ಪುತ್ತೂರಿನಲ್ಲಿ ಕ್ಯಾಂಪ್ಕೋದ 50ನೇ ವರ್ಷದ ಸಮಾರಂಭದಲ್ಲಿ 5ನೇ ವರ್ಷದ ಕೃಷಿ ಯಂತ್ರ ಮೇಳ-ಕನಸಿನ ಮನೆ ಕಾರ್ಯಕ್ರಮ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಭೂತಪೂರ್ವವಾಗಿ ನಡೆಯುತ್ತಿದೆ. ಕೊರೋನಾದ ನಂತರ ನಡೆಯುತ್ತಿರುವ ಈ ಮೇಳ ಕೃಷಿ ಕೆಲಸವನ್ನು ಸುಗಮಗೊಳಿಸಲಿದೆ. ಜನರಲ್ಲಿ ಹೊಸ ಹುರುಪನ್ನು ತುಂಬಲಿದೆ. ಆದಾಯವನ್ನು ತಂದುಕೊಡಲಿದೆ.
ಸುದ್ದಿ ಮಾಹಿತಿ ಟ್ರಸ್ಟ್‌ನ ಅಡಿಯಲ್ಲಿ ಸುದ್ದಿ ಕೃಷಿ ಸೇವಾ ಕೇಂದ್ರ ಕಳೆದ ಒಂದು ವರ್ಷದಿಂದ ಕೃಷಿಕರಿಗಾಗಿ ವಿಶಿಷ್ಠ ಕಾರ್ಯಕ್ರಮ ಹಮ್ಮಿಕೊಂಡಿದೆ. ಕೃಷಿಕರ ಮನೆ ಬಾಗಿಲಿಗೆ ಸೇವೆ, ಮಾಹಿತಿ, ಮಾರಾಟ ಖರೀದಿ ವ್ಯವಸ್ಥೆ, ತೊಂದರೆಗಳಿಂದ ರಕ್ಷಣೆ, ಕೃಷಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ಘೋಷಣೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ನಡೆಯುತ್ತಿರುವ ಕೃಷಿಯಂತ್ರ ಮೇಳದಲ್ಲಿ ಸುದ್ದಿ ಮಾಧ್ಯಮ ಸಹಭಾಗಿತ್ವ ನೀಡಿದೆ. ಸುದ್ದಿ ಮಾಹಿತಿ ಕೇಂದ್ರದ ಮೂಲಕ ಭಾಗವಹಿಸುವ ಎಲ್ಲಾ ಮಳಿಗೆಗಳ ನಡೆಯುವ ಕಾರ್ಯಕ್ರಮಗಳ, ದೊರಕುವ ಸೇವೆಗಳ ಮಾಹಿತಿಯನ್ನು ಉಚಿತವಾಗಿ ನೀಡಲಿದೆ. ಪತ್ರಿಕೆಯಲ್ಲಿ, ಚಾನೆಲ್‌ನಲ್ಲಿ, ವೆಬ್‌ಸೈಟ್‌ನಲ್ಲಿ ಅವರ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಜನರಿಗೆ ನೀಡಲಿದೆ. ಆ ಮೂಲಕ ಮಳಿಗೆಯವರಿಗೆ, ಜನರಿಗೆ, ಕೃಷಿಕರಿಗೆ ಎಲ್ಲರಿಗೂ ಪ್ರಯೋಜನ ದೊರಕಲಿ ಎಂದು ಆಶಿಸುತ್ತೇವೆ.