ಅಷ್ಟಮಂಗಲ, ತಂತ್ರಿ, ದೈವಜ್ಞರ ಸೂಚನೆಯಂತೆ ನಾಗನಕಟ್ಟೆ ನಿರ್ಮಾಣವಾಗಬೇಕು: ಅರುಣ್ ಕುಮಾರ್ ಪುತ್ತಿಲ
ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಾಗನಕಟ್ಟೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ಅಷ್ಟಮಂಗಲ ಪ್ರಶ್ನೆ ಚಿಂತನೆ ಮಾಡಲಾಗಿದ್ದು ಅದರ ಪ್ರಕಾರ ನಾಗನಕಟ್ಟೆ ನಿರ್ಮಾಣ ಮಾಡುವುದು ಎಂದು ಭಕ್ತರ ಸಮ್ಮುಖದಲ್ಲಿ ತೀರ್ಮಾನವಾಗಿತ್ತು. ಆದರೆ ಆ ಬಳಿಕ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಇದನ್ನು ಧಿಕ್ಕರಿಸಿ ತನ್ನದೇ ಶೈಲಿಯಲ್ಲಿ ಕಟ್ಟೆ ನಿರ್ಮಾಣ ಮಾಡಿದಾಗ ಭಕ್ತಾದಿಗಳು ವಿರೋಧ ಮಾಡಿದ್ದರು. ಆ ಬಳಿಕ ಕಟ್ಟಿದ ನಾಗನಕಟ್ಟೆಯನ್ನು ತೆರವು ಮಾಡಲಾಗಿತ್ತು. ಆದರೆ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರ ಗಮನಕ್ಕೂ ತಾರದೆ, ಭಕ್ತಾದಿಗಳಿಗೂ ಮಾಹಿತಿ ನೀಡದೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತೆ ತಂತ್ರಿಗಳ ಆದೇಶವನ್ನು ಉಲ್ಲಂಘಿಸಿ ಕಟ್ಟೆ ನಿರ್ಮಾಣ ಮಾಡುತ್ತಿದ್ದು ಇದಕ್ಕೆ ಭಕ್ತರಾದ ನಮ್ಮೆಲ್ಲರ ವಿರೋಧವಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಅರುಣ್‌ಕುಮಾರ್ ಪುತ್ತಿಲ ಹೇಳಿದರು.
ದೇವಳದ ನಾಗನಕಟ್ಟೆ ವಿಚಾರಕ್ಕೆ ಸಂಬಂಧಿಸಿದಂತೆ ದೇವಳದ ಬಳಿ ಭಕ್ತರು ಫೆ. 20 ರಂದು ಸಂಜೆ ಪ್ರತಿಭಟನೆ ನಡೆಸಿ ವ್ಯವಸ್ಥಪನಾ ಸಮಿತಿ ಅಧ್ಯಕ್ಷರ ಧೋರಣೆಯನ್ನು ಖಂಡಿಸಿದರು.
ನಾಗನಕಟ್ಟೆ ನಿರ್ಮಾಣ ಮಾಡುವಾಗ ಅಧ್ಯಕ್ಷರು ಯಾರನ್ನೂ ಪರಿಗಣಿಸಿಲ್ಲ. ತಂತ್ರಿಗಳ, ದೈವಜ್ಞರ ಆದೇಶ ಪಾಲನೆ ಮಾಡಿಲ್ಲ ಇದು ಗ್ರಾಮಸ್ಥರಿಗೆ ಹಾಗೂ ದೇವರಿಗೆ ಮಾಡಿದ ಅಪಮಾನವಾಗಿದೆ ಎಂದು ಹೇಳಿದ ಪುತ್ತಿಲರು, ನಾಗನಕಟ್ಟೆ ನಿರ್ಮಾಣದಲ್ಲಿ ಲೋಪವಾದರೆ ಸೀಮೆಗೊಳಪಡುವ ಎಂಟು ಗ್ರಾಮಗಳ ಗ್ರಾಮಸ್ಥರಿಗೆ ತೊಂದರೆ ಉಂಟಾಗಲಿದೆ. ಅವೈಜ್ಞಾನಿಕವಾಗಿ ನಾಗನಕಟ್ಟೆಯನ್ನು ಮತ್ತೆ ನಿರ್ಮಿಸಲು