾಗಿಯೂ ಐದು ರನ್ಗಳಿಂದ ಫೈನಲ್ ಹಾದಿತಲುಪಲು ಸಾಧ್ಯವಾಗಲಿಲ್ಲ.
ಉತ್ತಮ ಬ್ಯಾಟರ್-ನಯನ್ ಸಿ.ಎಚ್(ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು)
ಉತ್ತಮ ಬೌಲರ್-ಮಾರ್ಲನ್(ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು)
ಉತ್ತಮ ಅಲೌರೌಂಡರ್-ರಿಶಿತ್ ಶೆಟ್ಟಿ(ಮಂಗಳೂರು ಎಸ್ಡಿಎಂಬಿಬಿಎಂ)