ಪುತ್ತೂರು:ದ.ಕ ಹಾಲು ಉತ್ಪಾದಕರ ಒಕ್ಕೂಟದ ನಂದಿನಿ ಉತ್ಪನ್ನಗಳ ಫ್ರಾಂಚೈಸಿ ’ಆಳ್ವಾ ನಂದಿನಿ ಫ್ರಾಂಚೈಸಿ ಮಳಿಗೆ ಜ.13ರಂದು ಮುಖ್ಯ ರಸ್ತೆಯ ನಗರಸಭಾ ವಾಣಿಜ್ಯ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.
ನೂತನ ಮಳಿಗೆಯನ್ನು ಉದ್ಘಾಟಿಸಿದ ದ.ಕ ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಮಾತನಾಡಿ, ಅವಿಭಜಿತ ದ.ಕ ಜಿಲ್ಲೆಯಲ್ಲಿ ಪ್ರತಿದಿನ 4.70ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿದೆ. ಇದನ್ನು ಶುದ್ದ ಹಾಲನ್ನಾಗಿ ಜಿಲ್ಲೆಯ ಜನತೆಗೆ ನೀಡಲಾಗುತ್ತಿದೆ. ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಲಾಗುತ್ತಿದ್ದು ದೇಶದಲ್ಲಿ ಅಮುಲ್‌ಗೆ ಸರಿಸಾಟಿಯಾಗಿ ನಂದಿನ ಉತ್ಪನ್ನಗಳು ಬೆಳೆಯುತ್ತಿದೆ. ಹಾಲು, ಮೊಸರು, ತುಪ್ಪ ಸೇರಿದಂತೆ ಸುಮಾರು 157 ಬಗೆ ಉತ್ಪನ್ನಗಳನ್ನು ಪುತ್ತೂರಿನ ಜನತೆಗೂ ನೀಡುವ ನಿಟ್ಟಿನಲ್ಲಿ ಫ್ರಾಂಚೈಸಿಗಳನ್ನು ಪ್ರಾರಂಭಿಸಿ, ಉದ್ಯೋಗಗಳನ್ನು ಸೃಷ್ಠಿಸಲಾಗುತ್ತಿದೆ. ಗ್ರಾಹಕರಿಗೆ ಹಾಲಿನ ಎಲ್ಲಾ ಉತ್ಪನ್ನಗಳನ್ನು ಗುಣಮಟ್ಟದಲ್ಲಿ ನೀಡಲಾಗುತ್ತಿದೆ. ಕೃಷ್ಣ ಪ್ರಸಾದ್ ಆಳ್ವರ ಫ್ರಾಂಚೈಸಿ ಗ್ರಾಹಕ ಸ್ನೇಹಿ ಸಂಸೆಯಾಗಿ ಬೆಳೆಯಲಿ. ಇಂತಹ ಸಂಸ್ಥೆಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು. ದ.ಕ ಹಾಲೂ ಒಕ್ಕೂಟ ರೈತರ ಸಂಸ್ಥೆ. ನಂದಿನಿ ಇಂದು ಜಿಲ್ಲೆ, ರಾಜ್ಯ, ದೇಶದ ಹೆಮ್ಮೆಯ ಸಂಸ್ಥೆಯಾಗಿ ಬೆಳೆಯುತ್ತಿದೆ. ಇದಕ್ಕೆ ಎಲ್ಲರೂ ಪ್ರೋತ್ಸಾಹಿಸಬೇಕು ಎಂದರು.
ಪ್ರಥಮ ಖರೀದಿ ಮಾಡಿದ ಉಪಾಧ್ಯಕ್ಷ ಎಸ್.ಬಿ ಜಯರಾಮ ರೈ ಬಳೆಜ್ಜ ಮಾತನಾಡಿ, ನಂದಿನಿಯ ಹಾಲು, ತುಪ್ಪ, ಮೊಸರು ಸೇರಿದಂತೆ ಪ್ರತಿಯೊಂದು ಉತ್ಪನ್ನಗಳು ಉತ್ತಮ ಗುಣಮಟ್ಟದಿಂದ ಕೂಡಿದೆ. ನಂದಿನಿ ತುಪ್ಪಕ್ಕೆ ತಿರುಪತಿಯಲ್ಲಿಯೂ ಬೇಡಿಕೆಯಿದೆ. ಮಾರಾಟದಲ್ಲಿ ರಾಜ್ಯದಲ್ಲಿ ದ.ಕ ಹಾಲು ಒಕ್ಕೂಟ ಎರಡನೇ ಸ್ಥಾನಲ್ಲಿದೆ. ಡೀಲರ್‌ಗಳ ಸಹಕಾರದಿಂದ ಒಕ್ಕೂಟವು ಉತ್ತಮ ರೀತಿಯಲ್ಲಿ ಬೆಳೆಯುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಕೃಷ್ಣ ಪ್ರಸಾದ್ ಆಳ್ವರವರು ಉತ್ತಮ ಡೀಲರ್ ಅತ್ಯುತ್ತಮ ಡೀಲರ್ ಪ್ರಶಸ್ತಿ ಪಡೆದುಕೊಂಡಿರುತ್ತಾರೆ. ಅವರು ಒಕ್ಕೂಟದಲ್ಲಿ ಗುರುತಿಸಲ್ಪಟ್ಟ ವ್ಯಕ್ತಿಯಾಗಿರುವುದಕ್ಕೆ ಅಭಿನಂದನೆ. ಮುಂದೆ ಶೇ.20 ರಿಯಾಯಿತಿ ದರದಲ್ಲಿ ಉತ್ಪನ್ನಗಳನ್ನು ಡೀಲರ್‌ಗಳಿಗೆ ನೀಡಲಾಗುವುದು. ಒಕ್ಕೂಟದಿಂದಲೂ ಪೂರ್ಣ ಸಹಕಾರ ನೀಡಲಾಗುವುದು ಎಂದರು.
