ಪುತ್ತೂರು: ಹಿರಿಯ ಸಿನಿಮಾ ಪ್ರಚಾರಕರ್ತ ಡಿ.ವಿ.ಸುಧೀಂದ್ರ ಸ್ಥಾಪಿಸಿರುವ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ನೀಡುವ 2021ನೇ ಸಾಲಿನ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಈಶ್ವರ ದೈತೋಟ ಭಾಜನರಾಗಿದ್ದಾರೆ. ಜ.25ರಂದು ಸಂಜೆ 5 ಗಂಟೆಗೆ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯಲಿರುವ ಸಂಸ್ಥೆಯ 47ನೇ ವಾರ್ಷಿಕೋತ್ಸವದಂದು ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಈಶ್ವರ ದೈತೋಟ : ಪಾಣಾಜೆ ದೈತೋಟದ ಪಂಡಿತ್ ಶಂಕರನಾರಾಯಣ ಭಟ್ ಹಾಗೂ ವೆಂಕಟೇಶ್ವರಿ ಅಮ್ಮ ದಂಪತಿಯ ಕೊನೆಯ ಪುತ್ರರಾಗಿರುವ ಈಶ್ವರ ದೈತೋಟರವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರ ಪತ್ನಿ ಆಶಾರವರು ಜರ್ನಲಿಸ್ಟ್ ಆಗಿದ್ದು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಅಧಿಕಾರಿಯಾಗಿದ್ದಾರೆ. ಇವರ ಕುಟುಂಬ ಹಿರಿಯರ ಕಾಲದಿಂದಲೇ ಆಯುರ್ವೇದಿಕ್ ಔಷಧಿಯ ಕೇಂದ್ರವಾಗಿದ್ದು ಇವರ ತಂದೆಯವರು ಹಾಗೂ ಹಿರಿ ತಲೆಮಾರಿನವರು ಪಾಣಾಜೆ ಪಂಡಿತರೆಂದೇ ಖ್ಯಾತರಾಗಿದ್ದವರು. ಇವರ ಸಹೋದರರಾದ ಸಾಹಿತಿ ಶಂಪಾ ದೈತೋಟ, ಆಯುರ್ವೇದ ಪಂಡಿತ್ ವೆಂಕಟ್ರಾಂ ದೈತೋಟ ಹಾಗೂ ಮಂಗಳೂರಿನಲ್ಲಿ ಎಲ್ಐಸಿ ಲೀಗಲ್ ಅಡ್ವೈಸರ್ ಆಗಿರುವ ಚಂದ್ರಶೇಖರ ದೈತೋಟ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದವರು. ಡಾ. ಸಾವಿತ್ರಿ ದೈತೋಟ ಹಾಗೂ ಈಶ್ವರೀ ಬಾಲಕೃಷ್ಣ ಇವರ ಸಹೋದರಿಯರಾಗಿದ್ದಾರೆ. ಕರ್ನಾಟಕದ ಅತಿಹೆಚ್ಚು ದಿನಪತ್ರಿಕೆಗಳನ್ನು ಮುನ್ನಡೆಸಿದ ಹಿರಿಮೆಯನ್ನೂ ಹೊಂದಿರುವ ಅವರು 1992 ರಿಂದ 1999 ರವರೆಗೆ ಮಣಿಪಾಲದ ಉದಯವಾಣಿ ಸ್ಥಾನಿಕ ಸಂಪಾದಕರಾಗಿ, ಬೆನೆಟ್ಕೋಲ್ಮನ್ ಗುಂಪಿನ ಟೈಮ್ಸ್ಆಫ್ಇಂಡಿಯಾ ಕನ್ನಡ ಪತ್ರಿಕೆಯ ಸಂಪಾದಕರಾಗಿ, ಕನ್ನಡದ ಹಿರಿಯ ದೈನಿಕ ಸಂಯುಕ್ತ ಕರ್ನಾಟಕದ ಪ್ರಧಾನ ಸಂಪಾದಕರಾಗಿ, ವಿಜಯ ಕರ್ನಾಟಕ ಪತ್ರಿಕೆಯ ಸ್ಥಾಪಕ ಪ್ರಧಾನ ಸಂಪಾದಕರಾಗಿ ಸುಮಾರು ಎರಡೂವರೆ ವರ್ಷ ಸೇವೆ ಸಲ್ಲಿಸಿರುತ್ತಾರೆ. ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ 2006ನೇಯ ಸಾಲಿನ ವಾರ್ಷಿಕ ಪ್ರಶಸ್ತಿಯೂ ಲಭಿಸಿದೆ. ಭಾರತೀಯ ಪತ್ರಿಕೋದ್ಯಮದಲ್ಲಿ ಕುಗ್ರಾಮ ಗುರುತಿಸಿ ಎಂಬ ಡೆವೆಲಪ್ಮೆಂಟ್ ಜರ್ನಲಿಸಂ ಎಕ್ಸಪರಿಮೆಂಟ್ ನೇತೃತ್ವ ವಹಿಸುವುದರೊಂದಿಗೆ ಮುದ್ರಣ ಮಾಧ್ಯಮದಲ್ಲಿ ಅನೇಕ ಹೊಸ ಪ್ರಯೋಗಗಳನ್ನು ಮಾಡಿದ್ದಾರೆ.