ಮೊತ್ತಮೊದಲ ಬಾರಿಗೆ ’ಸಸ್ಯ ಜಾತ್ರೆ’ ಎನ್ನುವ ಅಪೂರ್ವ ಪರಿಕಲ್ಪನೆಯನ್ನು ಪುತ್ತೂರಿಗೆ ಪರಿಚಯಿಸಿದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ. ಯು.ಪಿ. ಶಿವಾನಂದ ಮತ್ತು ಅವರ ಬಳಗಕ್ಕೆ ಮೊತ್ತಮೊದಲನೆಯದಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.
ಕೃಷಿಕರು, ಬೆಳೆಗಾರರನ್ನು ಗುರುತಿಸಿ, ಪ್ರೋತ್ಸಾಹ ನೀಡಿ, ಅವರ ಸಾಹಸಗಾಥೆಯನ್ನು ಜಗತ್ತಿಗೆ ತಿಳಿಯಪಡಿಸುವ ಮುಖ್ಯ ಉದ್ದೇಶವು ಸಸ್ಯಜಾತ್ರೆಯ ಮೂಲಕ ಅದ್ಭುತವಾಗಿ ಸಾಕಾರಗೊಂಡಿದೆ.
ನನಗೆ ಸಸ್ಯ ಜಾತ್ರೆಯಲ್ಲಿ ಅತ್ಯುತ್ತಮವಾಗಿ ಕಂಡಿದ್ದು, ನಾವು ಸಾಮಾನ್ಯವಾಗಿ ಗಂಭೀರವಾಗಿ ಪರಿಗಣಿಸದಂತಹ, ಕೃಷಿಯ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ಹಲವು ರೈತರನ್ನು ಗುರುತಿಸಿ, ಸನ್ಮಾನಿಸಿ ಗೌರವಿಸಿದ್ದು.
ನಮ್ಮ ಪುಟ್ಟ ಪುತ್ತೂರಿನ ಆಸುಪಾಸಿನಲ್ಲಿ ಇಷ್ಟೊಂದು ಸಾಧಕ ರೈತರು, ಕೃಷಿಕರು ಇದ್ದಾರೆ ಎನ್ನುವುದು ನಾವು ಅತೀವವಾಗಿ ಹೆಮ್ಮೆಪಡಬೇಕಾದ ವಿಚಾರ. ಪ್ರತಿಯೋರ್ವ ರೈತರು ಕೂಡ ಅವರ ಕ್ಷೇತ್ರದಲ್ಲಿ ನಮಗೆ ಆದರ್ಶನೀಯರಾಗಿದ್ದಾರೆ.
ಕೃಷಿಯಲ್ಲಿ ಸಾಧನೆ ಮಾಡಿರುವ ದಿವ್ಯನಾಥ ಶೆಟ್ಟಿ, ಸತೀಶ್ ಗೌಡ ಬಲ್ನಾಡು, ಅಣ್ಣು ಪೂಜಾರಿ,ಮನಮೋಹನ್ ಆರಂಬ್ಯ ಹೀಗೆ ಉದ್ದಕ್ಕೂ ಇರುವ ಕೃಷಿಕರ ಸಾಧನೆಗಳು ಹೊಸ ಕೃಷಿಕರಿಗೆ ಪ್ರೇರಣಾದಾಯಕ.
ಸಾಧಕರಿಗೆ ನೀಡಿದ ವಿಭಿನ್ನವಾದ, ಕೈಯಲ್ಲೇ ತಯಾರಿಸಿದ ಕೈಬುಟ್ಟಿ, ಜೇನು, ಸಸ್ಯ ಪರಿಸರ ಪ್ರೇಮಿ ನೀಡಿದ ಉಡುಗೊರೆಯಲ್ಲೂ ತಮ್ಮ ಪರಿಸರದ ಕುರಿತ ಬದ್ಧತೆ ಮತ್ತು ಪರಿಸರಸ್ನೇಹಿ ಚಿಂತನೆ ಕಾಣಿಸಿತು.
ಸದಾ ಹಸಿರಿನ ಬಗ್ಗೆ ಯೋಚನೆ ಮಾಡುವ ಓರ್ವ ಪ್ಲೇಸ್ಕೂಲ್ ನ ಶಿಕ್ಷಕಿಯಾಗಿ ನಾನು ನನ್ನ ಶಾಲಾ ಮಕ್ಕಳಿಗೆ ಮತ್ತು ಅವರ ಹೆತ್ತವರಿಗೆ ಸದಾ ಪರಿಸರ ಸ್ನೇಹಿ ಪರಿಕಲ್ಪನೆಗಳ ಬಗ್ಗೆ ಕಲಿಸಲು ಯತ್ನಿಸುತ್ತಿದ್ದೇನೆ. ಹೆಚ್ಚು ಹೆಚ್ಚು ಜನರು ಭೂಮಿ ತಾಯಿಯನ್ನು ಉಳಿಸಿ, ಬೆಳೆಸಿ, ಪೋಷಿಸಲು ಮುಂದಡಿ ಇಡುತ್ತಾರೆ ಎನ್ನುವುದು ನನ್ನ ಭರವಸೆ.
’ನನ್ನ ಗಾರ್ಡನ್’ ಪರಿಕಲ್ಪನೆಯನ್ನು ಅಭಿನಂದಿಸಿದ್ದಕ್ಕಾಗಿ ಧನ್ಯವಾದಗಳು.
ಶುಭಾಶಯಗಳೊಂದಿಗೆ,