ಮುಂದಾದ ಅಧ್ಯಕ್ಷರ ಜಿಹಾದಿ ಧೋರಣೆಯನ್ನು ನಾವು ಸಹಿಸುವುದಿಲ್ಲ ಎಂದು ಪುತ್ತಿಲ ಹೇಳಿದರು. ತಂತ್ರಿಗಳು ಹೇಳಿದ ಪ್ರಕಾರ ನಾಗನಕಟ್ಟೆ ನಿರ್ಮಾಣ ಮಾಡುತ್ತಿದ್ದೇನೆ ಎಂದು ಅಧ್ಯಕ್ಷರು ಸುಳ್ಳು ಹೇಳುತ್ತಿದ್ದಾರೆ. ವಿಚಾರವನ್ನು ವಿಷಯಾಂತರ ಮಾಲು ಕಟ್ಟೆ ಕಟ್ಟುವ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ಹೇಳುತ್ತಿದ್ದಾರೆ. ಖಾಸಗಿ ವ್ಯಕ್ತಿಗೆ ಸೇರಿದ ಜಾಗದಲ್ಲಿ ದೇವಳದ ಅಧ್ಯಕ್ಷರು ಕಟ್ಟೆ ನಿರ್ಮಾಣ ಮಾಡುವುದು ಯಾಕೆ ಎಂದು ಪ್ರಶ್ನಿಸಿದರು. ಇಲ್ಲಿನ ವಿಚಾರವನ್ನು ನಾವು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಆದರೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ದೇವಸ್ಥಾನದಲ್ಲಿ ಹಗರಣಗಳು ನಡೆದಿದೆ, ಹಣಕಾಸಿನ ವಿಚಾರದಲ್ಲಿ ಗೋಲ್ಮಾಲ್‌ಗಳು ನಡೆದಿದೆ ಎಂದು ಆರೋಪಿಸಿದ ಅವರು, ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಬೇಕು. ದೇವಳದ ದುಡ್ಡು ಭಕ್ತಾದಿಗಳ ದುಡ್ಡು ಅದನ್ನು ವ್ಯರ್ಥವಾಗಿ ಖರ್ಚು ಮಾಡುತ್ತಿದ್ದಾರೆ. ನಿರ್ಣಯ ಪುಸ್ತಕ ಅಧ್ಯಕ್ಷರ ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಇವರು ಮಾಡಿದ ಎಲ್ಲಾ ಕೃತ್ಯಗಳಿಗೂ ನಮ್ಮಲ್ಲಿ ದಾಖಲೆ ಇದೆ ಎಂದರಲ್ಲದೆ ಇಲಾಖೆಯು ಅಧ್ಯಕ್ಷರನ್ನು ಅಮಾನತು ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಬೇಕು. ಈಗಿರುವ ನಾಗನಕಟ್ಟೆಯಲ್ಲಿ ನಡೆಯುವ ಕಾಮಗಾರಿ ಅಷ್ಟಮಂಗಳದಲ್ಲಿ ಕಂಡು ಬಂದ ಸೂಚನೆಯಂತೆ ನಡೆಯುತ್ತಿದೆ ಎಂದು ತಂತ್ರಿಗಳು, ಅಧಿಕಾರಿಗಳು ಲಿಖಿತವಾಗಿ ನೀಡಿದಲ್ಲಿ ಕಟ್ಟೆ ನಿರ್ಮಾಣಕ್ಕೆ ಅವಕಾಶ ನೀಡುತ್ತೇವೆ ಇಲ್ಲವಾದರೆ ಇದಕ್ಕಾಗಿ ನಾವು ಹೋರಾಟವನ್ನು ಮಾಡುತ್ತೇವೆ ಎಂದು ಹೇಳಿದರು. ಈಗಿರುವ ಕಟ್ಟೆಯ ಒಳಗಡೆ ಮರದ ಕುತ್ತಿಯನ್ನು ಹಾಗೆಯೇ ಬಿಟ್ಟಿದ್ದಾರೆ. ಸ್ಥಳವನ್ನು ಶುದ್ದ ಮಾಡಿಲ್ಲ ಎಂದು ಪುತ್ತಿಲ ಆರೋಪಿಸಿದರು.
