ಅಮ್ಮುಂಜದಲ್ಲಿ ರಸ್ತೆಗೆ ಹಾಕಿದ ಬೇಲಿ ತೆರವುಗೊಳಿಸಲು ಆಗ್ರಹ
ಪ್ರಭಾವಿಗಳಿಗೊಂದು ಕಾನೂನು, ಬಡವರಿಗೊಂದು ಕಾನೂನು ಇದೆಯೇ?
ಮುಂಡೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ
ಪುತ್ತೂರು: ಅಮ್ಮುಂಜ ಸಮೀಪದ ಕೋಡಿಜಾಲ್ ರಸ್ತೆಯನ್ನು ಮುಳಿಯ ಸಂಸ್ಥೆಯವರು ಬೇಲಿ ಹಾಕಿ ಅತಿಕ್ರಮಣ ಮಾಡಿದ್ದು ಇದು ಗ್ರಾ.ಪಂ.ಗೂ ಗೊತ್ತಿದೆ. ತಹಶೀಲ್ದಾರ್ ಗಮನಕ್ಕೂ ತರಲಾಗಿದೆ. ಆದರೂ ಬೇಲಿ ತೆರವು ಮಾಡುವ ಕಾರ್ಯ ಇನ್ನೂ ಆಗಿಲ್ಲ, ತೆರವು ಮಾಡದೇ ಇರಲು ಏನು ಕಾರಣ ಎಂದು ಮುಂಡೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯ ಬಾಬು ಕಲ್ಲಗುಡ್ಡೆ ಆಕ್ರೊಶ ವ್ಯಕ್ತಪಡಿಸಿದರು. ಸಭೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಸದಸ್ಯ ಕಮಲೇಶ್ ಅವರು ಮುಳಿಯ ಸಂಸ್ಥೆಯವರು ಪ್ರಭಾವಿಗಳು ಎನ್ನುವ ಕಾರಣಕ್ಕೆ ಕ್ರಮ ಜರುಗಿಸಲು ಆಗುತ್ತಿಲ್ಲವೇ? ಅಥವಾ ಇನ್ಯಾವುದೋ ಕಾರಣ ಇದೆಯೇ ಎಂದು ಪ್ರಶ್ನೆ ಮಾಡಿದರು. ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಾದ ಸಂಸ್ಥೆಯವರೇ ಈ ರೀತಿ ಮಾಡಿದರೆ ಇದಕ್ಕೇನು ಅರ್ಥ ಎಂದು ಅವರು ಕೇಳಿದರು.
ಬಾಬು ಕಲ್ಲಗುಡ್ಡೆ ಮಾತನಾಡಿ ಅಲ್ಲಿ ಬಡವರು ರಸ್ತೆ ಅತಿಕ್ರಮಣ ಮಾಡಿದ್ದರೆ ಪರಿಸ್ಥಿತಿ ಯಾವ ರೀತಿ ಇರುತ್ತಿತ್ತು ಎಂದು ಯೋಚಿಸಿ ನೋಡಿ. ಅಧಿಕಾರಿಗಳು, ಪೊಲೀಸರು ಎಲ್ಲರೂ ಬಂದು ಯಾವಾಗಲೋ ಅತಿಕ್ರಮಣ ಮಾಡಿದ್ದನ್ನು ತೆರವುಗೊಳಿಸುತ್ತಿದ್ದರು. ಆದರೆ ಪ್ರಭಾವಿಗಳಿಗೊಂದು ಕಾನೂನು, ಬಡವರಿಗೊಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದ ಬಾಬು ಕಲ್ಲಗುಡ್ಡೆಯವರು ನ್ಯಾಯ ಎಲ್ಲರಿಗೂ ಒಂದೇ ರೀತಿ ಇರಬೇಕು ಎಂದು ಹೇಳಿದರು.
ಸದಸ್ಯ ಕರುಣಾಕರ ಗೌಡ ಎಲಿಯ ಮಾತನಾಡಿ ಅತಿಕ್ರಮಣ ಮಾಡಿದವರು ಎಷ್ಟು ದೊಡ್ಡವರಾದರೂ ನಮಗೇನು? ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಎಂದು ಹೇಳಿದರು. ಅನೇಕ ಸದಸ್ಯರು ಧ್ವನಿಗೂಡಿಸಿದರು. ಮುಂದಕ್ಕೂ ಇದೇ ರೀತಿಯ ತಾರತಮ್ಯ ಧೋರಣೆ ಮುಂದುವರಿದಲ್ಲಿ ಹೋರಾಟದ ಹಾದಿ ಹಿಡಿಯಬೇಕಾದೀತು ಎಂದು ಕೆಲ ಸದಸ್ಯರು ಎಚ್ಚರಿಕೆ ನೀಡಿದರು.
