ಉಪ್ಪಿನಂಗಡಿ: ಇಲ್ಲಿನ ಸಹೋದರರಿಬ್ಬರಿಗೆ ಹಲ್ಲೆ ನಡೆಸಿ ಅವರಲ್ಲಿ ಓರ್ವನನ್ನು ಕಿಡ್ನಾಪ್ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಆರೋಪಿಗಳನ್ನು ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಅಬೂಬಕ್ಕರ್ ಸಿದ್ದೀಕ್ ಯಾನೆ ಜೆಸಿಬಿ ಸಿದ್ದೀಕ್ ಕರ್ವೇಲು (39 ), ದೇರಳಕಟ್ಟೆಯ ಇರ್ಫಾನ್ (38) ಖಲಂದರ್ ಶಾಫಿ ಗಡಿಯಾರ (22), ಪಾಂಡೇಶ್ವರದ ಮುಹಮ್ಮದ್ ರಿಯಾಝ್ (33) ಹಾಗೂ ಬೆಳ್ತಂಗಡಿಯ ಮುಹಮ್ಮದ್ ಇರ್ಷಾದ್ (28 ) ಬಂಧಿತ ಆರೋಪಿಗಳು.
ಶುಕ್ರವಾರ ಬೆಳಗ್ಗಿನ ಜಾವ ಗಸ್ತಿನಲ್ಲಿದ್ದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಮಲ್ಲಿಕಾರ್ಜುನ ಅಂಗಡಿ ಮತ್ತು ಪ್ರದೀಪ್ ಎಂಬವರು ಅರ್ಕುಳ ಗ್ರಾಮದ ತುಪ್ಪೆಕಲ್ಲು ಎಂಬಲ್ಲಿ ಅನುಮಾನಸ್ಪದವಾಗಿ ಕಾರೊಂದರ ಬಳಿ ನಿಂತಿದ್ದ ಇವರನ್ನು ಕಂಡು ಪೊಲೀಸರು ಪ್ರಶ್ನಿಸಿದ್ದು, ಈ ಸಂದರ್ಭ ಇವರು ಪೊಲೀಸರತ್ತ ಕಲ್ಲು ತೂರಾಟ ನಡೆಸಿ ಹಲ್ಲೆಗೆ ಯತ್ನಿಸಿದ್ದಾರಲ್ಲದೆ, ಅವರ ಮೇಲೆ ಕಾರನ್ನು ಡಿಕ್ಕಿ ಹೊಡೆಸಲು ಬಂದು, ಅಲ್ಲಿಂದ ಕಾರಿನೊಂದಿಗೆ ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಹಣ ಸುಲಿಗೆಯ ಉದ್ದೇಶದಿಂದ ಅಪಹರಣ, ಹಲ್ಲೆ ಪ್ರಕರಣ ದಾಖಲಾಗಿರುವುದು ತಿಳಿದು ಬಂದಿದೆ . ಬೆಂಗಳೂರಿನ ರೌಡಿ ಶೀಟರ್ ಒಬ್ಬನ ಸೂಚನೆಯಂತೆ ಕೊಯಿಲ ನಿವಾಸಿ ಶಾರೂಕ್‌ನನ್ನು ಅಪಹರಿಸಿ, ಗೃಹ ಬಂಧನದಲ್ಲಿಟ್ಟಿದ್ದಾಗಿ ಆರೋಪಿಗಳು ಈ ಸಂದರ್ಭ ಬಾಯ್ಬಿಟ್ಟಿದ್ದಾರೆ. ಚಿನ್ನದ ಬಿಸ್ಕತ್ತು ಹಾಗೂ ಹವಾಲ ಹಣದ ವಿಚಾರವಾಗಿ ಈ ಅಪಹರಣ ನಡೆದಿದೆ ಎನ್ನಲಾಗಿದೆ. ಬಂಧಿತ ಐವರ ಮೇಲೆ ವಿವಿಧ ಠಾಣೆಯಲ್ಲಿ ಪ್ರಕರಣಗಳಿದ್ದು, ಬೆಂಗಳೂರಿನ ರೌಡಿ ಶೀಟರ್‌ನ ಮೇಲೆ 20 ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ಮಾಹಿತಿ ತಿಳಿದು ಬಂದಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ನ್ಯಾಯಾಲಯಕ್ಕೆ ಬಾಡಿ ವಾರಂಟ್ ಸಲ್ಲಿಸಿ, ಆರೋಪಿಗಳನ್ನು ವಿಚಾರಣೆಗೆ ಕಸ್ಟಡಿಗೆ ಪಡೆಯಲಿದ್ದಾರೆ.