ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ಬೆದರಿಕೆ ಕರೆ; ಶಿರಾಡಿಯ ತಾಯಿ, ಮಗುವಿನ ಹತ್ಯೆ ಪ್ರಕರಣದ ಅಪರಾಧಿ ಜಯೇಶ್ ಕೃತ್ಯ

0

ಪುತ್ತೂರು: ದಾವೂದ್ ಇಬ್ರಾಹಿಂ ತಂಡದ ಸದಸ್ಯನೆಂದು ಹೇಳಿಕೊಂಡು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಬೆದರಿಕೆ ಕರೆ ಮಾಡಿರುವ ಆರೋಪಿ, 2008ರಲ್ಲಿ ಶಿರಾಡಿಯಲ್ಲಿ ನಡೆದಿದ್ದ ತಾಯಿ, ಮಗುವಿನ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಜಯೇಶ್ ಯಾನೆ ಜಯೇಶ್‌ಕಾಂತ್ ಅಲಿಯಾಸ್ ಶಾಹೀರ್ ಅಲಿಯಾಸ್ ಶಾಕೀರ್ ಎಂದು ನಾಗ್ಪುರ ಪೊಲೀಸರು ಪತ್ತೆ ಹಚ್ಚಿದ್ದಾರೆ.
ತನ್ನ ದೊಡ್ಡಪ್ಪನ ಮಗನ ಪತ್ನಿ ಮತ್ತು ಆಕೆಯ 3 ವರ್ಷದ ಮಗುವಿನ ಕೊಲೆ ಪ್ರಕರಣದ ಅಪರಾಧಿಯಾಗಿ ಶಿಕ್ಷೆಗೆ ಗುರಿಯಾಗಿ ಬೆಳಗಾವಿಯ ಹಿಂಡಲಗಾ ಜೈಲಲ್ಲಿರುವ ಜಯೇಶ್ ಜೈಲಿಂದಲೇ ಗಡ್ಕರಿಯವರ ನಾಗ್ಪುರ ಕಚೇರಿಗೆ ಬೆದರಿಕೆ ಕರೆ ಮಾಡಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕೊಲ್ಲಾಪುರ ಟೆರರಿಸ್ಟ್ ವಿರೋಧಿ ದಳ ಮತ್ತು ನಾಗ್ಪುರ ಪೊಲೀಸರು ಜೈಲಿಗೆ ಭೇಟಿ ನೀಡಿ ತನಿಖೆ ನಡೆಸಿದ ವೇಳೆ ಜಯೇಶ್ ಬಳಿಯಲ್ಲಿದ್ದ ಡೈರಿಯಲ್ಲಿ ಗಡ್ಕರಿ ಕಚೇರಿಯ ದೂರವಾಣಿ ಸಂಖ್ಯೆ ಸಹಿತ ಹಲವು ನಂಬರ್‌ಗಳು ಪತ್ತೆಯಾಗಿವೆ. ಕಚೇರಿಗೆ ಕಾಲ್ ಮಾಡಿದ ಮೊಬೈಲ್ ಫೋನ್ ಇನ್ನೂ ಪತ್ತೆಯಾಗಿಲ್ಲ.ಈತನಿಗೆ ಜೈಲೊಳಗೆ ಮೊಬೈಲ್ ಫೋನ್ ಎಲ್ಲಿಂದ ಬಂತು ಎನ್ನುವ ಕುರಿತೂ ತನಿಖೆ ಮುಂದುವರಿದಿದೆ.

