ಉಪ್ಪಿನಂಗಡಿ: ಕಳೆದ 18 ವರ್ಷಗಳಿಂದ ಉಪ್ಪಿನಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಅರಫಾ ವಿದ್ಯಾ ಕೇಂದ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅರಫಾ ವಿದ್ಯಾ ಸಂಸ್ಥೆಯನ್ನು ಮಾರಾಟ ಮಾಡುತ್ತಿದ್ದಾರೆ ಎಂಬಂತೆ ಕೆಲವರು ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದು, ನಾವು ಯಾವತ್ತೂ ನಮ್ಮ ಸಂಸ್ಥೆಯನ್ನು ಮಾರಾಟ ಮಾಡುವ ಬಗ್ಗೆ ಚಿಂತಿಸಿಲ್ಲ ಮತ್ತು ಮಾರಾಟ ಮಾಡುವುದೂ ಇಲ್ಲ ಎಂದು ವಿದ್ಯಾ ಕೇಂದ್ರದ ಅಧ್ಯಕ್ಷ ಕೆ.ಪಿ. ಸಿದ್ದಿಕ್ ಹಾಜಿ ತಿಳಿಸಿದರು.
ಅವರು ಸಂಸ್ಥೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸೇವಾ ರೂಪದಲ್ಲಿ ಮುನ್ನಡೆಯುತ್ತಿರುವ ವಿದ್ಯಾ ಸಂಸ್ಥೆಯ ಬಗ್ಗೆ ಈ ರೀತಿಯ ಅಪಪ್ರಚಾರ ಸಲ್ಲದು ಎಂದರು. ನಮ್ಮ ವಿದ್ಯಾ ಸಂಸ್ಥೆಗೆ ಕರ್ನಾಟಕ ಸರ್ಕಾರದ ಆದೇಶದಂತೆ ಕಟ್ಟಡ ಶಿಫಾರಸು ಪ್ರಮಾಣ ಪತ್ರ ಹಾಗೂ ಅಗ್ನಿ ಸುರಕ್ಷತಾ ಶಿಫಾರಸು ಪತ್ರವೂ ದೊರೆದಿರುವುದಾಗಿ ತಿಳಿಸಿದರು. ಈ ಎಲ್ಲಾ ವ್ಯವಸ್ಥೆಯನ್ನು ಹೊಂದಿಕೊಂಡು ಸಂಸ್ಥೆ ಮುನ್ನಡೆಯುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವಿಶೇಷ ರಿಯಾಯಿತಿ ಸೌಲಭ್ಯದೊಂದಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯದ ಹಿಜಾಬ್ ತೀರ್ಪಿನ ಬಗ್ಗೆ ಮುಸ್ಲಿಂ ಹೆಣ್ಣು ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದ್ದು, ಇದರಿಂದಾಗಿ ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಣವನ್ನು ಮೊಟಕುಗೊಳಿಸುವ ತೀರ್ಮಾಣಕ್ಕೆ ಬಂದಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಈ ನಿಟ್ಟಿನಲ್ಲಿ ಅರಫಾ ವಿದ್ಯಾ ಸಂಸ್ಥೆ ಯಾವುದೇ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ದೃಷ್ಠಿಯಲ್ಲಿ ನಮ್ಮ ವಿದ್ಯಾ ಸಂಸ್ಥೆಯಲ್ಲಿ ಸೇರಲು ಇಚ್ಛಿಸುವ ಮಕ್ಕಳಿಗೆ ಆರ್ಥಿಕ ಸಹಕಾರದೊಂದಿಗೆ ಮೌಲ್ಯಯುಕ್ತ ಶಿಕ್ಷಣವನ್ನು ಕೊಡಲು ತೀರ್ಮಾನಿಸಿರುತ್ತೇವೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಹಬೀಬ್ ಅಗ್ನಾಡಿ, ನಿರ್ದೇಶಕರಾದ ನಝೀರ್ ಮಠ, ಶರೀಫ್ ಅರಫ ಉಪಸ್ಥಿತರಿದ್ದರು.