ಪಿಡಿಓ ಗೀತಾ ಬಿ.ಎಸ್ ಉತ್ತರಿಸಿ ಈಗಾಗಲೇ ಸಂಬಂಧಪಟ್ಟವರಿಗೆ ವಿಚಾರ ತಿಳಿಸಿದ್ದು ಅವರು ನಮ್ಮ ಸ್ವಂತ ಜಾಗ ಎನ್ನುತ್ತಿದ್ದಾರೆ. ಜಾಗದ ಅಳತೆ ಮಾಡಲು ಕೊಟ್ಟಿದ್ದೇವೆ. ಕಾನೂನು ಪ್ರಕಾರ ಏನು ಆಗಬೇಕೋ ಅದೇ ರೀತಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಹೇಳಿದರು.
ಸ್ಮಶಾನ ವ್ಯವಸ್ಥೆ ಕಾರ್ಯರೂಪಕ್ಕೆ ತರಲು ಆಗ್ರಹ:
ಮುಂಡೂರಿನಲ್ಲಿ ಸ್ಮಶಾನ ವ್ಯವಸ್ಥೆ ಆಗಿದ್ದರೂ ಅದನ್ನು ಯಾಕೆ ಇನ್ನೂ ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯ ಬಾಲಕೃಷ್ಣ ಪೂಜಾರಿ ಕುರೆಮಜಲು ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯರಾದ ಬಾಬು ಕಲ್ಲಗುಡ್ಡೆ ಮತ್ತು ಕಮಲೇಶ್ ಧ್ವನಿಗೂಡಿಸಿದರು.
ಶೀಘ್ರದಲ್ಲೇ ಸ್ಮಶಾನ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಲು ಗ್ರಾ.ಪಂ ಮುತುವರ್ಜಿ ವಹಿಸಬೇಕು ಎಂದು ಬಾಲಕೃಷ್ಣ ಪೂಜಾರಿ ಹೇಳಿದರು.
ಬ್ಯಾನರ್ ಅಳವಡಿಕೆಗೆ ಅನುಮತಿ ಕಡ್ಡಾಯ:
ಗ್ರಾ.ಪಂ ವ್ಯಾಪ್ತಿಯಲ್ಲಿ ಅಳವಡಿಸುವ ಬ್ಯಾನರ್, ಬಂಟಿಂಗ್ಸ್ಗಳಿಗೆ ಗ್ರಾ.ಪಂನಿಂದ ಅನುಮತಿ ಪಡೆಯುತ್ತಿದ್ದಾರಾ ಎಂದು ಕಮಲೇಶ್ ಕೇಳಿದರು. ನಂತರ ಬ್ಯಾನರ್ ವಿಚಾರದಲ್ಲಿ ಸಾಧಕ ಬಾಧಕಗಳ ಬಗ್ಗೆ ಸುಮಾರು ಹೊತ್ತು ಚರ್ಚೆ ಮುಂದುವರಿಯಿತು. ಪಿಡಿಓ ಗೀತಾ ಬಿ.ಎಸ್ ಮಾತನಾಡಿ ಮುಂದಕ್ಕೆ ಗ್ರಾ.ಪಂ ವ್ಯಾಪ್ತಿಯಲ್ಲಿ ಹಾಕುವ ಯಾವುದೇ ಬ್ಯಾನರ್ಗಳಿಗೆ ಗ್ರಾ.ಪಂ ಅನುಮತಿ ಕಡ್ಡಾಯವಾಗಿರುತ್ತದೆ. ಅನುಮತಿ ಇಲ್ಲದ ಮತ್ತು ಅವಧಿ ಮೀರಿದ ಬ್ಯಾನರ್ಗಳನ್ನು ನಾವೇ ತೆರವು ಮಾಡುತ್ತೇವೆ ಎಂದು ಹೇಳಿದರು.
ರಸ್ತೆಗೆ ಆಡು ಬಿಡುವವರಿಗೆ ಎಚ್ಚರಿಕೆ ನೀಡಿ:
ಸದಸ್ಯ ಉಮೇಶ್ ಗೌಡ ಅಂಬಟ ಮಾತನಾಡಿ ಮುಂಡೂರು ಪೇಟೆಗೆ ಆಡುಗಳನ್ನು ಬಿಡುತ್ತಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಇತ್ತೀಚೆಗೆ ಅದರಿಂದಾಗಿಯೇ ಅನೇಕ ಅಪಘಾತಗಳೂ ಸಂಭವಿಸಿದೆ. ಆಡುಗಳನ್ನು ರಸ್ತೆಗೆ, ಪೇಟೆಗೆ ಬಿಡದಂತೆ ಸಾಕುವವರಿಗೆ ಖಡಕ್ ಸೂಚನೆ ನೀಡಬೇಕೆಂದು ಹೇಳಿದರು.
ಚರ್ಮಗಂಟು ರೋಗದಿಂದ ಹೈನುಗಾರಿಕೆ ಬಿಡುವ ಪರಿಸ್ಥಿತಿ:
ಚರ್ಮಗಂಟು ರೋಗದಿಂದ ಜಾನುವಾರುಗಳು ಸಾಯುತ್ತಿದೆ. ಪಶು ವೈದ್ಯಾಧಿಕಾರಿ ಹಲವು ಕಾರ್ಯ ಒತ್ತಡಗಳಲ್ಲಿ ಬ್ಯುಸಿ ಇರುತ್ತಾರೆ. ಸಕಾಲದಲ್ಲಿ ಸೂಕ್ತ ಚಿಕಿತ್ಸಾ ವ್ಯವಸ್ಥೆಯೂ ಸಿಗುತ್ತಿಲ್ಲ ಎಂದು ಕಮಲೇಶ್ ಎಸ್.ವಿ ಹೇಳಿದರು. ಜಾನುವಾರು ಕಳೆದುಕೊಂಡವರಿಗೆ ಪರಿಹಾರ ನೀಡುವ ವ್ಯವಸ್ಥೆಯೂ ಆಗಬೇಕು. ಈ ಬಗ್ಗೆ ಶಾಸಕರಿಗೆ ಬರೆಯಬೇಕು ಎಂದು ಅವರು ಹೇಳಿದರು.
ಕರುಣಾಕರ ಗೌಡ ಎಲಿಯ ಮಾತನಾಡಿ ಚರ್ಮಗಂಟು ರೋಗದಿಂದ ಜನರು ಹೈನುಗಾರಿಕೆ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾನುವಾರುಗಳನ್ನು ಕಳೆದುಕೊಂಡ ಮನೆಯವರು ಅಳುತ್ತಿದ್ದಾರೆ. ಅದಕ್ಕೆಲ್ಲಾ ಸೂಕ್ತ ವ್ಯವಸ್ಥೆ ಆಗಬೇಕಾಗಿದೆ ಎಂದು ಹೇಳಿದರು. ಸದಸ್ಯೆ ಯಶೊಧ ಅಜಲಾಡಿ ಧ್ವನಿಗೂಡಿಸಿದರು.
ವೇದಿಕೆಯಲ್ಲಿ ಗಾ.ಪಂ ಅಧ್ಯಕ್ಷೆ ಪುಷ್ಪಾ ಎನ್, ಉಪಾಧ್ಯಕ್ಷೆ ಪ್ರೇಮಾ ಎಸ್, ಪಿಡಿಓ ಗೀತಾ ಬಿ.ಎಸ್, ಕಾರ್ಯದರ್ಶಿ ಸೂರಪ್ಪ ಉಪಸ್ಥಿತರಿದ್ದರು.
ಸಭೆಯಲ್ಲಿ ಸದಸ್ಯರಾದ ದುಗ್ಗಪ್ಪ ಕಡ್ಯ, ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ, ಚಂದ್ರಶೇಖರ್ ಎನ್ಎಸ್ಡಿ, ಕಾವ್ಯ ತೌಡಿಂಜ, ಅರುಣಾ ಎ.ಕೆ, ರಸಿಕಾ ರೈ ಮೇಗಿನಗುತ್ತು, ವಿಜಯ ಕರ್ಮಿನಡ್ಕ, ಸುನಂದ ಬೊಳ್ಳಗುಡ್ಡೆ ಉಪಸ್ಥಿತರಿದ್ದರು.