ಜಯೇಶ್‌ನ ವಿಚಾರಣೆಗೆ ಅವಕಾಶ ನೀಡುವಂತೆ ನಾಗ್ಪುರ ಪೊಲೀಸರು ಹಿಂಡಲಗಾ ಜೈಲಿನ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಬೆದರಿಕೆ ಕರೆ ಮಾಡಿರುವಾತನ ಉದ್ದೇಶ ಏನು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬರಲಿದೆ. ಕರ್ನಾಟಕ ಪೊಲೀಸರೂ ತನಿಖೆಗೆ ಸಹಕಾರ ನೀಡುತ್ತಿದ್ದಾರೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಜಯೇಶ್: ಗಡ್ಕರಿಯವರ ಕಚೇರಿಗೆ ಬೆದರಿಕೆ ಕರೆ ಮಾಡಿರುವ ಆರೋಪಿ ಜಯೇಶ್ 2008ರಲ್ಲಿ ಶಿರಾಡಿಯಲ್ಲಿ ತನ್ನ ದೊಡ್ಡಪ್ಪನ ಮಗನ ಪತ್ನಿ ಮತ್ತು ಮಗುವಿನ ದಾರುಣ ಹತ್ಯೆ ಪ್ರಕರಣದ ಅಪರಾಧಿಯಾಗಿ ಪುತ್ತೂರು ಜಿಲ್ಲಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ. ಶಿರಾಡಿ ಗ್ರಾಮದ ಸಿರಿಬಾಗಿಲು ಪೊಲ್ಯೊಟ್ಟು ಎಂಬಲ್ಲಿ 2008ರ ಆ.2ರಂದು ತನ್ನ ದೊಡ್ಡಪ್ಪನ ಮಗ ಲೋಹಿತ್‌ರವರ ಪತ್ನಿ ಸೌಮ್ಯ (23ವ.) ಮತ್ತು ಆಕೆಯ 3 ವರ್ಷದ ಗಂಡು ಮಗು ಜಿಷ್ಣುವನ್ನು ಕೊಲೆಗೈದ ಪ್ರಕರಣದ ಅಪರಾಧಿಯಾಗಿರುವ ಜಯೇಶ್ ಯಾನೆ ಜಯೇಶ್‌ಕಾಂತ್ ಅಲಿಯಾಸ್ ಶಾಹೀರ್ ಅಲಿಯಾಸ್ ಶಾಕೀರ್‌ಗೆ ಗಲ್ಲು ಶಿಕ್ಷೆ ವಿಧಿಸಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ 2016ರ ಆಗಸ್ಟ್ 12ರಂದು ತೀರ್ಪು ನೀಡಿತ್ತು.

ಪೊಲ್ಯೊಟ್ಟು ನಿವಾಸಿಯಾಗಿದ್ದ ಆರೋಪಿ ಜಯೇಶ್ ಸಿರಿಬಾಗಿಲು ಗ್ರಾಮದ ಪೊಲ್ಯೊಟ್ಟು ಎಂಬಲ್ಲಿ ದೊಡ್ಡಪ್ಪನ ಮಗ ರೋಹಿತ್ ಯಾನೆ ಲವರವರ ಪತ್ನಿ ಸೌಮ್ಯ ಎಂಬವರ ಕುತ್ತಿಗೆಗೆ ಬಟ್ಟೆಯನ್ನು ಸುತ್ತಿ ಚೂರಿಯಿಂದ ಅವರ ಹೊಟ್ಟೆಗೆ ತಿವಿದು, ಅವರ ಕತ್ತಿನಲ್ಲಿದ್ದ 10 ಗ್ರಾಂ ಚಿನ್ನದ ಮಾಂಗಲ್ಯ ಸರ ಮತ್ತು ಕಿವಿಯಲ್ಲಿದ್ದ ಬೆಂಡೋಲೆಯನ್ನು ದೋಚಿದ್ದಲ್ಲದೆ ಸೌಮ್ಯರ ಪುತ್ರ 3 ವರ್ಷ ಪ್ರಾಯದ ಜಿಷ್ಣುವಿಗೂ ಚೂರಿಯಿಂದ ತಿವಿದು ಕೊಲೆ ಮಾಡಿದ್ದ.  ಎಗರಿಸಿದ್ದ ಚಿನ್ನದ ಮಾಂಗಲ್ಯ ಸರ ಮತ್ತು ಬೆಂಡೋಲೆಯನ್ನು ತನ್ನ ಪರಿಚಿತರಾಗಿರುವ ಕೊಯಿಲದ ರುಕ್ಯಾಬಾನು ಎಂಬವರ ಮೂಲಕ ಉಪ್ಪಿನಂಗಡಿಯ ಜ್ಯುವೆಲ್ಲರಿಯೊಂದಕ್ಕೆ ಮಾರಾಟ ಮಾಡಿಸಿದ್ದ.ಅದರಲ್ಲಿ ದೊರೆತ ಹಣದಲ್ಲಿ 5 ಸಾವಿರ ರೂ.ಗಳನ್ನು ರುಕ್ಯಾಬಾನು ಜಯೇಶ್‌ಗೆ ನೀಡಿದ್ದರು.

ಮನೆಯಿಂದ ಮೊದಲೇ ಹೊರ ಹಾಕಿದ್ದರು..: ಪ್ರಕರಣ ನಡೆದ ಸಂದರ್ಭ ಆಗಿನ್ನೂ 19ರ ಹರೆಯದವನಾಗಿದ್ದ ಆರೋಪಿ ಜಯೇಶ್ ಕೆಲವೊಂದು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಮನೆಯವರು ಆತನನ್ನು ಮನೆಯಿಂದ ಹೊರ ಹಾಕಿದ್ದರು.