ಪೌರಾಯುಕ್ತ ಮಧು ಮನೋಹರ್ ಮಾತನಾಡಿ, ನಗರಸಭಾ ಕಟ್ಟಡದಲ್ಲಿರುವ ಸಕ್ರಿಯವಾಗಿರುವ ಮಳಿಗೆಗಳಲ್ಲಿ ಕೃಷ್ಣಪ್ರಸಾದ್ ಆಳ್ವರವರ ನಂದಿನಿ ಸೆಂಟರ್ ಒಂದು. ಕಟ್ಟಡದ ಪ್ರಾರಂಭದಿಂದಲೂ ಇದ್ದಾರೆ. ಫ್ರಾಂಚೈಸಿಯಿಂದ ಕಟ್ಟಡದಲ್ಲಿರುವ ಇತರ ಕೊಠಡಿಗಳಿಗೂ ಅನುಕೂಲವಾಗಲಿ. ನಗರದಲ್ಲಿ ಇನ್ನಷ್ಟು ಪ್ರಾಂಚೈಸಿಗಳು ಪ್ರಾರಂಭವಾಗಲಿ ಎಂದರು.
ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ, ಎಸ್‌ಟಿಡಿ ಬೂತ್ ಸೇರಿದಂತೆ ಪುತ್ತೂರಿಗೆ ಹೊಸತನವನ್ನು ಪರಿಚಯಿಸಿರುವವರು ಕೃಷ್ಣಪ್ರಸಾದ್ ಆಳ್ವರಾಗಿರುತ್ತಾರೆ. ಇನ್ನಷ್ಟು ಉದ್ಯಮ ಸೃಷ್ಠಿಯಾಗುವ ಮೂಲಕ ದೇಶದ ಅಭಿವೃದ್ಧಿಗೆ ಪೂರಕವಾಗಲಿ ಎಂದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ನಂದಿನಿಯ ಹೊಸ ಹೊಸ ಉತ್ಪನ್ನಗಳನ್ನು ಪುತ್ತೂರಿನ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಹಾಗೂ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಕೃಷ್ಣಪ್ರಸಾದ್ ಆಳ್ವ ಫ್ರಾಂಚೈಸಿಯನ್ನು ಪ್ರಾರಂಭಿಸಿದ್ದಾರೆ ಎಂದರು.
ಕೃಷ್ಣ ಪ್ರಸಾದ್ ಆಳ್ವ ಮಾತನಾಡಿ, ಕಳೆದ 18 ವರ್ಷಗಳಿಂದ ಪುತ್ತೂರಿನಲ್ಲಿ ನಂದಿನಿ ಡೀಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದು 100ಲೀ ಹಾಲಿನಿಂದ ಪ್ರಾರಂಭಿಸಿ ಇಂದು 2000ಲೀಟರ್ ಹಾಲು ವ್ಯಾಪಾರವಾಗುತ್ತಿದೆ. ಅದಕ್ಕಾಗಿ ಫ್ರಾಂಚೈಸಿ ಒದಗಿಸಿದ್ದಾರೆ. ಅದಕ್ಕಾಗಿ ದ.ಕ ಹಾಲು ಒಕ್ಕೂಟಕ್ಕೆ ಅಭಿನಂದನೆಗಳು. ಫ್ರಾಂಚೈಸಿಯಲ್ಲಿ ನಂದಿನಿ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ, ಮಜ್ಜಿಗೆ, ಸೇರಿದಂತೆ ಎಲ್ಲಾ ರೀತಿಯ ಉತ್ಪನ್ನಗಳು ದೊರೆಯಲಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೃಷ್ಣಪ್ರಸಾದ್ ಆಳ್ವ ತಿಳಿಸಿದರು.
ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ನ್ಯಾಯವಾದಿ ಬಾಲಕೃಷ್ಣ ರೈ ಅರಂತನಡ್ಕ, ರೋಷನ್ ರೈ ಬನ್ನೂರು, ದ.ಕ ಹಾಲು ಒಕ್ಕೂಟದ ನಿರ್ದೇಶಕಿ ಸವಿತಾ ಎನ್ ಶೆಟ್ಟಿ, ಅಧಿಕಾರಿಗಳಾದ ಜಾನೆಟ್, ಸಚಿನ್, ಸದಾಶಿವ, ಕೃಷ್ಣಪ್ರಸಾದ್ ಆಳ್ವರವರ ಪತ್ನಿ ವಿದ್ಯಾ ಕೆ.ಪಿ ಆಳ್ವ, ಪುತ್ರ ವಿಕ್ರಂ ಆಳ್ವ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಫ್ರಾಂಚೈಸಿ ನಿರ್ವಾಹಕ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿದರು.