- ಕಬಕ ಗ್ರಾ.ಪಂ ಸಾಮಾನ್ಯ ಸಭೆ
ಪುತ್ತೂರು: ಸ್ಥಳೀಯಾ ಯೋಜನಾ ಪ್ರದೇಶದ ಹೊರಭಾಗದಲ್ಲಿನ ಒಂದು ಎಕರೆಗಿಂತ ಕಡಿಮೆ ಇರುವ ಪ್ರದೇಶ ಮತ್ತು ಏಕನಿವೇಶನ ವಸತಿ/ವಸತಿಯೇತರರಿಗಾಗಿ ಭೂ ಪರಿವರ್ತಿತ ಜಮೀನುಗಳಲ್ಲಿನ ಏಕ ವಿನ್ಯಾಸ ಅನುಮೋದನೆಗಾಗಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಅನುಮೋದನೆ ಪಡೆಯುವ ಆದೇಶವನ್ನು ಸರಕಾರ ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಕಬಕ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಕೈಗೊಳ್ಳಲಾಗಿದೆ.
ಸಭೆಯು ಮಾ.24ರಂದು ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪಿಡಿಓ ಆಶಾ ಇವರು ಇಲಾಖೆಯ ಸುತ್ತೋಲೆಯನ್ನು ಸಭೆಯು ಮುಂದಿಟ್ಟು, ಅದಕ್ಕೆ ಬೇಕಾದ ದಾಖಲೆಗಳು ಹಾಗೂ ನಿಯಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಶಾಬಾರವರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಅನುದಮೋದನೆಗಾಗಿ ಮಂಗಳೂರಿಗೆ ತೆರಳಬೇಕಾಗುತ್ತದೆ. ಇದರಿಂದ ಬಡವರು ತೀರಾ ತೊಂದರೆ ಎದುರಿಸಲಿದ್ದು ಅವರು ಮನೆ ಕಟ್ಟುವುದೇ ಸಾಧ್ಯವಿಲ್ಲ. ಹೀಗಾಗಿ ಈ ಕಾನೂನುನನ್ನು ಸರಕಾರ ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಅವರು ಹೇಳಿದರು. ಇದಕ್ಕೆ ಇತರ ಸದಸ್ಯರು ಧ್ವನಿ ಗೂಡಿಸಿದರು. ಈ ಕುರಿತು ಸಭೆಯಲ್ಲಿ ಚರ್ಚಿಸಿ ಹೊಸ ನಿಯಮವನ್ನು ಹಿಂಪಡೆಯುವಂತೆ ಸರಕಾರಕ್ಕೆ ಮನವಿ ಮಾಡುವುದಾಗಿ ನಿರ್ಣಯ ಕೈಗೊಳ್ಳಲಾಗಿದೆ.
60.86 ಲಕ್ಷ ವಿದ್ಯುತ್ ಬಿಲ್ ಬಾಕಿ:
ಪಂಚಾಯತ್‌ನ ಕುಡಿಯುವ ನೀರಿನ ಘಟಕಗಳು ಹಾಗೂ ಬೀದಿ ದೀಪಗಳು ಬಿಲ್‌ಗಳು ಸೇರಿ ಒಟ್ಟು 60,86,000 ವಿದ್ಯುತ್ ಬಿಲ್ ಮೆಸ್ಕಾಂಗೆ ಪಾವತಿಸಲು ಬಾಕಿಯಿದೆ. ಅಲ್ಲದೆ ಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತ ಉರಿಯುತ್ತಿರುವ ಬೀದಿ ದೀಪಗಳಿಗೆ ರೂ.1,81,000 ಶುಲ್ಕ ವಿಧಿಸಿರುವುದಾಗಿ ಪಿಡಿಓ ಆಶಾ ಸಭೆಯಲ್ಲಿ ಮಾಹಿತಿ ನೀಡಿದರು.
ವಿದ್ಯಾಪುರದಲ್ಲಿ 94ಸಿ ಯೋಜನೆಯಲ್ಲಿ ಹಕ್ಕುಪತ್ರ ಪಡೆದುಕೊಂಡಿರುವ ಬಡ ಕುಟುಂಬದ ಮನೆ ನಿರ್ಮಾಣಕ್ಕೆ ರಸ್ತೆ ಮಾರ್ಜಿನ್ ಉಂಟಾಗುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಆ ಕುಟುಂಬ ತೀರಾ ಬಡತನದ ಕುಟುಂಬವಾಗಿದೆ. ಅವರಿಗೆ ಮನೆ ಕಟ್ಟಲು ಆ ಜಾಗವಲ್ಲದೆ ಬೇರೆ ಜಾಗವಿಲ್ಲ. ಮಾನವೀಯ ನೆಲೆಯಲ್ಲಿ ಅವಕಾಶ ಕೊಡುವಂತೆ ಸದಸ್ಯ ಉಮ್ಮರ್ ಫಾರೂಕ್ ತಿಳಿಸಿದೆ. ಈ ಕುರಿತು ಪರಿಶೀಲನೆ ನಡೆಸಲು ತೀರ್ಮಾನಿಸಲಾಯಿತು. ವಿದ್ಯಾಪುರ 4ನೇ ಅಡ್ಡ ರಸ್ತೆಯ ಇಕ್ಕೆಲಗಳಲ್ಲಿ ಬೇಲಿ ಹಾಕಿ ರಸ್ತೆಯನ್ನು ಕಿರಿದುಗೊಳಿಸಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿರುವುದಲ್ಲದೆ ರಸ್ತೆ ಕಾಂಕ್ರಿಟೀಕರಣಕ್ಕು ಅಡ್ಡಿಯುಂಟಾಗುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ನೀರು ನಿರ್ವಾಹಕರ ವೇತನ ಪರಿಷ್ಕರಣೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ವಿದ್ಯಾಪುರದಲ್ಲಿ ನೀರಿನ ಟ್ಯಾಂಕ್ ತುಂಬಾ ಹಳೆಯದಾಗಿದ್ದು ಅಲ್ಲಿ ಹೊಸ ಟ್ಯಾಂಕ್ ನಿರ್ಮಿಸಬೇಕು. ಇದಕ್ಕಾಗಿ ಸ್ಥಳಾವಕಾಶ ನೀಡುವಂತೆ ಅರಣ್ಯ ಇಲಾಖೆಗೆ ಮನವಿ ಮಾಡುವಂತೆ ಸದಸ್ಯ ಶಾಬಾ ತಿಳಿಸಿದರು.
ನೀರು ನಿರ್ವಾಹಕರಿಗೆ ಸನ್ಮಾನ:
ಪಂಚಾಯತ್‌ನಲ್ಲಿ ಕಳೆದ 18 ವರ್ಷಗಳಿಂದ ನೀರು ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾದ ನೀಲಪ್ಪ ಗೌಡರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ಉಪಾಧ್ಯಕ್ಷ ರುಕ್ಮಯ್ಯ ಗೌಡ ಪೋಳ್ಯ, ಸದಸ್ಯರಾದ ರಾಜೇಶ್, ಪ್ರೀತಾ, ಗೀತಾ, ಸುಶೀಲ, ವಾರಿಜ, ಶಂಕರಿ ಜಿ.ಭಟ್, ಪುಷ್ಪಾ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ಆಶಾ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ್ ವಂದಿಸಿದರು. ಸಿಬಂದಿಗಳು ಸಹಕರಿಸಿದರು.