ಯೋಜನೆಯನ್ನು ನಂಬಿರುವ ಫಲಾನುಭವಿಗಳಿಗೆ ಭಾರೀ ನಿರಾಶೆ-ವ್ಯಾಪಕ ಆಕ್ರೋಶ
ಪುತ್ತೂರು: ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ಮರುಜಾರಿಗೊಳಿಸಲಾಗಿದ್ದ ಯಶಸ್ವಿನಿ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆಯು ಇದೀಗ ಪುತ್ತೂರಿನ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ ಎಂಬಂತಾಗಿದೆ. ಯಶಸ್ವಿನಿ ಯೋಜನೆಯ ಫಲಾನುಭವಿಗಳಿಗೆ ನಗದುರಹಿತ ಚಿಕಿತ್ಸೆ ಪಡೆಯಲು ಬಿಡುಗಡೆಗೊಳಿಸಲಾದ ನೆಟ್‌ವರ್ಕ್ ಆಸ್ಪತ್ರೆಗಳ ಪಟ್ಟಿಯಲ್ಲಿ ಪುತ್ತೂರಿನ ಯಾವುದೇ ಆಸ್ಪತ್ರೆಗೆ ಅವಕಾಶ ನೀಡದೇ ಇರುವುದರಿಂದ ಯೋಜನೆಗೆ ನೋಂದಣಿಯಾದ ಎಲ್ಲಾ ಫಲಾನುಭವಿಗಳಿಗೆ ಈ ಯೋಜನೆ ಊಟಕ್ಕಿಲ್ಲದ ಉಪ್ಪಿನಕಾಯಿ ಎಂಬಂತಾಗಿದೆ.
ಹೌದು…ರಾಜ್ಯ ಸರ್ಕಾರವು 2022-23ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ 67ರಲ್ಲಿ ಮುಖ್ಯಮಂತ್ರಿಯವರು ಯಶಸ್ವಿನಿ ಯೋಜನೆಯನ್ನು ರಾಜ್ಯದಲ್ಲಿ ಮರುಜಾರಿಗೊಳಿಸಲು ಘೋಷಣೆ ಮಾಡಿದ್ದರು. ಅದರನ್ವಯ ಯಶಸ್ವಿನಿ ಯೋಜನೆಯನ್ನು ಪರಿಷ್ಕರಿಸಿ ಮರು ಜಾರಿಗೊಳಿಸಿ ಅನುಷ್ಠಾನಗೊಳಿಸಲು ಸರ್ಕಾರವು ತಾತ್ವಿಕ ಅನುಮೋದನೆ ನೀಡಿ ಆದೇಶಿಸಿತ್ತು. ಈ ಹಿಂದೆ 2003ರಲ್ಲಿ ಸಹಕಾರ ಇಲಾಖೆಯಲ್ಲಿ ಯಶಸ್ವಿನಿ ಯೋಜನೆಯನ್ನು ಪ್ರಾರಂಭಿಸಿ 2017-18ರವರೆಗೆ ಜಾರಿಯಲ್ಲಿತ್ತು. ನಂತರ ಆರೋಗ್ಯ ಕರ್ನಾಟಕ ಯೋಜನೆಗೆ ವಿಲೀನ ಮಾಡಿ ಯಶಸ್ವಿನಿ ಯೋಜನೆಯನ್ನು ಸ್ಥಗಿತ ಮಾಡಲಾಗಿತ್ತು.
2022ರಲ್ಲಿ ಯೋಜನೆ ಮರು ಜಾರಿ:
ರಾಜ್ಯದೆಲ್ಲೆಡೆ ಸಹಕಾರಿಗಳ ಮತ್ತು ರೈತರ ನಿರಂತರ ಬೇಡಿಕೆಯಂತೆ ರಾಜ್ಯ ಸರ್ಕಾರವು 2022-23ನೇ ಸಾಲಿನ ಆಯವ್ಯಯದಲ್ಲಿ ಯಶಸ್ವಿನಿ ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪಿಸಿ ಮರುಜಾರಿಗೊಳಿಸಲು ತೀರ್ಮಾನಿಸಿ ರೂ.300-/ಕೋಟಿ ಆಯವ್ಯಯದ ಅವಕಾಶ ಕಲ್ಪಿಸಿ ಯೋಜನೆ ಮರುಜಾರಿಗೆ ಆದೇಶಿಸಿತ್ತು.
ನ.1ರಂದು ನೋಂದಣಿ ಆರಂಭ:
ರಾಜ್ಯಸರ್ಕಾರದ ಆದೇಶದಂತೆ ಸಹಕಾರ ಇಲಾಖೆಯ ಮೂಲಕ ಹೊಸ ಮಾರ್ಗಸೂಚಿಯೊಂದಿಗೆ 2022ರ ನವೆಂಬರ್ 1ರಿಂದ ದಶಂಬರ್ 31ರವರೆಗೆ ಸಹಕಾರ ಸಂಘಗಳ ಮೂಲಕ ನೋಂದಣಿ ಕಾರ್ಯ ಆರಂಭಗೊಂಡಿತ್ತು.
ವಾರ್ಷಿಕ ರೂ. 5 ಲಕ್ಷದವರೆಗೆ ವೈದ್ಯಕೀಯ ಚಿಕಿತ್ಸಾ ವೆಚ್ಚ:
ಯಶಸ್ವಿನಿ ಯೋಜನೆಯ ಹೊಸ ಮಾರ್ಗಸೂಚಿಯಂತೆ ಫಲಾನುಭವಿ ಕುಟುಂಬಕ್ಕೆ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಠ ಮಿತಿ ರೂ.5.00 ಲಕ್ಷಕ್ಕೆ ನಿಗದಿಪಡಿಸಿ, ರಾಜ್ಯದ ಯಾವುದೇ ನೆಟ್‌ವರ್ಕ್ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.