800 ವರ್ಷಗಳ ಇತಿಹಾಸವಿದೆ: ಜಯಂತ್‌ನಡುಬೈಲು: ಮುಂಡೂರು ಮೃತ್ಯುಂಜಯೇಶ್ವರ ದೇವಳ 800 ವರ್ಷಗಳ ಇತಿಹಾಸವಿದೆ. ಸುಮಾರು 8 ಲಕ್ಷ ಖರ್ಚು ಮಾಡಿ ಅಷ್ಟಮಂಗಳ ನಡೆಸಲಾಗಿದೆ. ಅದರಲ್ಲಿ ಕಂಡು ಬಂದಂತೆ ಇಲ್ಲಿ ನಾಗನಕಟ್ಟೆ ಕೆಲಸ ನಡೆಯಬೇಕಿದೆ. ಅದನ್ನು ಬಿಟ್ಟು ಒಬ್ಬ ವ್ಯಕ್ತಿ ತನ್ನ ಸ್ವಪ್ರತಿಷ್ಟೆಗೋಸ್ಕರ ದೇವಸ್ಥಾನವನ್ನು, ಜನರ ನಂಬಿಕೆಯನ್ನು ಬಲಿ ಕೊಡುವುದು ಸರಿಯಲ್ಲ ಎಂದು ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಂತ್ ನಡುಬೈಲು ಹೇಳಿಸಿದರು. ಸಮಿತಿಯನ್ನು ರಚನೆ ಮಾಡದೆ, ಇಲಾಖೆಯಿಂದ ಅನುಮತಿಯನ್ನು ಪಡೆಯದೆ ಕಟ್ಟೆ ನಿರ್ಮಾಣ ಮಾಡಲು ಮುಂದಾಗಿರುವುದು ಭಕ್ತಾದಿಗಳಿಗೆ ಮಾಡಿದ ಅಪಮಾನವಾಗಿದೆ. 8 ಗ್ರಾಮಗಳ ಸೀಮೆ ದೇವಸ್ಥಾನವಾಗಿದ್ದು ಇದನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಭಕ್ತರ ಭಾವನೆಗೆ ಗೌರವ ಕೊಡುವ ಕೆಲಸವನ್ನು ಅಧ್ಯಕ್ಷರು ಮಾಡಬೇಕಿತ್ತು. ತಂತ್ರಿಗಳು, ದೈವಜ್ಞರ ಆದೇಶಕ್ಕೆ ಬೆಲೆ ಕೊಡಬೇಕಿತ್ತು ತನ್ನಿಷ್ಟದಂತೆ ಮಾಡುವುದಾದರೆ ಅಷ್ಟು ಹಣ ಖರ್ಚು ಮಾಡಿ ಪ್ರಶ್ನೆ ಇಟ್ಟದ್ದಾದರೂ ಯಾಕೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಕಟ್ಟೆಯ ನಿರ್ಮಾಣ ಕಾರ್ಯ ದೈವಜ್ಞರ ಆದೇಶದಂತೆ ನಡೆಯಬೇಕು ಇಲ್ಲವಾದರೆ ಗ್ರಾಮಸ್ಥರಿಗೆ ತೊಂದರೆಯುಂಟಾಗಬಹುದು ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಭಕ್ತರ ಭಾವನೆಗೆ ನೋವಾಗಲು ನಾವು ಬಿಡುವುದಿಲ್ಲ. ಸ್ವಪ್ರತಿಷ್ಟೆಗೆ ಕಟ್ಟೆಯನ್ನು ಬಳಸುವುದಾದರೆ ಅದನ್ನು ತಡೆಯಲು ನಾವೆಲ್ಲರೂ ಒಂದಾಗುತ್ತೇವೆ ಎಂದು ಹೇಳಿದರು. ದೇವಸ್ಥಾನದಲ್ಲಿ 13 ವರ್ಷದಿಂದ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಸುಳ್ಳು ಆರೋಪ ಮಾಡಿ ಕೆಲಸದಿಂದ ಬಿಟ್ಟಿದ್ದಾರೆ. ದೇವಳದ ಸಭಾಭವನದ ಆದಾಯ ದೇವಸ್ಥಾನಕ್ಕೆ ಹೋಗುತ್ತಿತ್ತು. ಸಭಾಭವನದಲ್ಲಿ ಪೂಜೆ ಮಾಡಲು ಅಧ್ಯಕ್ಷರು ಅವಕಾಶ ನೀಡಿಲ್ಲದ ಕಾರಣಕ್ಕೆ ಸ್ಥಳಕ್ಕೆ ಜಾಗ ಕೊಟ್ಟವರು ಕೇಸು ಮಾಡಿದ್ದಾರೆ, ಸಭಾಭವನದ ಜಾಗವನ್ನು ರಿಜಿಸ್ಟ್ರಿಯೇ ಮಾಡಿಲ್ಲ ಎಂದು ಆರೋಪಿಸಿದರು. ದೇವಸ್ಥಾನದಲ್ಲಿ ಅಧ್ಯಕ್ಷರಾದವರು ಎಲ್ಲರನ್ನೂ ಒಗ್ಗೂಡಿಸಿ ದೇವಳವನ್ನು ಅಭಿವೃದ್ದಿಯತ್ತ ಕೊಂಡೊಯ್ಯಬೇಕೇ ವಿನಾ ಸ್ವಪ್ರತಿಷ್ಟೆಯನ್ನು ದೇವರ ಮುಂದೆ ಪ್ರದರ್ಶನ ಮಾಡುವುದಲ್ಲ ಎಂದು ಹೇಳಿದರು.