ಕೇರಳಕ್ಕೆ ಪರಾರಿಯಾಗಿದ್ದ: ಕೊಲೆ ಕೃತ್ಯದ ಬಳಿಕ ಪರಾರಿಯಾಗಿದ್ದ ಜಯೇಶ್ ನಾಲ್ಕು ವರ್ಷಗಳ ಕಾಲ ಕೇರಳದಲ್ಲಿ ತಲೆಮರೆಸಿಕೊಂಡಿದ್ದ. 10-10-2012ರಲ್ಲಿ ಕೇರಳದಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದ.ಕೇರಳದ ಅಲಪುರಂ ಜಿಲ್ಲೆಯಲ್ಲಿ ನೆಲೆಸಿದ್ದ ಆತ ಅಲ್ಲಿ ಪತ್ನಿಯೊಂದಿಗೆ ಜಗಳವಾಡಿ ತೆಂಗಿನ ಮರ ಹತ್ತಿ ಕುಳಿತ್ತಿದ್ದ. ಈ ವಿಚಾರ ತಿಳಿದು ಅಲ್ಲಿಗೆ ಆಗಮಿಸಿದ್ದ ಪೊಲೀಸರು ಆತನನ್ನು ಮರದಿಂದ ಕೆಳಗಿಳಿಸಿ ಠಾಣೆಗೆ ಕರೆದೊಯ್ದಿದ್ದರು. ಅಲ್ಲಿ ಆತನನ್ನು ವಿಚಾರಣೆ ಮಾಡಿದಾಗ ಆತ ಶಿರಾಡಿಯಲ್ಲಿ ತಾಯಿ, ಮಗುವಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿರುವ ಆರೋಪಿ ಎಂದು ತಿಳಿದು ಬಂದಿತ್ತು.ಕೇರಳ ಪೊಲೀಸರ ಅತಿಥಿಯಾಗಿದ್ದ ಆರೋಪಿಯನ್ನು ಬಳಿಕ ಪುತ್ತೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡು ಶಿರಾಡಿಯ ಡಬ್ಬಲ್ ಮರ್ಡರ್ ಪ್ರಕರಣದಲ್ಲಿ ಬಂಽಸಿ ಕರೆತಂದು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ..: ತಾಯಿ ಮಗುವಿನ ಕೊಲೆ ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಜಯೇಶ್ ಕೇರಳದಲ್ಲಿ ನೆಲೆಸಿದ್ದ. ಅಲ್ಲಿ ಮುಸ್ಲಿಂ ಯುವತಿಯೋರ್ವರನ್ನು ಪ್ರೀತಿಸಿ ಮದುವೆಯಾಗಿದ್ದ ಜಯೇಶ್ ಬಳಿಕ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ.

ಕಟಕಟೆಯಿಂದ ಹಾರಿ ಪರಾರಿಯಾಗಲು ಯತ್ನಿಸಿದ್ದ: ತಾಯಿ, ಮಗುವಿನ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ವಿಚಾರಣೆಗಾಗಿ ಮಂಗಳೂರು ಕಾರಾಗೃಹದಿಂದ ಪುತ್ತೂರು ಜಿಲ್ಲಾ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಕರೆ ತಂದು ಸಾಕ್ಷಿ ವಿಚಾರಣೆ ನಡೆಯುತ್ತಿದ್ದಾಗ ಕಟಕಟೆಯಲ್ಲಿದ್ದ ಆರೋಪಿ ದಿಢೀರ್ ಕಟಕಟೆಯ ಬಲಬದಿಯಿಂದ ಮೇಲಕ್ಕೆ ಜಿಗಿದು ಅಲ್ಲಿದ್ದವರು ನೋಡನೋಡುತ್ತಿದ್ದಂತೆಯೇ ಕೋರ್ಟಿನಿಂದ ಹೊರಗೆ ಬಂದು ಪರಾರಿಯಾಗಲು ಯತ್ನಿಸಿದ್ದ. ರಸ್ತೆಯಲ್ಲಿ ಓಡುತ್ತಾ ಮಿನಿ ವಿಧಾನ ಸೌಧದ ಕಡೆ ಓಡುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಕಡಬದ ಪೊಲೀಸ್ ಸಿಬಂದಿ ಮಹೇಶ್ ಹಾಗೂ ನ್ಯಾಯವಾದಿಯೊಬ್ಬರು ಆತನನ್ನು ಹಿಡಿದುಕೊಂಡರು. ಅದೇ ವೇಳೆ ಸಾರ್ವಜನಿಕರೂ ಸೇರಿಕೊಂಡು ಆತನನ್ನು ಹಿಡಿದು ನ್ಯಾಯಾಲಯಕ್ಕೆ ಕರೆ ತಂದಿದ್ದರು. ಈ ಸಂದರ್ಭದಲ್ಲಿ ಆತ ಒಂದು ರೀತಿಯಲ್ಲಿ ಬೆದರಿಕೆಯೊಡ್ಡುವ ರೀತಿಯಲ್ಲಿ ವರ್ತಿಸಿದ್ದ. ಈ ಘಟನೆಯ ಕುರಿತು ಪುತ್ತೂರು ನ್ಯಾಯಾಲಯದಿಂದ ಬಂದ ಮಾಹಿತಿ ಮತ್ತು ಈತನನ್ನು ಜಿಲ್ಲಾ ಕಾರಾಗೃಹದಿಂದ ಪುತ್ತೂರಿಗೆ ಕರೆ ತಂದ ಪೊಲೀಸರ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಜಯೇಶ್ ಯಾನೆ ಶಾಹೀರ್ ಯಾನೆ ಶಾಕೀರ್‌ನ ವಿರುದ್ಧ ಐಪಿಸಿ ಸೆಕ್ಷನ್ 224ರ ಪ್ರಕಾರ ‘ಅಭಿರಕ್ಷಾಲಯದಿಂದ ಓಡಲೆತ್ನಿಸಿದ’ ಪ್ರಕರಣ ದಾಖಲಾಗಿತ್ತು.

