ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ದ. 17 ರಂದು ಆರಂಭಗೊಂಡಿದ್ದ ಧನುಮಾಸದ ವಿಶೇಷ ಪೂಜೆ ಒಂದು ತಿಂಗಳ ಕಾಲ ನಡೆದು ಜ. 14 ರಂದು ಸಂಪನ್ನಗೊಂಡಿತು.
ಕೊನೆಯ ದಿನ ಮಕರ ಸಂಕ್ರಮಣವಾದುದರಿಂದ ವಿಶೇಷವಾಗಿ ಭಕ್ತರ ಸಂಖ್ಯೆ ಸಾವಿರಕ್ಕೂ ಅಧಿಕವಾಗಿತ್ತು. ಒಂದು ತಿಂಗಳ ಕಾಲ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದ ನೇತೃತ್ವದಲ್ಲಿ ವಿವಿಧ ಭಜನಾ ಮಂಡಳಿಯವರಿಂದ ನಿರಂತರ ಭಜನಾ ಸೇವೆ ನಡೆದು ಬಂತು. ಅಲ್ಲದೇ ರುದ್ರಾಧ್ಯಾಯಿಗಳಿಂದ ರುದ್ರಪಾರಾಯಣ, ವಿವಿಧ ಭಜನಾ ಮಂಡಳಿಯವರಿಂದ ಭಜನಾ ಸೇವೆ, ಕುಣಿತ ಭಜನಾ ತಂಡದವರಿಂದ ನೃತ್ಯ ಭಜನಾ ಸೇವೆ, ಮಣಿಕಂಠ ಚೆಂಡೆ ಮೇಳದವರಿಂದ ಚೆಂಡೆ ಸೇವೆ, ಸಂಗೀತ, ಯಕ್ಷಗಾನ ಸೇವೆ ನಡೆದು ಬಂತು. ಪ್ರತಿದಿನ ಪೂಜೆಯ ಬಳಿಕ ಭಕ್ತಾಭಿಮಾನಿಗಳಿಗೆ ಉಪಾಹಾರದ ವ್ಯವಸ್ಥೆಯೂ ಏರ್ಪಡಿಸಲಾಗಿತ್ತು. ವಿಶೇಷ ದಿನಗಳಂದು ದೇವರಿಗೆ ಮತ್ತು ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ, ದೀಪಾಲಂಕಾರ ಸೇವೆ ನಡೆಯಿತು. ದೇವಳದ ಪ್ರಧಾನ ಅರ್ಚಕ ದಿವಾಕರ ಭಟ್ ರವರು ಪೂಜಾ ವಿಧಿವಿಧಾನ ನೆರವೇರಿಸಿದರು.
ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಶಿವಗಿರಿ ಬೀಡು, ಮೊಕ್ತೇಸರ ವಿನೋದ್ ರೈ ಗುತ್ತು, ಆಡಳಿತ ಮಂಡಳಿ ಸದಸ್ಯರು, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ಪ್ರ.ಕಾರ್ಯದರ್ಶಿ ವಸಂತಕೃಷ್ಣ ಕೋನಡ್ಕ, ಪದಾಧಿಕಾರಿಗಳು, ಸದಸ್ಯರು ಹಾಗೂ ಊರಪರವೂರ ಭಕ್ತಾಭಿಮಾನಿಗಳು ಪಾಲ್ಗೊಂಡರು.
629 ಧನುಪೂಜೆ
ಕೊನೆಯ ದಿನ 141 ಪೂಜೆಯೊಂದಿಗೆ ಒಟ್ಟು 629 ಧನುಪೂಜೆ ಸೇವೆ ನಡೆದಿದೆ.
ಬೆಳಗ್ಗಿನ ಉಪಾಹಾರ
ಬೆಳ್ಳಂಬೆಳಗ್ಗೆ ಎದ್ದು ಧನುಪೂಜೆಗಾಗಿ ಬಂದ ಭಕ್ತಾಭಿಮಾನಿಗಳಿಗೆ ಪೂಜೆಯ ಬಳಿಕ ಪ್ರಸಾದ ವಿತರಣೆಯಾಗಿ, ಪ್ರತಿದಿನ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ನಿರಂತರ ಒಂದು ತಿಂಗಳ ಕಾಲ ವಿವಿಧ ಪ್ರಾಯೋಜಕರಿಂದ ಉಪಾಹಾರ ಸೇವೆ ನಡೆಯಿತು. ಕೊನೆಯ ದಿನವಾದ ಜ. 14 ರಂದು ದೋಸೆ, ಗೋಳಿಬಜೆ, ಕ್ಷೀರ ಹಾಗು ಚಹಾ ವ್ಯವಸ್ಥೆ ಮಾಡಲಾಗಿತ್ತು.