ಶಾಸ್ತ್ರ ಪ್ರಕಾರ ನಿರ್ಮಾಣ ಮಾಡುತ್ತಿಲ್ಲ; ಅನಿಲ್: ನಾಗನಕಟ್ಟೆಯ ನಿರ್ಮಾಣ ಕಾರ್ಯ ಶಾಸ್ತ್ರಪ್ರಕಾರ ನಡೆದಿಲ್ಲ, ಸಂಪ್ರದಾಯಕ್ಕೆ ಅಪಮಾನ ಮಾಡಲಾಗಿದೆ. ಕಟ್ಟೆಯನ್ನು ಕ್ರಮಬದ್ದವಾಗಿ ಕಟ್ಟದೇ ಇದ್ದರೆ ಅದಕ್ಕಾಗಿ ನಾವು ಹೋರಾಟಕ್ಕೆ ಸಿದ್ದ ಎಂದು ಅನಿಲ್‌ಕುಮಾರ್ ಕಣ್ಣಾರ್‌ನೂಜಿ ಹೇಳಿದರು.
ಊರಿನವರ ಕಡೆಗಣನೆ-ಸುಂದರ ಗೌಡ: ಜಾತ್ರೋತ್ಸವ ಸಮಿತಿ ಮಾಜಿ ಅಧ್ಯಕ್ಷರಾದ ಸುಂದರ ಗೌಡ ನಡುಬೈಲು ಮಾತನಾಡಿ ಊರಿನವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕಟ್ಟೆ ನಿರ್ಮಾಣಕ್ಕೆ ಗುರುತಿಸಲಾದ ಜಾಗದಲ್ಲಿ ಮರದ ಕುತ್ತಿಯನ್ನು ಹಾಗೇ ಬಿಟ್ಟಿದ್ದಾರೆ. ವಾಸ್ತು ತಜ್ಞರ ಸಲಹೆಯಂತೆ ಕಟ್ಟೆ ನಿರ್ಮಾಣವಾಗಬೇಕು. ಭಕ್ತರ ಕರಸೇವೆಯ ಮೂಲಕ ಕಟ್ಟೆ ನಿರ್ಮಾಣವಾಗಬೇಕು ಎಂದು ಹೇಳಿದರು.
ಇಷ್ಟಬಂದಂತೆ ನಿರ್ಣಯ ಬರೆಯುತ್ತಾರೆ-ಬಾಲಚಂದ್ರ: ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಚಂದ್ರ ಮಾತನಾಡಿ ಕೇಶವರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ದೇವಳದ ನಿರ್ಣಯ ಪುಸ್ತಕ ಅಧ್ಯಕ್ಷರ ಮನೆಯಲ್ಲೇ ಇದೆ. ಅಲ್ಲಿ ತನಗೆ ಇಷ್ಟಬಂದಂತೆ ನಿರ್ಣಯ ಬರೆಯುತ್ತಾರೆ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರಲ್ಲದೆ ಗ್ರಾಮಸ್ಥರ, ಭಕ್ತಾದಿಗಳ ಸಹಕಾರದಿಂದಲೇ ದೇವಳದಲ್ಲಿ ಎಲ್ಲವೂ ನಡೆಯಬೇಕು ಎಂದು ಹೇಳಿದರು.