ನೆಟ್‌ವರ್ಕ್ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ:
ಯೋಜನೆಯ ಫಲಾನುಭವಿಗಳಿಗೆ ನೆಟ್‌ವರ್ಕ್ ಆಸ್ಪತ್ರೆಯಲ್ಲಿ ನಗದುರಹಿತ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಲಾಗಿತ್ತು. ಜತೆಗೆ 2018ರಲ್ಲಿ ಇದ್ದ ಎಲ್ಲಾ ನೆಟ್‌ವರ್ಕ್ ಅಸ್ಪತ್ರೆಗಳನ್ನು ಮುಂದುವರಿಸಲಾಗಿದೆ ಎಂದು ತಿಳಿಸಲಾಗಿತ್ತು.
ಪುತ್ತೂರಿನಲ್ಲಿ ಗುರಿ ಮೀರಿದ ಸಾಧನೆ:
ಯಶಸ್ವಿನಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಹಕಾರ ಇಲಾಖೆಯ ಮೂಲಕ ಪ್ರತೀ ತಾಲೂಕಿಗೂ ನೋಂದಣಿಯ ಗುರಿ ನೀಡಲಾಗಿತ್ತು, ಅದರನ್ವಯ ಪುತ್ತೂರು, ಕಡಬ ತಾಲೂಕಿನ ಎಲ್ಲಾ ಸಹಕಾರ ಸಂಘಗಳಲ್ಲೂ ಗುರಿ ಮೀರಿದ ಸಾಧನೆ ಮಾಡಲಾಗಿತ್ತು, ಸುಮಾರು 50 ಸಾವಿರಕ್ಕೂ ಅಧಿಕ ಸಹಕಾರಿ ಸದಸ್ಯರು ಅಗತ್ಯ ದಾಖಲೆಗಳನ್ನು ನೀಡಿ ಯೋಜನೆಯ ನೋಂದಣಿ ಮಾಡಿದ್ದರು, ಆದರೆ ಇದೀಗ ಪುತ್ತೂರಿನ ಯಾವ ಆಸ್ಪತ್ರೆಗೂ ನೆಟ್‌ವರ್ಕ್ ಆಸ್ಪತ್ರೆಯ ಸೌಲಭ್ಯ ನೀಡದೇ ಇರುವುದರಿಂದ ಪುತ್ತೂರಿನ ಫಲಾನುಭವಿಗಳಿಗೆ ಈ ಯೋಜನೆ ಇದ್ದೂ ಇಲ್ಲದಂತಾಗಿದೆ. 2018ರವರೆಗೆ ಯೋಜನೆ ಜಾರಿಯಲ್ಲಿದ್ದಾಗ ಪುತ್ತೂರಿನ ಆದರ್ಶ, ಮಹಾವೀರ, ಸಿಟಿ, ಚೇತನಾ ಆಸ್ಪತ್ರೆಗಳಲ್ಲಿ ನೆಟ್‌ವರ್ಕ್ ಆಸ್ಪತ್ರೆಯ ಸೌಲಭ್ಯ ನೀಡಲಾಗುತ್ತಿತ್ತು, ಇದರಿಂದಾಗಿ ಆ ಸಮಯದಲ್ಲಿ ಅನೇಕ ಫಲಾನುಭವಿಗಳಿಗೆ ಯೋಜನೆ ಸೌಲಭ್ಯ ದೊರಕಿತ್ತು, ಅದೇ ಭರವಸೆಯನ್ನಿಟ್ಟುಕೊಂಡು ಈ ಬಾರಿಯೂ ಅನೇಕ ಜನ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿದ್ದರು.
ಉಜಿರೆ, ಬಿಸಿರೋಡ್, ಸುಳ್ಯದಲ್ಲಿ ನೆಟ್‌ವರ್ಕ್ ಆಸ್ಪತ್ರೆಗಳಿದ್ದರೂ ಜಿಲ್ಲಾ ಕೇಂದ್ರವಾಗುವ ನಿರೀಕ್ಷೆಯೊಂದಿಗೆ ದಿನೇ ದಿನೇ ಬೆಳವಣಿಗೆ ಹೊಂದುತ್ತಿರುವ ಪುತ್ತೂರು ತಾಲೂಕಿನ ಯಾವುದೇ ಆಸ್ಪತ್ರೆಯನ್ನು ಯಶಸ್ವಿನಿ ಸೌಲಭ್ಯ ದೊರೆಯುವ ನೆಟ್‌ವರ್ಕ್ ಆಸ್ಪತ್ರೆಗಳ ಪಟ್ಟಿಯಲ್ಲಿ ಸೇರಿಸದೇ ಇರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಶಾಸಕರು ಗಮನಹರಿಸುವಂತೆ ಫಲಾನುಭವಿಗಳ ಒತ್ತಾಯ: ಯೋಜನೆಯ ಸೌಲಭ್ಯ ಪಡೆಯಲು ಪುತ್ತೂರಿನ ಆಸ್ಪತ್ರೆಗಳನ್ನು ನೆಟ್‌ವರ್ಕ್ ಆಸ್ಪತ್ರೆ ಲಿಸ್ಟ್‌ಗೆ ಸೇರಿಸುವ ನಿಟ್ಟಿನಲ್ಲಿ ಶಾಸಕ ಸಂಜೀವ ಮಠಂದೂರು ಅವರು ಗಮನಹರಿಸಿ, ಸರಕಾರದ ಮೇಲೆ ಒತ್ತಡ ತರುವ ಮೂಲಕ ಫಲಾನುಭವಿಗಳ ಪರವಾಗಿ ನಿಲ್ಲಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.15