ಪುತ್ತೂರು: ಧ್ವನಿ, ಬೆಳಕು, ಶಾಮಿಯಾನ ಮತ್ತು ಡೆಕೋರೇಶನ್ ಮ್ಹಾಲಕರ ಸಂಘದ ನೇತೃತ್ವದಲ್ಲಿ ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಮತ್ತು ಪುತ್ತೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಕಾರದೊಂದಿಗೆ 8 ತಂಡಗಳ ಪ್ರೋ ಮಾದರಿಯ ಬೆಳಕಿನ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ ಜ.21ರಂದು ದರ್ಬೆ ಮಂಗಳಾ ಹೊಟೇಲ್ ಮುಂಭಾಗ ನಡೆಯಲಿದೆ ಎಂದು ಧ್ವನಿ, ಬೆಳಕು, ಶಾಮಿಯಾನ ಮತ್ತು ಡೆಕೋರೇಶನ್ ಮ್ಹಾಲಕರ ಸಂಘದ ಗೌರವಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಕಬಡ್ಡಿ ಪಂದ್ಯಾಟದಲ್ಲಿ ರಸಮಂಜರಿ ಕಾರ್ಯಕ್ರಮ, ಪ್ರದರ್ಶನ ಪಂದ್ಯಾಟ, ಸನ್ಮಾನ ಸಮಾರಂಭ ನಡೆಯಲಿದ್ದು, ಪಂದ್ಯಾಟದ ಉದ್ಘಾಟನೆಯನ್ನು ರಾತ್ರಿ ಶಾಸಕ ಸಂಜೀವ ಮಠಂದೂರು ಮಾಡಲಿದ್ದಾರೆ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಕ್ರೀಡಾಂಗಣ ಉದ್ಘಾಟಿಸಲಿದ್ದಾರೆ. ಕೋಡಿಂಬಾಡಿ ರೈ ಎಸ್ಟೇಟ್ನ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮೆಸ್ಕಾಂ ನಿರ್ದೇಶಕ ಕಿಶೋರ್ ಕುಮಾರ್, ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ ಕುಮಾರ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಸಹಿತ ಹಲವಾರು ಮಂದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜ.22ರಂದು ಬೆಳಿಗ್ಗೆ ಸಮಾರೋಪ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ಕೇರಳ ರಾಜ್ಯ ಕಬಡ್ಡಿ ತಂಡದ ಮಾಜಿ ನಾಯಕ ಅಬ್ದುಲ್ ಜಬ್ಬಾರ್ ಐ.ಪಿ, ರಾಜ್ಯ ಪ್ರಶಸ್ತಿ ಪುರಸ್ಕೃತ ದಯಾನಂದ ರೈ ಕೋರ್ಮಂಡ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಅವರನ್ನು ಸನ್ಮಾನಿಸಲಾಗುವುದು. ಕಬಡ್ಡಿ ಪಂದ್ಯಾಟದ ಆರಂಭದಲ್ಲಿ ಸಂಜೆ ಪುತ್ತೂರು ಗಾಂಧಿಕಟ್ಟೆಯಿಂದ ದರ್ಬೆಯ ತನಕ ಟ್ರೋಫಿ ಮೆರವಣಿಗೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಬಹುಮಾನಗಳು:
ವಿಜೇತರಿಗೆ ಪ್ರಥಮ ಬಹುಮಾನವಾಗಿ ರೂ. 30ಸಾವಿರ ನಗದು ಮತ್ತು ಟ್ರೋಫಿ, ದ್ವೀತಿಯ ರೂ. 20ಸಾವಿರ ಮತ್ತು ಟ್ರೋಫಿ, ತೃತೀಯ ರೂ.10ಸಾವಿರ ಮತ್ತು ಟ್ರೋಫಿ, ಚತುರ್ಥ 10ಸಾವಿರ ಮತ್ತು ಟ್ರೋಫಿಯನ್ನು ನೀಡಲಾಗುವುದು ಎಂದು ಸುರೇಶ್ ರೈ ಸೂಡಿಮುಳ್ಳು ತಿಳಿಸಿದ್ದಾರೆ.