ಸೌಮ್ಯ ಮತ್ತು ಜಿಷ್ಣುವಿನ ಹತ್ಯೆ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಪುತ್ತೂರಿನ ಐದನೆ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜಯೇಶ್ ಯಾನೆ ಜಯೇಶ್‌ಕಾಂತ್ ಅಲಿಯಾಸ್ ಶಾಹೀರ್ ಅಲಿಯಾಸ್ ಶಾಕೀರ್‌ಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಆತ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್ ಗಲ್ಲುಶಿಕ್ಷೆಯನ್ನು ರದ್ದುಪಡಿಸಿ ಜೀವಾವಧಿ ಶಿಕ್ಷೆಗೆ ಪರಿವರ್ತನೆಗೊಳಿಸಿತ್ತು.ಬೆಳಗಾವಿಯ ಹಿಂಡಲಗಾ ಜೈಲಲ್ಲಿರುವ ಜಯೇಶ್ ಅಲ್ಲಿಂದಲೇ ನಿತಿನ್ ಗಡ್ಕರಿ ಅವರ ಕಚೇರಿಗೆ ಬೆದರಿಕೆ ಕರೆ ಮಾಡಿರುವುದನ್ನು ನಾಗ್ಪುರ ಪೊಲೀಸರು ಪತ್ತೆ ಮಾಡಿದ್ದು ತನಿಖೆ ಮುಂದುವರಿದಿದೆ.

3 ಬಾರಿ ಕರೆ ಮಾಡಿದ್ದ

ನಿತಿನ್ ಗಡ್ಕರಿಯವರ ಕಚೇರಿಗೆ ಅಪರಿಚಿತ ವ್ಯಕ್ತಿ ಮೂರು ಬಾರಿ ಕರೆ ಮಾಡಿ 100 ಕೋಟಿ ರೂ.ಹಣ ನೀಡುವಂತೆ ಹೇಳಿ ಕೊಲೆ ಬೆದರಿಕೆ ಹಾಕಿದ್ದಲ್ಲದೇ ಕಚೇರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಕುರಿತು ನಿತಿನ್ ಗಡ್ಕರಿ ಅವರ ಕಚೇರಿಯಿಂದ ಬಂದ ದೂರಿನ ಮೇರೆಗೆ ನಾಗ್ಪುರ ಪೊಲೀಸರು ತನಿಖೆ ಆರಂಭಿಸಿದ್ದರು.ಬೆಳಿಗ್ಗೆ 11.25, 11:32 ಮತ್ತು ಮಧ್ಯಾಹ್ನ 12:30ಕ್ಕೆ ಗಡ್ಕರಿ ಅವರ ಕಚೇರಿಗೆ ಬೆದರಿಕೆ ಕರೆಗಳು ಬಂದಿವೆ.ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಯು ನಾಗ್ಪುರದ ಖಮ್ಲಾ ಚೌಕ್‌ನಲ್ಲಿದೆ,ಇದು ಅವರ ಮನೆಯಿಂದ ಸುಮಾರು 1 ಕಿಲೋಮೀಟರ್ ದೂರದಲ್ಲಿದೆ.

LEAVE A REPLY

Please enter your comment!
Please enter your name here