* ಶಿಲುಬೆ ಗೋಪುರದ ಪವಿತ್ರೀಕರಣ
* ಪ್ರವೇಶಧ್ವಾರ, ಧ್ವಜಸ್ತಂಭ ಉದ್ಘಾಟನೆ
* ಸಂಧ್ಯಾ ಪ್ರಾರ್ಥನೆ
ನೆಲ್ಯಾಡಿ: ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಸೈಂಟ್ ತೋಮಸ್ ಮಲಂಕರ ಸಿರಿಯನ್ ಕ್ಯಾಥೋಲಿಕ್ ಚರ್ಚ್‌ನ ಸುವರ್ಣ ಮಹೋತ್ಸವ ಹಾಗೂ ಪುತ್ತೂರು ಧರ್ಮಪ್ರಾಂತ್ಯದ ವಾರ್ಷಿಕೋತ್ಸವ ಕಾರ್ಯಕ್ರಮಗಳಿಗೆ ಜ.21 ರಂದು ಸಂಜೆ ಚಾಲನೆ ನೀಡಲಾಯಿತು.
ಸಂಜೆ 5 ಗಂಟೆಗೆ ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್‌ರವರು ಇಚ್ಲಂಪಾಡಿ ಗ್ರಾಮದ ತೈಪನ ಎಂಬಲ್ಲಿ ಪುತ್ತೂರು ತಾ.ಪಂ.ಮಾಜಿ ಅಧ್ಯಕ್ಷೆ ಕೆ.ಟಿ.ವಲ್ಸಮ್ಮ ಅವರ ಜಮೀನಿನಲ್ಲಿ ಚರ್ಚ್‌ಗೆ ದಾನವಾಗಿ ಅವರ ಕುಟುಂಬದವರು ನಿರ್ಮಾಣ ಮಾಡಿದ ಸೈಂಟ್ ಜಾರ್ಜ್‌ರ ಶಿಲುಬೆ ಗೋಪುರದ ಪವಿತ್ರೀಕರಣ ವಿಧಿ ವಿಧಾನ ನೆರವೇರಿಸಿದರು. ಬಳಿಕ ಇಚ್ಲಂಪಾಡಿಯಲ್ಲಿ ಚರ್ಚ್‌ನ ಮುಂಭಾಗ ಹೊಸದಾಗಿ ನಿರ್ಮಾಣಗೊಂಡ ಪ್ರವೇಶದ್ವಾರದ ಉದ್ಘಾಟನೆ ನಡೆಯಿತು. ನಂತರ ಧ್ವಜಸ್ತಂಭದ ಪವಿತ್ರೀಕರಣ ನೆರವೇರಿಸಿ ಧ್ವಜಾರೋಹಣ ಮಾಡಲಾಯಿತು. ಆ ಬಳಿಕ ಚರ್ಚ್ ಸಂಧ್ಯಾ ಪ್ರಾರ್ಥನೆ, ಗತಿಸಿದ ಪೂರ್ವಜರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಲಾಯಿತು. ಸ್ಥಳೀಯ ವಿವಿಧ ಚರ್ಚ್‌ಗಳ ಧರ್ಮಗುರುಗಳು, ಚರ್ಚ್‌ನ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಚರ್ಚ್‌ನ ಧರ್ಮಗುರು ಫಾ. ಮೆಲ್ವಿನ್ ಮ್ಯಾಥ್ಯೂ ಒಐಸಿ ಸ್ವಾಗತಿಸಿದರು.
ಇಂದು ವಿವಿಧ ಕಾರ್ಯಕ್ರಮ:
ಜ.೨೨ರಂದು ಬೆಳಿಗ್ಗೆ ೮.೩೦ಕ್ಕೆ ಅತೀವಂದನೀಯ ಬಸೇಲಿಯೋಸ್ ಕ್ಲೀಮೀಸ್ ಕಾಥೋಲಿಕೋಸ್ ರವರ ನೇತೃತ್ವದಲ್ಲಿ ಚರ್ಚ್‌ನಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿದೆ. ದಿವ್ಯಬಲಿ ಪೂಜೆ, ಅಗಲಿದ ಬಿಷಪ್ ಮೊರೋನ್ ಮಾರ್ ಸಿರಿಲ್ ಬಸೇಲಿಯೋಸ್ ಕಾಥೊಲಿಕೋಸ್ ಹಾಗೂ ಪುತ್ತೂರು ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ| ಗೀವರ್ಗೀಸ್ ಮಾರ್ ದಿವನ್ನಾಸಿಯೋಸ್ ರವರ ಆತ್ಮಕ್ಕೆ ಶಾಂತಿಕೋರಿ ಪ್ರಾರ್ಥನೆ ನಡೆಯಲಿದೆ. ತದನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ‘ಕಾರುಣ್ಯ ನಿಧಿ’ಎಂಬ ಚಾರಿಟಿ ಫಂಡ್‌ನ ಉದ್ಘಾಟನೆ ನಡೆಯಲಿದೆ.