ಮದುವೆ ಮಾಡಲು ಬಿಡುವುದಿಲ್ಲ: ನಾರಾಯಣ ನಾಯ್ಕ: ದೇವಳದ ಸಭಾಭವನದಲ್ಲಿ ಮದುವೆ ಮಾಡಲು ನಾನು ಬಿಡುವುದಿಲ್ಲ. ನಾನು ಕೇಸು ಹಾಕಿದ್ದೇನೆ, ಸಭಾ ಭವನದಲ್ಲಿ ಪೂಜೆ ಮಾಡಲು ಅಧ್ಯಕ್ಷರು ಅನುಮತಿ ನೀಡಿಲ್ಲ, ಸಭಾ ಭವನದ ಜಾಗ ನನಗೆ ಸೇರಿದ್ದು ಅಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ ಎಂದು ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ನಾಯ್ಕ ಹೇಳಿದರು. ದೇವಳದಲ್ಲಿ ಅಧ್ಯಕ್ಷರು ದರ್ಬಾರ್ ನಡೆಸುತ್ತಿದ್ದಾರೆ, ಯಾರನ್ನೂ ಪರಿಗಣನನೆಗೆ ತೆಗೆದುಕೊಳ್ಳುತ್ತಿಲ್ಲ ಎಲ್ಲವೂ ಅವರ ಸ್ವಂತ ಇಚ್ಚೆಯ ಪ್ರಕಾರ ನಡೆಸುತ್ತಾರೆ, ಭಕ್ತರ ಭಾವನೆಗೆ ಬೆಲೆಯಿಲ್ಲ, ಗೌರವವೂ ಇಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮುಂಡೂರು ಗ್ರಾಪಂ ಅಧ್ಯಕ್ಷೆ ಪುಷ್ಪಾ ಪುರಂದರ ಗೌಡ, ಗ್ರಾಪಂ ಸದಸ್ಯರಾದ ಬಾಲಕೃಷ್ಣ ಕುರೆಮಜಲು, ಅಶೋಕ್‌ಕುಮಾರ್ ಪುತ್ತಿಲ, ನೀಲಪ್ಪ ಕುರೆಮಜಲು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಚಂದ್ರ, ದನಂಜಯ ಕಲ್ಲಮಜ, ಶ್ರೀಕಾಂತ್ ಹಿಂದಾರ್, ಸುಽರ್ ಶೆಟ್ಟಿ ನೇಸರ, ಚಂದ್ರಶೇಖರ ಕುರೆಮಜಲು, ಬಾಲಕೃಷ್ಣ ಪಿರಿಯಡ್ಕ, ಪಿರೆಸ್ಕಾಡಿಸೋಜಾ, ಸಜ್ಜನ್ ಕುಮಾರ್ ಕಣ್ಣಾರ್‌ನೂಜಿ, ಹೊನ್ನಪ್ಪ ಪೂಜಾರಿ ಕುರೆಮಜಲು, ಹರೀಶ್‌ನಾಯ್ಕ್ ಬರೆಕೋಡಿ, ಲಕ್ಷ್ಮೀಶ್ ರಾವ್ ಪುತ್ತಿಲ, ಸಂತೋಷ್ ಕೌಡಿಂಜ, ಗಣೇಶ್ ಕೋಡಿಬೈಲು, ಪುರುಷೋತ್ತಮ ಪುತ್ತಿಲ, ನಾರಾಯಣ ನಾಯ್ಕ್ ಪುಳಿಂಕೆತ್ತಡಿ, ಕೊರಗಪ್ಪ ನಾಯ್ಕ ಕಲ್ಲಮ, ಗೋಪಾಲಕೃಷ್ಣ ನಡುಬೈಲು, ಅಮೃತ್‌ರಾಜ್ ಕಲ್ಲಮ, ಅಶ್ವಿತ್ ಕಲ್ಲಮ, ಶಿವಪ್ಪ ನಾಯ್ಕ್ ಬರೆಕೋಡಿ, ಆನಂದ ನಾಯ್ಕ ನರಿಮೊಗರು, ವಿವೇಕ್ ನರಿಮೊಗರು, ಚಂದ್ರ ನಡುಬೈಲು, ರಮೇಶ್ ಟೈಲರ್, ರವಿ ಮುಕ್ವೆ, ಕೇಶವ ನರಿಮೊಗರು, ದೇರಣ್ಣ ಶೆಟ್ಟಿ ನಡುಬೈಲು, ಜನಾರ್ಧನ ಪೂಜಾರಿ ಕುರೆಮಜಲು, ಸುಬ್ಬಯ್ಯ ಶೆಟ್ಟಿ ಶೆಟ್ಟಿ ಮಜಲು, ಶೀನಶೆಟ್ಟಿ ಹಿಂದಾರು, ಪ್ರಸಾದ್ ಆಚಾರ್ಯ ಕಲ್ಲಮ ಮೊದಲಾದವರು ಉಪಸ್ಥಿತರಿದ್ದರು.