ವರ ನಾಪತ್ತೆ- ಮದುವೆ ರದ್ದು
ವರನ ಮೊದಲ ಪತ್ನಿಯಿಂದ ಬೆಳ್ಳಾರೆ ಠಾಣೆಯಲ್ಲಿ ದೂರು

0

ಪುತ್ತೂರು: ಫೆ.9ರಂದು ಸುಳ್ಯದ ಪುರಭವನದಲ್ಲಿ ನಡೆಯಬೇಕಾಗಿದ್ದ ಮದುವೆಯೊಂದು ವರ ಬಾರದ ಕಾರಣ ರದ್ದುಗೊಂಡ ಘಟನೆ ವರದಿಯಾಗಿದ್ದು, ವರನ ಮೊದಲ ಪತ್ನಿ ಗಂಡನ ಮೇಲೆ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ದೂರು ನೀಡಿರುವಳೆಂದು ತಿಳಿದುಬಂದಿದೆ.

ಸುಳ್ಯ ತಾಲೂಕಿನ ಉಬರಡ್ಕ ಗ್ರಾಮದ ಯುವತಿಗೆ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಗುಮ್ಮಟಗದ್ದೆಯ ಕೃಷ್ಣ ಎಂಬಾತನೊಂದಿಗೆ ಮದುವೆ ನಿಗದಿಯಾಗಿತ್ತು. ಫೆ.9ರಂದು ಕೆ.ವಿ.ಜಿ. ಪುರಭವನದಲ್ಲಿ ಮದುವೆ ನಡೆಯಬೇಕಾಗಿತ್ತು. ಮದುಮಗನ ಕಡೆಯ ಬಂದುಮಿತ್ರರು ಆಗಮಿಸಿದ್ದು ಟೌನ್‌ಹಾಲ್ ಅಲಂಕಾರವೂ ನಡೆದಿತ್ತು. ಫೆ.8ರಂದು ವಧುವಿನ ಮನೆಯಲ್ಲಿ ಡಿ.ಜೆ. ಅಳವಡಿಸಿ ಮದುವೆ ಸಂಭ್ರಮ ಕಳೆಗಟ್ಟಿತ್ತು. ವಧುವಿನ ಕಡೆಯವರು ಮದುವೆಗಾಗಿ ಕೆ.ವಿ.ಜಿ. ಟೌನ್‌ಹಾಲ್‌ಗೆ ಆಗಮಿಸಿ ಮದುವೆ ಸಿದ್ಧತೆ ನಡೆಸುತ್ತಿದ್ದರು. 500 ಮಂದಿಗೆ ಭೋಜನದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಇದ್ದಕ್ಕಿದ್ದಂತೆ ವರ ಕಾಣುತ್ತಿಲ್ಲ ಎಂದು ಮಾಹಿತಿ ಬಂತು. ಮದುಮಗನ ಫೋನ್ ನಂಬರಿಗೆ ಕರೆ ಮಾಡುವಾಗ ಸ್ವಿಚ್‌ಆಫ್ ಆಗಿತ್ತು. ವಧುವಿನ ಕಡೆಯವರು ಕಂಗಾಲು. ಬಳಿಕ ವಿಷಯ ತಿಳಿದು ಆಗಮಿಸಿದ ದಲಿತ ಮುಖಂಡೆ ಸರಸ್ವತಿಯವರ ನೇತೃತ್ವದಲ್ಲಿ ಸುಳ್ಯ ಪೋಲೀಸ್ ಠಾಣೆಗೆ ವಿಷಯ ತಿಳಿಸಲಾಯಿತು.

ಇಷ್ಟೊತ್ತಿಗೆ ತಿಳಿದು ಬಂದ ಮತ್ತೊಂದು ವಿಷಯವೆಂದರೆ, ಆ ವರನಿಗೆ ಈ ಹಿಂದೆ ಒಂದು ಮದುವೆಯಾಗಿದ್ದು, ಅವನ ಹೆಂಡತಿ ಗಂಡನ ವಿರುದ್ಧ ಬೆಳ್ಳಾರೆ ಪೋಲೀಸ್ ಠಾಣೆಗೆ ದೂರು ಕೊಡಲು ಹೋಗಿದ್ದಾಳೆ ಎಂದು. ಇನ್ನು ಈ ಮದುವೆ ಆಗುವುದಿಲ್ಲವೆಂದು ತಿಳಿದು ವಧುವಿನ ಕಡೆಯವರು ಸಭಾಂಗಣದಿಂದ ತೆರಳಿದ್ದು ಮದುವೆ ರದ್ದುಗೊಂಡಿತ್ತು. ಸಿದ್ಧಗೊಂಡಿದ್ದ ಊಟವನ್ನು ಹಾಸ್ಟೆಲ್‌ಗಳಿಗೆ ಕೊಡುವುದೆಂದು ನಿರ್ಧರಿಸಿದರು.

LEAVE A REPLY

Please enter your comment!
Please enter your name here