ಪ್ರತಿಯೊಬ್ಬರ ಸುಖ, ದುಃಖ ಅರಿತವರು ಗೋಪಾಲಕೃಷ್ಣ ಭಟ್- ಈಶ್ವರ ಭಟ್ ಪಂಜಿಗುಡ್ಡೆ
ಪುತ್ತೂರು: ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಗೋಪಾಲಕೃಷ್ಣ ಭಟ್‌ರವರು ಸೇವಾ ನಿವೃತ್ತಿಗೊಂಡಿದ್ದು ಇವರಿಗೆ ಬೀಳ್ಕೊಡುಗೆ ಸಮಾರಂಭ ಸಂಘದ ಕಛೇರಿಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಕಳೆದ 40 ವರ್ಷಗಳಿಂದ ಸುದೀರ್ಘ ಸೇವೆಯ ಮೂಲಕ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಗೋಪಾಲಕೃಷ್ಣ ಭಟ್‌ರವರು ಸಂಘದ ಸದಸ್ಯರೊಂದಿಗೆ ಅನ್ಯೋನ್ಯತೆಯಿಂದ ಇದ್ದರು. ಪ್ರತಿಯೊಬ್ಬರ ಕಷ್ಟ, ಸುಖ ದುಃಖವನ್ನು ಅರಿತವರಾಗಿದ್ದಾರೆ ಎಂದರು. ಅವರು ತಮ್ಮ ಸುದೀರ್ಘ ಸೇವಾ ನಿವೃತ್ತಿಯಲ್ಲಿ ಸಂಘವನ್ನು ಎತ್ತರಕ್ಕೆ ಕೊಂಡೊಯ್ಯಲು ಕಾರಣಕರ್ತರಾಗಿದ್ದಾರೆ. ಅವರ ನಿವೃತ್ತಿ ಜೀವನ ಸುಖಕರವಾಗಲಿ ಎಂದು ಹಾರೈಸಿದರು.
ಯಾವುದೇ ಕಪ್ಪು ಚುಕ್ಕೆ ಇಲ್ಲದ ಉತ್ತಮ ವ್ಯಕ್ತಿ-ರಾಜಶೇಖರ ಜೈನ್:
ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾಜಶೇಖರ ಜೈನ್ ಮಾತನಾಡಿ ನಿವೃತ್ತಿ ಹೊಂದಿದ ಗೋಪಾಲಕೃಷ್ಣ ಭಟ್‌ರವರು 40 ವರ್ಷ ಸುದೀರ್ಘ ಸೇವೆ ನೀಡಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಎಲ್ಲರೊಂದಿಗೆ ಬೆರೆತು ಉತ್ತಮ ಆಡಳಿತ ನೀಡಿದ ಓರ್ವ ಉತ್ತಮ ವ್ಯಕ್ತಿಯಾಗಿದ್ದಾರೆ ಎಂದು ಹೇಳಿ ಶುಭಹಾರೈಸಿದ್ದಾರೆ.
ಸಂಘದ ಸದಸ್ಯರ ನಾಡಿಮಿಡಿತ ಅರಿತವರು-ಮೋಹನ ಪಕ್ಕಳ:
ಸಂಘದ ನಿರ್ದೇಶಕ ಮೋಹನ ಪಕ್ಕಳ ಮಾತನಾಡಿ ಗೋಪಾಲಕೃಷ್ಣ ಭಟ್‌ರವರು ಸಂಘದ ವ್ಯಾಪ್ತಿಯ 9 ಗ್ರಾಮಗಳ ಎಲ್ಲಾ ಸದಸ್ಯರ ನಾಡಿಮಿಡಿತ ಅರಿತವರು. ಇವರು ಉತ್ತಮ ಆಡಳಿತ ನೀಡಿದವರು ಎಂದು ಹೇಳಿ ಶುಭಹಾರೈಸಿದರು.
ನಿವೃತ್ತಿ ಜೀವನ ಯಶಸ್ವಿಯಾಗಲಿ-ವಸಂತ ಎಸ್.:
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪುತ್ತೂರು 2ನೇ ವಲಯದ ಮೇಲ್ವಿಚಾರಕ ವಸಂತ ಎಸ್. ಮಾತನಾಡಿ, ನಿವೃತ್ತಿ ಮತ್ತು ವರ್ಗಾವಣೆ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ವೃತ್ತಿಯಲ್ಲಿ ನಿವೃತ್ತಿ ಸಹಜವಾಗಿದೆ. ಗೋಪಾಲಕೃಷ್ಣ ಭಟ್‌ರವರು ಸೇವೆಯಲ್ಲಿ ಎಲ್ಲರ ಮನ ಗೆದ್ದವರಾಗಿದ್ದಾರೆ ಎಂದು ಹೇಳಿ ಶುಭಹಾರೈಸಿದರು.
ಸನ್ಮಾನ:
ಸಂಘದ ಎಲ್ಲಾ ನಿರ್ದೇಶಕರು ಹಾಗೂ ನೌಕರರ ವೃಂದದಿಂದ ಗೋಪಾಲಕೃಷ್ಣ ಭಟ್‌ರವರಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ನೆನಪಿನ ಕಾಣಿಕೆ ಕೊಟ್ಟು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಸಂಘದ ನಿರ್ದೇಶಕರಾದ ಸುಭಾಷ್ ನಾಯಕ್, ದೇವಾನಂದ ಕೆ., ಜಯಲಕ್ಷ್ಮಿ ಸುರೇಶ್, ಸ್ಮಿತಾ ಜೆ. ಭಂಡಾರಿ, ರಾಜು, ಸುಂದರ ಪೂಜಾರಿ ಬಡಾವು, ಸುಬ್ರಹ್ಮಣ್ಯ ಗೌಡ ಹನಿಯೂರು, ಶ್ರೀನಿವಾಸ ಕೆ., ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು. ಸಂಘದ ಮೇಲ್ವಿಚಾರಕಿ ರಾಧಾ ಬಿ.ರೈ ಸ್ವಾಗತಿಸಿ ಪುರಂದರ ವಂದಿಸಿದರು.
ನನ್ನ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ-ಗೋಪಾಲಕೃಷ್ಣ ಭಟ್
ನಿವೃತ್ತಿಹೊಂದಿದ ಗೋಪಾಲಕೃಷ್ಣ ಭಟ್ ಮಾತನಾಡಿ ನನ್ನ ಸೇವಾವಧಿಯಲ್ಲಿ ಸಹಕರಿಸಿದ ಸಂಘದ ನಿರ್ದೇಶಕರಿಗೆ, ಸಿಬ್ಬಂದಿಗಳಿಗೆ, ಸದಸ್ಯರಿಗೆ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಿಗೆ, ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.